ಗದಗ: ‘ಹಿರಿಯರನ್ನು ದೇವರಂತೆ ಕಂಡರೆ ಪುಣ್ಯಪ್ರಾಪ್ತಿಯಾಗುತ್ತದೆ. ವೃದ್ಧರು, ಅಂಗವಿಕಲರಿಗೆ ಸಹಾಯ ಮಾಡುವ ಮೂಲಕ ಸಶಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಅಗತ್ಯವಾದ ನೆರವಿನ ಸಾಧನ ಹಾಗೂ ಸಹಾಯಕ ಉಪಕರಣ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಹುಟ್ಟು– ಸಾವು ಆಕಸ್ಮಿಕ. ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಬದುಕಿದ್ದಾಗ ಅರ್ಥಪೂರ್ಣವಾಗಿ ಜೀವನ ನಡೆಸಬೇಕು. ಬಡತನ, ಸಿರಿತನವಿರಲಿ ಪ್ರತಿಯೊಬ್ಬ ಮನುಷ್ಯನ ಬದುಕು ಸಾರ್ಥಕತೆಯಿಂದ ಕೂಡಿರಬೇಕು. ಇದರಿಂದ ಮನುಷ್ಯ ಶ್ರೇಷ್ಠನಾಗುತ್ತಾನೆ’ ಎಂದರು.
‘ನಾನು ಮುಖ್ಯಮಂತ್ರಿ ಆಗಿದ್ದಾಗ ಹಿರಿಯ ನಾಗರಿಕರ ಸಂಧ್ಯಾ ಸುರಕ್ಷಾ, ಅಂಗವಿಕಲರ ಪಿಂಚಣಿ, ಡಯಾಲಸಿಸ್, ಕಿಮೋಥೆರಪಿ ಸಹಾಯಧನ ಹೆಚ್ಚು ಮಾಡಿದ್ದೆ. ಪೌರಕಾರ್ಮಿಕರನ್ನು ಕಾಯಂಗೊಳಿಸಿದ್ದೆ’ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ‘ಮೂರು ತಿಂಗಳ ಹಿಂದೆ ಪ್ರತಿಯೊಂದು ತಾಲ್ಲೂಕು ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರನ್ನು ಗುರುತಿಸಿ 663 ಸಲಕರಣೆ ವಿತರಿಸಲಾಗಿದೆ. 60 ವರ್ಷ ಆದ ನಂತರ ವಯೋಸಹಜ ಕಾಯಿಲೆಗಳು ಬರುತ್ತವೆ. ಹಿರಿಯರು ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ ಮಾತನಾಡಿ, ‘ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಷ್ಟ್ರೀಯ ಇಂದಿರಾ ಗಾಂಧಿ ಯೋಜನೆ, ರಾಷ್ಟ್ರೀಯ ಭದ್ರತಾ ಯೋಜನೆ ಸೇರಿದಂತೆ ಅಂಕವಿಕಲರಿಗೆ, ವಯೋವೃದ್ಧರಿಗೆ ಅನೇಕ ಯೋಜನೆಗಳು ಇದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಜಿಲ್ಲಾಡಳಿತದ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ’ ಎಂದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಜಿ., ಜಿಲ್ಲಾ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ ಇದ್ದರು.
ವಯಸ್ಸಾದಂತೆ ಹಿರಿಯರಲ್ಲಿ ಮಗುವಿನ ಗುಣಗಳು ಬರುತ್ತವೆ. ಆಗ ಕಿರಿಯರು ಅವರ ಆತ್ಮಶಕ್ತಿಯನ್ನು ಗಟ್ಟಿಗೊಳಿಸಬೇಕಿದೆ. ಹಿರಿಯರು ಸಂತೋಷ ಸಮಾಧಾನದಿಂದ ಇರಬೇಕುಬಸವರಾಜ ಬೊಮ್ಮಾಯಿ ಸಂಸದ
ಹಿರಿಯರು ನಡೆಯುವಾಗ ಎಚ್ಚರಿಕೆ ವಹಿಸಬೇಕು. ಒಮ್ಮೆ ಬಿದ್ದರೇ ಮೊದಲಿನ ತರ ನಡೆಯಲು ಸಾಧ್ಯವಾಗದಿರಬಹುದು. ಸಲಕರಣೆಗಳ ಸದುಪಯೋಗ ಪಡೆದುಕೊಳ್ಳಬೇಕುಡಾ. ಚಂದ್ರು ಲಮಾಣಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.