ADVERTISEMENT

ಕಾಲುವೆ ನಿರ್ಮಿಸಲು ಕ್ರಮ

ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ತಹಶೀಲ್ದಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 3:48 IST
Last Updated 14 ಅಕ್ಟೋಬರ್ 2020, 3:48 IST
ಮಳೆಯಿಂದ ಹಾನಿಗೊಳಗಾದ ಲಕ್ಷ್ಮೇಶ್ವರ ಸಮೀಪದ ಯಳವತ್ತಿ ಗ್ರಾಮಕ್ಕೆ ಮಂಗಳವಾರ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟರ ಭೇಟಿ ನೀಡಿ ಪರಿಶೀಲಿಸಿದರು
ಮಳೆಯಿಂದ ಹಾನಿಗೊಳಗಾದ ಲಕ್ಷ್ಮೇಶ್ವರ ಸಮೀಪದ ಯಳವತ್ತಿ ಗ್ರಾಮಕ್ಕೆ ಮಂಗಳವಾರ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟರ ಭೇಟಿ ನೀಡಿ ಪರಿಶೀಲಿಸಿದರು   

ಲಕ್ಷ್ಮೇಶ್ವರ: ಸಮೀಪದ ಯಳವತ್ತಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಪರಿಶಿಷ್ಟ ಜಾತಿಯ ಜನರು ವಾಸಿಸುವ ಪ್ರದೇಶದಲ್ಲಿ ನೀರು ನುಗ್ಗಿ ಹತ್ತಾರು ಮನೆಗಳು ಜಲಾವೃತಗೊಂಡು ಕುಸಿದು ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟರ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿಯ ಜನರು ವಾಸಿಸುವ ಪ್ರದೇಶದ ಮೇಲ್ಭಾಗದಲ್ಲಿ ನೂರಾರು ಎಕರೆ ಹೊಲಗಳಿಂದ ನೀರು ಹರಿದು ಬರುತ್ತದೆ. ಆದರೆ ಅಲ್ಲಿಂದ ಮುಂದೆ ನೀರು ಹೋಗಲು ಚರಂಡಿ ಇಲ್ಲದ ಕಾರಣ ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ಅಲ್ಲಿ ಶೀಘ್ರವೇ ಕಾಲುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪಿಡಿಒ ಪ್ರವೀಣ ಗೋಣೆಮ್ಮನವರ ಅವರಿಗೆ ಸೂಚಿಸಿದರು.

ಇನ್ನು, ಮನೆ ಕಳೆದುಕೊಂಡ ಶಿವಪುತ್ರಯ್ಯ ನರಗುಂದಮಠ, ರತ್ನವ್ವ ಮಠಪತಿ, ಫಕ್ಕೀರಯ್ಯ ಮಠಪತಿ ಅವರನ್ನು ಭೇಟಿ ಮಾಡಿ, ‘ಮನೆ ಬಿದ್ದ ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ಮಹೇಶ ಲಮಾಣಿ, ಲಕ್ಷ್ಮಣ ಲಮಾಣಿ, ಬಾಪೂಗೌಡ ಭರಮಗೌಡ್ರ, ಮೈನು ಗಮ್ಮಣ್ಣವರ, ದೇವೇಂದ್ರಪ್ಪ ಮುಳಗುಂದ, ಶರೀಫ್‍ಸಾಬ್ ಅಗಸಿಮನಿ, ಮಲ್ಲೇಶಪ್ಪ ಲಮಾಣಿ, ಮರಿಗೌಡ ನಿಂಗನಗೌಡ್ರ, ಬಸವರಾಜ ಗೋದಿ, ಶಿವು ಮೂಲಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.