
ಮುಂಡರಗಿ: ಬಡವರು, ಕೂಲಿ ಕಾರ್ಮಿಕರಿಗೆ ಆಶ್ರಯ ಮನೆ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೊರವಲಯದಲ್ಲಿ ಆಶ್ರಯ ಮನೆ ವಿತರಣೆಗೆ ಉದ್ದೇಶಿಸಿ ಕಳೆದ 8 ವರ್ಷಗಳ ಹಿಂದೆ 25 ಎಕರೆ ಜಮೀನು ಖರೀದಿಸಲಾಗಿದ್ದು, ಇದುವರೆಗೂ ಆಾ್ರಯ ಮನೆ ನಿರ್ಮಿಸದೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಆಶ್ರಯ ಮನೆ ವಿತರಿಸದ ಕಾರಣ ಬಡವರು, ಕೂಲಿ ಕಾರ್ಮಿಕರು ಬೀದಿಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಬಡ ಜನರು ಸಣ್ಣಪುಟ್ಟ ಗುಡಿಸಲು ಅಥವಾ ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದರು.
ಪುರಸಭೆ ಆಶ್ರಯ ಮನೆ ಕುರಿತು ಹಲವು ಬಾರಿ ಸಾರ್ವಜನಿಕರಿಂದ ಅರ್ಜಿ ಪಡೆದುಕೊಂಡಿದೆ. ಇದುವರೆಗೂ ಒಂದು ಮನೆ ವಿತರಿಸಿಲ್ಲ. ಪುರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಕೂಡಲೇ ಆಶ್ರಯ ಮನೆ ವಿತರಿಸಬೇಕು. ಇಲ್ಲದಿದ್ದರೆ ಪುರಸಭೆ ಎದುರು ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ತಾಲ್ಲೂಕು ಘಟಕ ಅಧ್ಯಕ್ಷ ಮುತ್ತಣ್ಣ ಬಳ್ಳಾರಿ, ರಾಮನಗೌಡ ಹಳೆಮನೆ, ಪ್ರವೀಣ ಚಿಕ್ಕಣ್ಣವರ, ದೇವರಾಜ ಹಂದ್ರಾಳ, ಕಿರಣ ದಂಡಿನ, ಪ್ರಶಾಂತ ದೊಣ್ಣೆ, ಸಂದೀಪ ಹಟ್ಟಿ, ಮಲ್ಲಪ್ಪ ಹಂದ್ರಾಳ, ಸೋಮಶೇಖರ ಬಳ್ಳಾರಿ, ಜಮೀರ್ ಜಿಗೇರಿ, ಮಾರುತಿ ಬಳ್ಳಾರಿ, ಅಂದಪ್ಪ ಬಿನ್ನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.