ADVERTISEMENT

ಗದಗ: ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ

ಅಮಾನತಿನಲ್ಲಿರುವ ಜೈಲು ವಾರ್ಡನ್‌ ಶ್ರೀಕಾಂತನೇ ಕಿಂಗ್‌ಪಿನ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 16:08 IST
Last Updated 10 ಸೆಪ್ಟೆಂಬರ್ 2024, 16:08 IST
ಗದಗ ಜಿಲ್ಲಾ ಪೊಲೀಸರು ಅಂತರ ಜಿಲ್ಲಾ ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ ಮತ್ತು ವಾಹನಗಳನ್ನು ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರದರ್ಶಿಸಿದರು
ಗದಗ ಜಿಲ್ಲಾ ಪೊಲೀಸರು ಅಂತರ ಜಿಲ್ಲಾ ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ ಮತ್ತು ವಾಹನಗಳನ್ನು ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರದರ್ಶಿಸಿದರು   

ಗದಗ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣ ಕದಿಯುತ್ತಿದ್ದ ಅಂತರ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿರುವ ಲಕ್ಷ್ಮೇಶ್ವರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ₹ 46.22 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಣೆಬೆನ್ನೂರಿನ ಪ್ರಸಾದ (28), ಪ್ರದೀಪ್‌ (24) ಮತ್ತು ಶ್ರೀಕಾಂತ (29) ಬಂಧಿತರು.

ದೇವಸ್ಥಾನಗಳನ್ನು ಗುರುತಿಸಿ, ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ ಆರೋಪಿ ಶ್ರೀಕಾಂತ ಜೈಲಿನ ವಾರ್ಡನ್‌ ಆಗಿದ್ದು, ಸದ್ಯ ಅಮಾನತಿನಲ್ಲಿದ್ದಾನೆ. ಜೈಲಿನಲ್ಲಿ ವಾರ್ಡನ್‌ ಆಗಿದ್ದಾಗ ಕಳ್ಳರನ್ನು ಪರಿಚಯಿಸಿಕೊಂಡು ಗದಗ, ವಿಜಯನಗರ, ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ದೇವಸ್ಥಾನದಲ್ಲಿ ಕಳವು ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ADVERTISEMENT

ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅವರು ಶಿರಹಟ್ಟಿಯ ಅಂಬಾಭವಾನಿ ದೇವಸ್ಥಾನ, ಬನ್ನಿಕೊಪ್ಪದ ದುರ್ಗಾದೇವಿ ದೇವಸ್ಥಾನ, ಹಾವೇರಿಯ ಗುತ್ತಲ ಗ್ರಾಮದ ಹೇಮಗಿರಿ ಚನ್ನಬಸವೇಶ್ವರ ಮಠ, ನೀರಲಗಿ ಗ್ರಾಮದೇವತೆ ದೇವಸ್ಥಾನ, ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಬನಶಂಕರಿ ದೇವಿ ದೇವಸ್ಥಾನ, ಹೊಸದುರ್ಗ ತಾಲ್ಲೂಕಿನ ಗೂಳಿ ಹೊಸಳ್ಳಿ ಗ್ರಾಮದ ಹಾಲು ರಾಮೇಶ್ವರ ಗಂಗಮ್ಮ ದೇವಸ್ಥಾನದಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜತೆಗೆ ಲಕ್ಷ್ಮೇಶ್ವರ, ಶಿಗ್ಲಿ, ಗದಗ ಶಹರ, ವಿಜಯನಗರ ಜಿಲ್ಲೆಯ ಕೊಟ್ಟೂರು, ಹರಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಸರಗಳವು ಕೂಡ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕಳವು ಮಾಡಿದ ಚಿನ್ನಾಭರಣ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಪ್ರಕರಣದ ಎ1, ಎ2 ಆರೋಪಿಗಳ ಅಣ್ಣನಾದ ರಾಮು ಎಂಬುವನನ್ನು ಪ್ರಸಾದ ಮತ್ತು ಶ್ರೀಕಾಂತ ಸೇರಿ ಕೊಲೆ ಮಾಡಿ, ಮುಚ್ಚಿ ಹಾಕಿರುವುದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಲಕ್ಷ್ಮೇಶ್ವರ ಪೊಲೀಸರು ಶಹರದಲ್ಲಿ ನಡೆದ ಕಳವಿಗೆ ಸಂಬಂಧಿಸಿ ಸಿಸಿಟಿವಿ ದೃಶ್ಯಾವಳಿ ಬೆನ್ನತ್ತಿದಾಗ ಕಳ್ಳರ ಸುಳಿವು ಸಿಕ್ಕಿದೆ. ಅವರನ್ನು ಬಂಧಿಸಿ ವಿಚಾರಣೆ ಮಾಡಿದಾಗ ದೇವಸ್ಥಾನಗಳಲ್ಲಿಯ ಕಳವು ಹಾಗೂ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅಂತರ ಜಿಲ್ಲಾ ಕಳ್ಳರ ಬಂಧನದಿಂದ ಒಟ್ಟು 15 ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗಿದೆ’ ಎಂದು ಪ್ರಭಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾಹಿತಿ ನೀಡಿದರು.

ಲಕ್ಷ್ಮೇಶ್ವರ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯ ಚುರುಕಿನ ಕಾರ್ಯಾಚರಣೆಗೆ ಮೆಚ್ಚಿ ಬೆಳಗಾವಿ ಉತ್ತರ ವಲಯ ಪೊಲೀಸ್‌ ಮಹಾನಿರೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ ಎಂದು ತಿಳಿಸಿದರು.

ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ, ಲಕ್ಷ್ಮೇಶ್ವರ ಪಿಎಸ್‌ಐ ಈರಪ್ಪ ರಿತ್ತಿ, ಮಾರುತಿ ಎಸ್‌.ಜೋಗದಂಡಕರ್‌, ಶೇಖರ ಕಡುಬಿನ, ಎನ್‌.ಎ.ಮೌಲ್ವಿ, ಹಾಗೂ ಸಿಬ್ಬಂದಿಯಾದ ಮಹಾವೀರ ಸದರನ್ನವರ, ಗುರು ಬೂದಿಹಾಳ, ಸಂಜು ಕೊರಡೂರ, ಆನಂದಸಿಂಗ್‌ ದೊಡ್ಡಮನಿ, ಆರ್‌.ಎಸ್.ಯರಗಟ್ಟಿ, ಎಂ.ಎ.ಶೇಖ, ಪಿ.ಡಿ.ಮ್ಯಾಗೇರಿ, ಎಂ.ಎಸ್‌.ಬಳ್ಳಾರಿ, ಆನಂದ ಕಮ್ಮಾರ, ಸಿ.ಎಸ್‌.ಮಠಪತಿ, ಡಿ.ಎಸ್‌.ನದಾಫ್‌, ಎಚ್‌.ಐ.ಕಲ್ಲಣ್ಣವರ, ಪಾಂಡುರಂಗರಾವ್‌, ಪಿ.ಎಂ.ತೋರಾತ್‌, ಹನಮಂತ ದೊಡ್ಡಮನಿ, ಆರ್‌.ಎಚ್‌.ಮುಲ್ಲಾ, ಸೋಮು ರಾಮಗೇರಿ, ಬಸವರಾಜ ಮುಳಗುಂದ, ಮಧುಚಂದ್ರ ಧಾರವಾಡ, ನಿಂಗರಾಜ ಗಾಣಿಗೇರ, ಸುರೇಶ ಲಮಾಣಿ, ಸೋಮು ವಾಲ್ಮೀಕಿ, ನಂದಯ್ಯ ಮಠಪತಿ, ಅಪ್ಪಣ್ಣ ರಾಠೋಡ, ಹನಮರಡ್ಡಿ ತಾಲ್ಲಿಕೊಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.