ಮುಂಡರಗಿ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಆನಂದಗೌಡ ಪಾಟೀಲ ಸಂವಾದ ನಡೆಸಿದರು
ಮುಂಡರಗಿ: ತಾಲ್ಲೂಕಿನ ಹಿಂದುಳಿದ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಸುವುದು, ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪಟ್ಟಣದ ಸಮಾಜ ಸೇವಕ ಆನಂದಗೌಡ ಪಾಟೀಲ ಅವರು ಎಲ್ಲರ ಮನ ಗೆದ್ದಿದ್ದಾರೆ.
ಮೂಲತಃ ಸುಸಂಸ್ಕೃತ ಮಧ್ಯಮ ಕುಟುಂಬದಿಂದ ಬಂದಿರುವ ಆನಂದಗೌಡ ಪಾಟೀಲ ಅವರು ತಂದೆ ಹನುಮಂತಗೌಡ ತಾಯಿ ಕಮಲಮ್ಮನ ಅವರಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಸಮಾಜ ಸೇವೆಗಾಗಿಯೇ ಆನಂದಗೌಡ ಹಾಗೂ ಅವರ ಸಹೋದರರು ಎಚ್.ಎಸ್. ಪಾಟೀಲ ಪ್ರತಿಷ್ಠಾನ ಸ್ಥಾಪಿಸಿದ್ದು, ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.
ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಶಾಲೆಗೆ ಬಣ್ಣ ಬಳಿಸುವಂತೆ ಸ್ವ ಇಚ್ಛೆಯಿಂದ ₹1.50 ಲಕ್ಷ ಹಣ ನೀಡಿದ್ದಾರೆ. ಅದೇ ರೀತಿ ತಾಲ್ಲೂಕಿನ ಕಲಕೇರಿ ಗ್ರಾಮದ ಸರ್ಕಾರಿ ಶಾಲೆಗೆ ಬಣ್ಣ ಬಳಿಯಲು ₹1 ಲಕ್ಷ ನೀಡಿದ್ದಾರೆ. ತಾಲ್ಲೂಕಿನ ಬಸಾಪುರ ಹಾಗೂ ಮತ್ತಿತರ ಹಲವು ಶಾಲೆಗಳಿಗೆ ಸುಣ್ಣ ಬಳಿಸಿಕೊಡುವ ಭರವಸೆ ನೀಡಿದ್ದಾರೆ.
ಪಟ್ಟಣದ ಎಸ್.ಎಂ. ಭೂಮರಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ₹1.65 ಲಕ್ಷ ವೆಚ್ಚದಲ್ಲಿ ವನಗಂಗ(ಬಯಲು ರಂಗ ಮಂದಿರ), ಕೈತೊಳೆಯುವ ಮನೆ ಹಾಗೂ ಉದ್ಯಾನ ನಿರ್ಮಿಸಿಕೊಟ್ಟಿದ್ದು, ತಾಲ್ಲೂಕಿನ ಬಸಾಪುರ, ರಾಮೇನಹಳ್ಳಿ, ಬೂದಿಹಾಳ, ಕಲಕೇರಿ, ಬಾಗೇವಾಡಿ ಗ್ರಾಮಗಳ ಸಾವಿರಾರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು ₹3 ಲಕ್ಷ ಮೌಲ್ಯದ ಸಮವಸ್ತ್ರಗಳನ್ನು ಉಚಿತವಾಗಿ ನೀಡಿದ್ದಾರೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳುವ ಕ್ರೀಡಾಕೂಟ, ನಾಟಕ, ಜಾತ್ರೆ ಮೊದಲಾದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ನೆರವು ನೀಡುತ್ತಿದ್ದು, ಆರ್ಥಿಕವಾಗಿ ದುರ್ಬಲರಾದವರಿಗೆ ತಮ್ಮ ಕೈಲಾದಷ್ಟು ನೆರವು ನೀಡುತ್ತಾರೆ. ಆನಂದಗೌಡರ ನಿಸ್ವಾರ್ಥ ಸೇವೆ ಗುಣ ಅರಿತ ತಾಲ್ಲೂಕಿನ ಹಲವು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ತಮ್ಮ ಶಾಲೆಗೂ ಬಣ್ಣ ಬಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಯಾವುದೇ ಫಲಾಪೇಕ್ಷೆ ಇಲ್ಲದೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೈಜೋಡಿಸುವ ಮೂಲಕ ಆನಂದಗೌಡ ಪಾಟೀಲ ಇತರರಿಗೆ ಮಾದರಿಯಾಗಿದ್ದಾರೆಗಂಗಾಧರ ಅಣ್ಣಿಗೇರಿ, ಬಿಇಒ ಮುಂಡರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.