ನರೇಗಲ್: ಹೋಬಳಿ ವ್ಯಾಪ್ತಿಗೆ ಒಳಪಡುವ ಹೊಸಹಳ್ಳಿ ಗ್ರಾಮದ 1ನೇ ವಾರ್ಡ್‌ನ ಪರಿಶಿಷ್ಟರ ಕಾಲೊನಿಯ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
‘ಗುಣಮಟ್ಟ ಕಾಯ್ದುಕೊಳ್ಳದೇ ಗುತ್ತಿಗೆದಾರರು ಕಾಮಗಾರಿ ಮಾಡಿರುವ ಕಾರಣ ನಿರ್ಮಾಣ ಹಂತದಲ್ಲಿಯೇ ತಂಪು ಹಿಡಿಯುತ್ತಿದೆ. 2023 ರಲ್ಲಿ ಆರಂಭವಾಗಿರುವ ಕಾಮಗಾರಿ ಒಂದೂವರೆ ವರ್ಷವಾದರೂ ಪೂರ್ಣಗೊಂಡಿಲ್ಲ. ಸ್ವಲ್ಪ ಮಳೆ ಬಂದರೆ ಸಾಕು ಕಾಂಕ್ರೀಟ್ ಸ್ಲ್ಯಾಬ್ ನಾಲ್ಕೈದು ಕಡೆಗಳಲ್ಲಿ ಸೋರುತ್ತಿದೆ. ಮಳೆಗಾಲದ ಆರಂಭದಿಂದ ಇಲ್ಲಿಯವರೆಗೆ ಬಿದ್ದ ಮಳೆ ನೀರು ಇಂಗಿರುವ ಕಟ್ಟಡ ಶಿಥಿಲವಾಗಿದೆ. ಮುಂದೊಂದು ದಿನ ಕುಸಿಯಬಹುದು’ ಎಂದು ಸ್ಥಳೀಯರು ಆರೋಪಿಸಿದರು.
‘ಕಟ್ಟಡದ ಸ್ಲ್ಯಾಬ್ ಸೋರುವ ಕುರಿತು ಹಾಗೂ ಗೋಡೆಗಳು ಗುಣಮಟ್ಟ ಕಳೆದುಕೊಳ್ಳುತ್ತಿರುವ ಕುರಿತು ಗುತ್ತಿಗೆದಾರರಿಗೆ ದೂರವಾಣ ಮಾಡಿ ಮಾಹಿತಿ ನೀಡಿದರು ಸಹ ಒಂದು ದಿನವೂ ಬಂದು ಪರಿಶೀಲನೆ ಮಾಡುತ್ತಿಲ್ಲ. ಆರಂಭದಲ್ಲಿ ಆಗಾಗ ಬರುತ್ತಿದ್ದ ಗುತ್ತಿಗೆದಾರರು ಸ್ಲ್ಯಾಬ್ ಹಾಕಿದ ನಂತರ ಈ ಕಡೆ ಬಂದೇ ಇಲ್ಲ. ಪರಿಶಿಷ್ಟರ ಕಾಲೊನಿಯಿಂದ ಎಲ್ಲ ರೀತಿಯ ಸಹಕಾರ ನೀಡಿದರು ಸಹ ನಿರ್ಲಕ್ಷ್ಯಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪರಿಶಿಷ್ಟ ಸಮುದಾಯದ ಯುವ ಮುಖಂಡ ರೋಣಪ್ಪ ಮಾದರ ಹೇಳಿದರು.
ಕಾಮಗಾರಿ ಆರಂಭವಾದಾಗಿನಿಂದಲೂ ಸಿಮೆಂಟ್, ಮರಳು, ಕಬ್ಬಿಣ ಸೇರಿದಂತೆ ಕಟ್ಟಡದ ಪ್ರತಿಯೊಂದು ಸಾಮಗ್ರಿ ಕಳಪೆಯಾಗಿದೆ. ಪರಿಶಿಷ್ಟರ ಕಾಲೊನಿಯಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ ಆಗುತ್ತಿದೆ. ಈಗಲೇ ಕಾಮಗಾರಿ ಸರಿಪಡಿಸಲು ಮುಂದಾಗಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ’ ಎಂದು ಸ್ಥಳೀಯ ನಿವಾಸಿಗಳಾದ ದ್ಯಾಮಣ್ಣ ಕನಕಪ್ಪ ಮಾದರ, ಚಂದ್ರು ಮಾದರ, ಹನಮಂತ ಮಾದರ, ಬಸವರಾಜ ಯಮನಪ್ಪ ಮಾದರ, ಫಕೀರಪ್ಪ ಮಾದರ ಎಚ್ಚರಿಕೆ ನೀಡಿದರು.
ಕಾಮಗಾರಿಯು ಸಂಪೂರ್ಣ ಕಳಪೆಯಾಗಿರುವ ಕಾರಣ ಸ್ಲ್ಯಾಬ್ ಸೋರುತ್ತಿದೆ. ಈ ಕುರಿತು ಎಷ್ಟೇ ಮಾಹಿತಿ ನೀಡಿದರು ಸಹ ಗುತ್ತಿಗೆದಾರರು ಕಟ್ಟಡದ ಕಡೆಗೆ ಬರುತ್ತಿಲ್ಲ ಹಾಗೂ ಸ್ಪಂದಿಸುತ್ತಿಲ್ಲರೋಣಪ್ಪ ಮಾದರ, ಸ್ಥಳೀಯ
‘ಪೂರ್ಣ ಅನುದಾನ ಬರದೇ ಸಮಸ್ಯೆ’
‘₹ 10 ಲಕ್ಷ ಮೊತ್ತದ ಕಾಮಗಾರಿಯಾಗಿದ್ದು ಕೇವಲ ₹ 3 ಲಕ್ಷ ಮಾತ್ರ ಅನುದಾನ ಬಂದಿದೆ. ಸರಿಯಾಗಿ ಹಣ ಬಿಡುಗಡೆಯಾಗಿರಲಿಲ್ಲ ಹೀಗಾಗಿ ನಾವೇ ಕೈಯಿಂದ ಹಣ ಹಾಕಿ ಇಲ್ಲಿಯವರೆಗೆ ಕೆಲಸ ಮಾಡಿದ್ದೇವೆ. ಗುಣಮಟ್ಟ ಕಾಪಾಡಿಕೊಂಡೇ ಕೆಲಸ ಮಾಡಿದ್ದೇವೆ. ಈಗಾಗಲೇ ಸ್ಲ್ಯಾಬ್ ಹಾಕುವ ಕೆಲಸ ಪೂರ್ಣಗೊಳಿಸಿದ್ದೇವೆ. ಸ್ಲ್ಯಾಬ್ ಹಾಕಿದ ನಂತರ ಮೇಲ್ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ವಂಡ್ ಒಡೆದಿಲ್ಲ. ಹೀಗಾಗಿ ಮಳೆ ನೀರಿಗೆ ಸೋರುತ್ತಿರಬಹುದು. ಅದನ್ನು ಒಡೆದರೆ ತಂಪು ಹಿಡಿಯುವುದು ಸೋರುವುದು ಸರಿಯಾಗುತ್ತದೆ. ಇನ್ನೂ ನಮ್ಮ ಕೆಲಸ ಪೂರ್ಣವಾಗಿ ಮುಗಿದಿಲ್ಲ ಪ್ಲಾಸ್ಟರ್ ಕೆಲಸ ಬಾಕಿಯಿದೆ. ಕಾಮಗಾರಿ ಮುಗಿಯುವುದರ ಒಳಗೆ ಭವನದ ಎಲ್ಲ ಕೆಲಸಗಳನ್ನು ಸರಿಮಾಡಿಕೊಡುತ್ತೇವೆ’ ಎಂದು ಹೊಸಹಳ್ಳಿಯ ಬಿ. ಆರ್. ಅಂಬೇಡ್ಕರ್ ಭವನದ ಕಾಮಗಾರಿ ಮಾಡುತ್ತಿರುವ ನಿರ್ಮಿತಿ ಕೇಂದ್ರದ ಗುತ್ತಿಗೆದಾರ ರವಿ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಭವನದ ನಿರ್ಮಾಣ ವೇಳೆ ಅಲ್ಲಿಯ ಕಮಿಟಿಯವರು ಮುಂದೆ ನಿಂತು ಸ್ಲ್ಯಾಬ್ ಹಾಕಿಸಿದ್ದಾರೆ. ಅವರೆಲ್ಲ ಹೇಗೆ ಹೇಳಿದ್ದಾರೋ ಹಾಗೆಯೇ ಗುಣಮಟ್ಟದ ಕೆಲಸ ಮಾಡಿಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಕಟ್ಟಡ ಎಲ್ಲಿಯೂ ಸೋರದಂತೆ ವಾಟರ್ ಪ್ರೂಫ್ ಮಾಡಿಕೊಡುತ್ತೇವೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.