ADVERTISEMENT

ಅಬ್ಬಿಕೆರೆ ಅಭಿವೃದ್ದಿ ಕಾಮಗಾರಿ: ₹3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಪ್ರಸ್ತಾವ

ಈಡೆರದ ವಾಯುವಿಹಾರಿಗಳ ಕನಸು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:34 IST
Last Updated 20 ಸೆಪ್ಟೆಂಬರ್ 2025, 5:34 IST
<div class="paragraphs"><p>ಮುಳಗುಂದ ಸಮೀಪದ ಅಬ್ಬಿಕೆರೆಗೆ ನಿರ್ಮಿಸಿದ ಬ್ರಿಜ್‌ಗೆ ಸುರಕ್ಷಾ ಗೋಡೆ ನಿರ್ಮಿಸದೇ ಅರ್ಧಂಬರ್ದ ಕಾಮಗಾರಿ ಮಾಡಲಾಗಿದೆ</p></div>

ಮುಳಗುಂದ ಸಮೀಪದ ಅಬ್ಬಿಕೆರೆಗೆ ನಿರ್ಮಿಸಿದ ಬ್ರಿಜ್‌ಗೆ ಸುರಕ್ಷಾ ಗೋಡೆ ನಿರ್ಮಿಸದೇ ಅರ್ಧಂಬರ್ದ ಕಾಮಗಾರಿ ಮಾಡಲಾಗಿದೆ

   

ಮುಳಗುಂದ: ಪಟ್ಟಣದ ಐತಿಹಾಸಿಕ ಅಬ್ಬಿಕೆರೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೈಗೊಂಡಿದ್ದ ಅಭಿವೃದ್ದಿ ಕಾಮಗಾರಿ ಸಂಪೂರ್ಣವಾಗಿ ನೆನಗುದಿಗೆ ಬಿದ್ದಿದೆ. ವಾಯುವಿಹಾರಿಗಳ ಕನಸು ಇನ್ನೂ ಕನಸಾಗಿಯೇ ಉಳಿಯುವಂತಾಗಿದೆ.

ಸರಾಸರಿ 20 ಎಕರೆ ವಿಸ್ತೀರ್ಣ ಹೊಂದಿದ ಅಬ್ಬಿಕೆರೆಯ ಮಧ್ಯೆ ಪ್ರಾಕೃತಿಕವಾದ ನಡುಗಡ್ಡೆ ಇದೆ. ಪುರಾತನ ಹುಣಸೆ ಮರ, ಸಣ್ಣ ಪುಟ್ಟ ಗಿಡಗಂಟೆಗಳು ಬೆಳೆದು ವಿವಿಧ ಜಾತಿಯ, ಅಪರೂಪದ ವಿದೇಶಿ ಪಕ್ಷಿಗಳ ನೆಲೆಸುವ ನೆಚ್ಚಿನ ತಾಣವಾಗಿದೆ.

ADVERTISEMENT

ಹಲವು ವೈಶಿಷ್ಠಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಅಬ್ಬಿಕೆರೆಯು ಒಂದು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ. ಸಣ್ಣ ನೀರಾವರಿ ಇಲಾಖೆ ವತಿಯಿಂದ 2024 ರಲ್ಲಿ ಎರಡು ಪ್ರತ್ಯೇಕ ಯೋಜನೆಯಡಿ ಅಂದಾಜು ₹ 3 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿತ್ತು.

ಈ ಪೈಕಿ ₹1 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆ ಭಾಗದಲ್ಲಿ ಹಾಗೂ ಅನ್ನದಾನೇಶ್ವರ ದೇವಸ್ಥಾನದ ಹತ್ತಿರ ಕಾಂಕ್ರಿಟ್ ಗೋಡೆ, ಕಂಬ, ಕಬ್ಬಿಣದ ಬ್ಯಾರಿಕೇಡ್ ಹಾಗೂ ಮಣ್ಣು ಹಾಕಿ ಕಚ್ಚಾ ರಸ್ತೆ ಕಾಮಗಾರಿ ನಿರ್ವಹಿಸಲಾಗಿದ್ದು, ಸದ್ಯ ಅಪೂರ್ಣವಾಗಿದೆ. ಇನ್ನೊಂದು ಯೋಜನೆಯಡಿ ಕೆರೆ ಕೋಡಿ ಬೀಳುವ ಜಾಗದಲ್ಲಿ ನೀರಿಗೆ ಅಡ್ಡಲಾಗಿ ₹ 2 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ಬ್ರಿಜ್ ನಿರ್ಮಿಸಲಾಗಿದೆ.

ಬ್ರಿಜ್‍ಗೆ ಸುರಕ್ಷಾ ಗೋಡೆಗಳನ್ನು ನಿರ್ಮಿಸಿಲ್ಲ, ಕೆರೆ ತುಂಬಿ ಹೊರಗೆ ಹರಿಯುವ ನೀರಿಗೆ ಕಾಲುವೆ ನಿರ್ಮಿಸಿಲ್ಲ. ಕೆರೆ ತುಂಬಿ ಹರಿದರೆ ಹತ್ತಿರದ ಸಂಗನಪೇಟಿ ಓಣಿಯ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಇದೇ ಕಾಮಗಾರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಪೈಪ್ ಸೇತುವೆ ನಿರ್ಮಿಸಬೇಕಿತ್ತು. ಆದರೆ ಅದನ್ನು ಖಾಸಗಿ ಮನೆಯವರ ಸಂಚಾರಕ್ಕೆ ನಿರ್ಮಿಸಿ ಕೊಟ್ಟಿದ್ದಾರೆ ಎಂದು ಮಾಬೂಬಲಿ ದೊಡ್ಡಮನಿ ಆರೋಪಿಸಿದರು.

‘ಈಗ ಅಭಿವೃದ್ದಿ ಕೈಗೊಂಡ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಸದ್ಯಯ ನಡೆದ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ತನಿಖೆ ನಡೆಸಬೇಕು, ಕೆರೆ ಅಭಿವೃದ್ದಿಗೆ ಸಮಗ್ರ ಯೋಜನೆ ರೂಪಿಸಿ’ ಎಂದು ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ಎಸ್.ಕಣವಿ ಆಗ್ರಹಿಸಿದರು.

₹ 6 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ

ಅಬ್ಬಿಕೆರೆ ಅಭಿವೃದ್ದಿಗೆ ಕೈಗೊಂಡಿರುವ 2 ಪ್ರತ್ಯೇಕ ಯೋಜನೆಯ ಕಾಮಗಾರಿಯ ₹ 3 ಕೋಟಿ ಅನುದಾನ ಪೂರ್ಣ ವೆಚ್ಚ ಮಾಡಲಾಗಿದೆ.

ಇನ್ನುಳಿದ ಕಾಮಗಾರಿಗೆ ಅಂದಾಜು ₹ 3 ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಿದ್ದು, ಅನುಮೋದನೆಗೆ ಕಳುಹಿಸಲಾಗಿದೆ. ಖಾಸಗಿ ಮನೆ ಹತ್ತಿರ ನಿರ್ಮಿಸಿದ ಪೈಪ್ ಸೇತುವೆ ಕೆಲಸಕ್ಕೆ ಬಿಲ್ ಪಾವತಿ ಮಾಡಿಲ್ಲ. ತೆಗೆದುಹಾಕಿ, ಬಾಕ್ಸ್ ಸೇತುವೆ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಮುರಳೀಧರ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.