ADVERTISEMENT

ಆಯುರ್ವೇದ ಔಷಧಿ; ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್‌!

2024–25ನೇ ಸಾಲಿನಲ್ಲಿ ಆಯುಷ್‌ ಆಸ್ಪತ್ರೆಗಳಿಗೆ ಔಷಧ ದ್ರವ್ಯಗಳ ಸರಬರಾಜು

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 24 ಡಿಸೆಂಬರ್ 2025, 2:48 IST
Last Updated 24 ಡಿಸೆಂಬರ್ 2025, 2:48 IST
ಬೆಂಗಳೂರಿನ ಸರ್ಕಾರಿ ಔಷಧಿ ಪ್ರಯೋಗಾಲಯದ ವರದಿ
ಬೆಂಗಳೂರಿನ ಸರ್ಕಾರಿ ಔಷಧಿ ಪ್ರಯೋಗಾಲಯದ ವರದಿ   

ಗದಗ: 2024–25ನೇ ಸಾಲಿನಲ್ಲಿ ಆಯುಷ್‌ ಆಸ್ಪತ್ರೆಗಳಿಗೆ ಸರಬರಾಜಾಗಿರುವ ಕೆಲವು ಔಷಧಿಗಳು ಬಳಕೆಗೆ ಯೋಗ್ಯವಲ್ಲ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಗದಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಧ್ಯಪ್ರದೇಶದ ಜಮ್ನಾ ಹರ್ಬಲ್‌ ರೀಸರ್ಚ್‌ ಲಿ., ನವದೆಹಲಿಯ ರೋನ್ಪಾಲ್‌ ಬಯೋಟೆಕ್‌ ಪ್ರೈವೇಟ್‌ ಲಿ., ಭೂಷಣ್‌ ಫಾರ್ಮಾಸ್ಯುಟಿಕಲ್ಸ್‌ ಲಿ. ಕಂಪನಿಗಳು ಪೂರೈಕೆ ಮಾಡಿದ್ದ ಕೆಲವು ಔಷಧಿಗಳನ್ನು ಇದೇ ವರ್ಷದ ಮೇ ಮತ್ತು ಜೂನ್‌ನಲ್ಲಿ ಬೆಂಗಳೂರಿನ ಸರ್ಕಾರಿ ಔಷಧಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ.

ಈ ಪೈಕಿ ಜಮ್ನಾ ಹರ್ಬಲ್‌ ರೀಸರ್ಚ್‌ ಲಿ. ಹಾಗೂ ರೋನ್ಪಾಲ್‌ ಬಯೋಟೆಕ್‌ ಪ್ರೈವೇಟ್‌ ಲಿ.ನವರು ಗದಗ ಜಿಲ್ಲೆಯ ಆಯುಷ್‌ ಆಸ್ಪತ್ರೆಗೆ ಪೂರೈಕೆ ಮಾಡಿದ್ದ ಅಮೃತರಿಶ್ತಾ, ಚಂದನಸವ್‌, ದ್ರಾಕ್ಷಾರಿಶ್ತಾ, ಅಜ್ಮೋದಾದಿ ಚೂರ್ಣ, ತ್ರಿಕಾಟು ಚೂರ್ಣ, ಸೌಭಾಗ್ಯ ಶುಂಠಿ ಪಾಕ, ಇಂದುಕಾಂತ ಗ್ರಿತಾ ಔಷಧಿ ದ್ರವ್ಯಗಳು ಸೇರಿವೆ.

ADVERTISEMENT

ಈ ಔಷಧಿ ದ್ರವ್ಯಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದ ತಜ್ಞರು ‘ನಾಟ್‌ ಆಫ್‌ ಸ್ಟ್ಯಾಂಡರ್ಡ್‌ ಕ್ವಾಲಿಟಿ’ (ಎನ್‌ಎಸ್‌ಕ್ಯು) ಹಾಗೂ ‘ನೋ ಒಪಿನಿಯನ್‌’ ಎಂದು ಷರಾ ಬರೆದಿದ್ದಾರೆ. ಜತೆಗೆ ಈ ಔಷಧಿ ದ್ರವ್ಯಗಳನ್ನು ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ವಿತರಿಸದಂತೆ ಆಯುಷ್‌ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಮಿಷನ್‌ ವ್ಯವಹಾರದ ಆಡಿಯೊ ವೈರಲ್‌:

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಆಡಿಯೊ ಒಂದರಿಂದ ಗದಗ ಜಿಲ್ಲಾ ಆಯುಷ್‌ ಇಲಾಖೆಯ ಔಷಧಿ ಖರೀದಿಯಲ್ಲಿನ ಭ್ರಷ್ಟಾಚಾರ ಬಯಲಾಗಿತ್ತು.

ಗದಗ ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಜಯಪಾಲ್‌ ಸಿಂಗ್‌ ಮತ್ತು ಟೆಂಡರ್‌ ಹಾಕಿದ ಸಂಸ್ಥೆಯ ಪ್ರತಿನಿಧಿ ಚೌಕಾಸಿ ನಡೆಸಿದ್ದಾರೆ ಎನ್ನಲಾದ 23 ನಿಮಿಷದ ಕಮಿಷನ್‌ ವ್ಯವಹಾರದ ಆಡಿಯೊ ಅಧಿಕಾರಿಗಳ ಹಣದ ದಾಹವನ್ನು ತೆರೆದಿಟ್ಟಿತ್ತು.

ಜನರಿಗೆ ಏನಾದರೂ ತೊಂದರೆ ಇಲ್ಲ, ಔಷಧ ಹೇಗೆ ಇದ್ದರೂ ಪರವಾಗಿಲ್ಲ ಎಂಬ ಮನಸ್ಥಿತಿಯಲ್ಲಿ ಮಾತನಾಡಿದ್ದ ಅಧಿಕಾರಿ, ಟೆಂಡರ್‌ ಕೊಡಿಸಲು ಶೇ 30 ಪರ್ಸೆಂಟ್‌ ಕಮಿಷನ್‌ಗೆ ಬೇಡಿಕೆ ಇಟ್ಟ ವಿವರಗಳಿದ್ದವು. ಈ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಡಾ. ಜಯಪಾಲ್‌ಸಿಂಗ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದನ್ನು ಸ್ಮರಿಸಬಹುದು.

ಕಮಿಷನ್‌ ಆಸೆಗೆ ಕಳಪೆ ಗುಣಮಟ್ಟದ ಔಷಧಿ ಖರೀದಿಸಿ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದಲೇ ವಜಾಗೊಳಿಸಬೇಕು. ಔಷಧ ಖರೀದಿಯಲ್ಲಿ ಸರ್ಕಾರ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಬೇಕು.
ವಿಶ್ವನಾಥ ಖಾನಾಪುರ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.