
ಗದಗ: ‘ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಪ್ರಮುಖ ಆಡಚಣೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.
ಕರ್ನಾಟಕ ಲೋಕಾಯುಕ್ತ ಗದಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ ನಡೆದ ‘ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸರ್ಕಾರಿ ವ್ಯವಸ್ಥೆಯಲ್ಲಿ ಎಲ್ಲರೂ ಭ್ರಷ್ಟರಲ್ಲ; ಒಳ್ಳೆಯವರೂ ಇರುತ್ತಾರೆ. ಸರ್ಕಾರದಿಂದ ವೇತನ ಪಡೆಯುವವರು ಕೆಲಸದಲ್ಲಿ ವಿಳಂಬ ಮಾಡಿದರೆ, ಕೆಲಸ ಮಾಡಿ ಕೊಡಲು ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಅದಕ್ಕೆ ಸೂಕ್ತ ದಾಖಲೆಗಳು ಹಾಗೂ ಸಾಕ್ಷಿಗಳನ್ನು ಕೂಡ ಒದಗಿಸಬೇಕು. ಇದರಿಂದ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ. ದೂರುದಾರರಿಗೆ ಕಾನೂನಿನಲ್ಲಿ ಭದ್ರತೆ ಸಿಗುತ್ತದೆ. ಜತೆಗೆ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ’ ಎಂದರು.
‘ಮಹಿಳೆಯರು ಮತ್ತು ವೃದ್ದರಿಗೆ ನ್ಯಾಯಾಲಯದಲ್ಲಿ ಉಚಿತವಾಗಿ ವಕೀಲರ ಸೇವೆ ಒದಗಿಸಲಾಗುತ್ತಿದ್ದು, ಅರ್ಹರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬೇಕು’ ಎಂದರು.
ಕರ್ನಾಟಕ ಲೋಕಾಯುಕ್ತ ಗದಗ ಜಿಲ್ಲಾ ಡಿವೈಎಸ್‌ಪಿ ವಿಜಯ್ ಬಿರಾದಾರ ಮಾತನಾಡಿ, ‘ಉತಾರ, ಇ-ಸ್ವತ್ತು, ಅಂಗಡಿ ಪರವಾನಗಿ, ಉದ್ಯಮಗಳ ಪರವಾನಗಿ ಸೇರಿದಂತೆ ಇತರೆ ಕಾಗದ ಪತ್ರಗಳನ್ನು ಪಡೆಯಲು ಸಾರ್ವಜನಿಕರು ಮೊದಲು ಸಕಾಲದಲ್ಲಿ ಆಯಾ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿದಲ್ಲಿ ಎರಡನೇ ಅರ್ಜಿ ಸಲ್ಲಿಸಿ ಅವರಿಂದ ಸ್ವೀಕೃತಿ ಪಡೆಯಬೇಕು. ಆಗಲೂ, ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಬೇಕು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾತನಾಡಿ, ‘ತಂತ್ರಜ್ಞಾನ ಬೆಳೆದಂತೆ ಜನರ ಜೀವನಮಟ್ಟ ಕೂಡ ಸುಧಾರಣೆಯಾಗಿದೆ. ಆದರೆ, ದೇಶದಲ್ಲಿ ಭ್ರಷ್ಟಾಚಾರ ಎಂಬುದು ಸಂಪೂರ್ಣವಾಗಿ ನಾಶವಾಗಬೇಕು. ಯಾವುದೇ ಇಲಾಖೆಯಲ್ಲಿ ಕೆಲಸ ಆಗದೇ ಇದ್ದ ಸಂದರ್ಭದಲ್ಲಿ ಮತ್ತು ಕೆಲಸ ಮಾಡಿಕೊಡಲು ಸತಾಯಿಸಿದಲ್ಲಿ, ಹಣಕ್ಕೆ ಬೇಡಿಕೆ ಇಟ್ಟಲ್ಲಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಬೇಕು’ ಎಂದರು.
ಲೋಕಾಯುಕ್ತ ಕಚೇರಿಯ ಅಧಿಕಾರಿ ಪರಮೇಶ್ವರ ಜಿ.ಕವಟಗಿ, ಎಸ್.ಎಸ್.ತೇಲಿ, ಪೊಲೀಸ್ ಇನ್‌ಸ್ಪೆಕ್ಟರ್ ಯು.ಎನ್.ಸಂಗನಾಳ, ನೀಲಕಂಠಪ್ಪ ಪಿ. ಅಂಬಿಗೇರ, ಮಂಜುನಾಥ ಎಸ್., ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಗದಗ ಬೆಟಗೇರಿ ಅವಳಿ ನಗರದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಮಹಿಳಾ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಜಯದೇವ ಎಂ. ಮೆಣಸಗಿ ವಂದಿಸಿದರು.
ಲಂಚ ತೆಗೆದುಕೊಳ್ಳುವುದು ಎಷ್ಟು ತಪ್ಪೋ; ಲಂಚ ಕೊಡುವುದು ಸಹ ತಪ್ಪು. ಗದಗ ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಸಹಕರಿಸಬೇಕುಸಿ.ಎಸ್. ಶಿವನಗೌಡ್ರ ನ್ಯಾಯಾಧೀಶ
2011ರಲ್ಲಿ ಕೆಜಿಎಸ್ ಕಾನೂನು ಜಾರಿಗೆ ಬಂದಿದ್ದು ಇಂತಹ ಕೆಲಸ ಇಷ್ಟೇ ದಿನಗಳಲ್ಲಿ ಆಗಬೇಕು ಎಂಬ ಕಾನೂನು ಇದೆ. ದೂರು ದಾಖಲಿಸಲು ಯಾರೂ ಭಯಪಡುವ ಅವಶ್ಯಕತೆ ಇಲ್ಲವಿಜಯ್ ಬಿರಾದಾರ ಗದಗ ಡಿವೈಎಸ್‌ಪಿ ಲೋಕಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.