ADVERTISEMENT

‘ಸತ್ವಯುತ ಚಿಂತನೆಗಳಿಂದ ಬದುಕು ಗಟ್ಟಿ’

ಚಿಕೇನಕೊಪ್ಪದ ಚನ್ನವೀರ ಶರಣರ 28ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:44 IST
Last Updated 30 ಜನವರಿ 2023, 4:44 IST
ಗದಗ ತಾಲ್ಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ನಡೆದ ಧರ್ಮಚಿಂತನ ಗೋಷ್ಠಿಯಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು
ಗದಗ ತಾಲ್ಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ನಡೆದ ಧರ್ಮಚಿಂತನ ಗೋಷ್ಠಿಯಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು   

ಗದಗ: ‘12ನೇ ಶತಮಾನದಲ್ಲಿ ಅಂತರ್ಜಾಲ, ಸಮೂಹ ಮಾಧ್ಯಮಗಳು ಇರಲಿಲ್ಲ. ಆದಾಗ್ಯೂ ಸಹ ಜನರೆಲ್ಲರೂ ಕಲ್ಯಾಣದ ಕಡೆಗೆ ತಂಡೋಪ ತಂಡವಾಗಿ ಬಂದರು ಎಂದರೆ ಅದಕ್ಕೆ ಕಾರಣ ಬಸವಣ್ಣನವರ ಸತ್ವಯುತ ಚಿಂತನೆಗಳು. ನಮ್ಮ ಬದುಕು ಉತ್ತಮ ಚಿಂತನೆಗಳಿಂದ ಗಟ್ಟಿಗೊಳ್ಳಬೇಕು’ ಎಂದು ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ಚನ್ನವೀರ ಶರಣರ 28ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಉತ್ತಮ ಚಿಂತನೆಗಳಿಂದ ಬದುಕು ಸುಂದರವಾಗುವುದು. ದೇಹಕ್ಕೆ ಆಕಾರ, ಗಾತ್ರ, ರೂಪ, ಬಣ್ಣಗಳಿವೆ. ಆದರೆ ಮನಸ್ಸಿಗೆ ಇದಾವುದೂ ಇಲ್ಲ. ಏನನ್ನು ನೋಡುತ್ತದೆ ಅದನ್ನು ಬಯಸುತ್ತದೆ. ಮೇಲ್ಮಟ್ಟದ ವಿಚಾರಗಳ ಮೂಲಕ ಮನಸ್ಸನ್ನು ಸಂಸ್ಕಾರಗೊಳಿಸಬೇಕು. ಸಂಸಾರದಲ್ಲಿ ಬಿರುಕುಗಳಿಗೆ ಅವಕಾಶವಿಲ್ಲದಂತೆ ಆಗಲು ಸತ್‍ಚಿಂತನೆ ಅವಶ್ಯ’ ಎಂದು ತಿಳಿಸಿದರು.

ADVERTISEMENT

ಎ.ಸಿ.ವಾಲಿ ಗುರೂಜಿ ಮಾತನಾಡಿ, ‘ಭವಸಾಗರದಿಂದ ಮುಕ್ತರಾಗುವುದನ್ನು ಮಹಾತ್ಮರು, ಶರಣರು ತೋರಿಸಿದರು. ನಾವು ಎಂಬ ಸಮಷ್ಟಿ ಪ್ರಜ್ಞೆ ಹೊಂದುವುದರ ಜತೆಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯವೋ ಅವುಗಳ ಆಚರಣೆಯೂ ಸಹ ಅಷ್ಟೇ ಮುಖ್ಯವಾಗಿದೆ. ಜಾತ್ರೆಗಳು ಸಾಮರಸ್ಯ ಸಮನ್ವಯತೆ ಬೆಳೆಸುತ್ತವೆ’ ಎಂದರು.

ಡೋಣಿಯ ಕೃಷ್ಣಾನಂದ ಶಾಸ್ತ್ರೀಗಳು ಭಕ್ತಿ ಗುರುಸೇವೆ, ಲಿಂಗಾರ್ಚನೆ, ಸಮಾಧಾನ ವಿಷಯ ಕುರಿತು ಉಪನ್ಯಾಸ ನೀಡಿದರು.

ಸವಡಿಯ ಯೋಗ ಸಾಧಕ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯೋಗ ನಿರ್ದೇಶಕ ಡಾ. ಈಶ್ವರ ವಿ.ಬಸವರಡ್ಡಿ ಅವರಿಗೆ ಬಳಗಾನೂರ ಶರಣರ ಮಠ ಮತ್ತು ಸಿದ್ಧಲಿಂಗನಗೌಡ ಎಸ್. ಜಂಗ್ಲೆಪ್ಪಗೌಡ್ರ ಮೆಮೊರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಸಹಯೋಗದಲ್ಲಿ ‘ಶರಣಶ್ರೀ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ನೇತೃತ್ವ ವಹಿಸಿದ್ದ ಶಿವಶಾಂತವೀರ ಶರಣರು ವಿವಿಧ ಸೇವೆ ಸಲ್ಲಿಸಿದ ಭಕ್ತರನ್ನು ಗೌರವಿಸಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರದ ಅಣದೂರಿನ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಂಗಳೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಆಕಾಶವಾಣಿ, ದೂರದರ್ಶನ ಕಲಾವಿದ ಬಸವರಾಜ ಬಂಟನೂರ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶರಣಬಸವ ದೇವರು ಸ್ವಾಗತಿಸಿದರು. ಶಿವಲಿಂಗ ಶಾಸ್ತ್ರೀ ಸಿದ್ದಾಪೂರ ನಿರೂಪಿಸಿದರು. ಬಿ.ವೈ.ಡೊಳ್ಳಿನ ‘ಶರಣಶ್ರೀ ಪ್ರಶಸ್ತಿ’ ವಾಚನ ಮಾಡಿದರು. ಯರಡೋಣಿಯ ಶಿವಶರಣಗೌಡ ವಂದಿಸಿದರು.

*

ಹುಟ್ಟು, ಸಾವು ಯಾರನ್ನೂ ಬಿಟ್ಟಿಲ್ಲ. ಉತ್ತಮ ಬದುಕಿನಿಂದ ಸಾವನ್ನೂ ಗೆಲ್ಲಬಹುದು.
-ಬೂದೀಶ್ವರ ಸ್ವಾಮೀಜಿ, ಹೊಸಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.