ಮುಂಡರಗಿ: ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ದಿಗೆ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ತಾಲ್ಲೂಕಿನ ಡಂಬಳ ಹೋಬಳಿಯ ಬಿಜೆಪಿ ಕಾರ್ಯಕರ್ತರು ಸೋಮವಾರ ಡಂಬಳ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಉಪ ತಹಶೀಲ್ದಾರ್ ಸಿ.ಕೆ.ಬೆಳವಟಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
‘ಅಹಿಂದ ಹೆಸರಿನಲ್ಲಿ ಸರ್ವ ಜನಾಂಗವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದ ಕಾಂಗ್ರೆಸ್ ಸರ್ಕಾರ ಹಿಂದುಳಿದವರನ್ನು ಸಂಪೂರ್ಣ ಕಡೆಗಣಿಸುತ್ತಿದೆ. 2023-24ನೇ ಸಾಲಿನಲ್ಲಿ ಅಂದಾಜು ₹25 ಸಾವಿರ ಕೋಟಿ ಹಣವನ್ನು ಸರ್ಕಾರ ಬೇರೆ ಯೋಜನೆಗಳಿಗೆ ಬಳಸಿಕೊಂಡಿದೆ. ಆ ಮೂಲಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ವಂಚಿಸಿದೆ’ ಎಂದು ಕಾರ್ಯಕರ್ತರು ಆರೋಪಿಸಿದರು.
‘ರಾಜ್ಯದ ಬಜೆಟ್ ಅಲ್ಪಸಂಖ್ಯಾತರಿಗೆ ಮಾತ್ರ ಅನಕೂಲವಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ಕಡೆಗಣಿಸಿದೆ. ಸರ್ಕಾರವು ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಎಷ್ಟು ಸೂಕ್ತ’ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
‘ಸರ್ಕಾರವು ಎಸ್.ಸಿ, ಎಸ್.ಟಿ ಸಮುದಾಯದ ಸಬಲೀಕರಣ, ಶಿಕ್ಷಣ, ಉದ್ಯೋಗ, ಕಲ್ಪಿಸುವ ಬದಲಾಗಿ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡಿದೆ. ಹಿಂದುಳಿದ ಸಮುದಾಯಗಳು ಹಿಂದುಳಿಯುವಂತಾಗಿದೆ’ ಎಂದು ಆರೋಪಿಸಿದರು.
‘ಸರ್ಕಾರದ ವಿರೋಧಿ ನೀತಿ ಖಂಡಿಸಿ ಬಿಜೆಪಿಯು ಸದನದಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಿದೆ. ರಾಜ್ಯದಾದ್ಯಂತ ಎಸ್.ಸಿ, ಎಸ್.ಟಿ ಸಮುದಾಯವು ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ’ ಎಂದು ಎಚ್ಚರಿಸಿದರು.
ಡಂಬಳ ಹೋಬಳಿ ಬಿಜೆಪಿ ಮುಖಂಡ ಅಂದಪ್ಪ ಹಾರೂಗೇರಿ, ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಕೆ.ಡಿ. ಬಂಡಿ, ಡಿ. ಪ್ರಸಾದ, ಈಶಪ್ಪ ರಂಗಪ್ಪನವರ, ಪಂಚಾಕ್ಷರಯ್ಯ ಹರ್ಲಾಪುರಮಠ, ಬೀರಪ್ಪ ಬಂಡಿ, ನಿಂಗಪ್ಪ ಮಾದರ, ಕುಬೇರಪ್ಪ ಬಂಡಿ, ರಾಜೇಶ ಅರಕಲ್ಲ, ಬಸವರಾಜ ಚನ್ನಳ್ಳಿ, ವೆಂಕನಗೌಡ ಪಾಟೀಲ, ಚಂದ್ರು ಯಳಮಲಿ, ಶೇಖರಯ್ಯ ಗುರವಿನ, ವಿರುಪಾಕ್ಷಿ ಯಲಿಗಾರ, ಕುಮಾರಸ್ವಾಮಿ ಹೆಬ್ಬಳ್ಳಿಮಠ, ಸೋಮಶೇಖರ ಹಿರೇಮಠ, ಲಕ್ಷ್ಮಣ ಬೂದಿಹಾಳ, ಶಿವಾನಂದ ಹರಿಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ ₹25 ಸಾವಿರ ಕೋಟಿ ಬೇರೆ ಯೋಜನೆಗೆ ಬಳಕೆ ಹಿಂದುಳಿದ ಸಮುದಾಯಕ್ಕೆ ವಂಚನೆ ಆರೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.