ADVERTISEMENT

ಅವೈಜ್ಞಾನಿಕ ಹಂಚಿಕೆ; ಚರಂಡಿ ನಿರ್ಮಾಣ ಸಮಸ್ಯೆ

ಬಸವೇಶ್ವರ ನಗರದ ಮನೆಗಳಿಗಿಲ್ಲ ನಳದ ಭಾಗ್ಯ– ಮಳೆಯಾದರೆ ಮನೆಗೆ ನುಗ್ಗುವ ನೀರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 5:10 IST
Last Updated 21 ಏಪ್ರಿಲ್ 2021, 5:10 IST
ಮುಳಗುಂದ ಪಟ್ಟಣದ 16ನೇ ವಾರ್ಡ್‌ನ ಬಸವೇಶ್ವರ ನಗರದಲ್ಲಿ ನೀರಿಗಾಗಿ ಕಾಯುತ್ತಿರುವ ನಿವಾಸಿಗಳು
ಮುಳಗುಂದ ಪಟ್ಟಣದ 16ನೇ ವಾರ್ಡ್‌ನ ಬಸವೇಶ್ವರ ನಗರದಲ್ಲಿ ನೀರಿಗಾಗಿ ಕಾಯುತ್ತಿರುವ ನಿವಾಸಿಗಳು   

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯ್ತಿಯ ವಾರ್ಡ್‌ ನಂ 16ರಲ್ಲಿ ಆಶ್ರಯ ಯೋಜನೆ ಅಡಿ ಬಸವೇಶ್ವರ ನಗರ ನಿರ್ಮಾಣವಾಗಿದ್ದು, ಇಲ್ಲಿನ ಮನೆಗಳಿಗೆ ಎರಡು ದಶಕಗಳಿಂದ ನಳದ ಸಂಪರ್ಕ ದೊರೆತಿಲ್ಲ. ಅವೈಜ್ಞಾನಿಕ ನಿವೇಶನ ಹಂಚಿಕೆಯಿಂದ ಚರಂಡಿ, ರಸ್ತೆ ನಿರ್ಮಾಣಕ್ಕೂ ಅಡಚಣೆ ಉಂಟಾಗಿದೆ.

ವಸತಿ ಇಲಾಖೆ ಆಶ್ರಯ ಯೋಜನೆಯಡಿ 2000ನೇ ವರ್ಷದಲ್ಲಿ 350ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ನೀಡಲಾಗಿದೆ. ಆದರೆ, ಈವರೆಗೂ ಮೂಲಸೌಲಭ್ಯ ಕಲ್ಪಿಸಿಲ್ಲ. ಎರಡು ದಶಕಗಳಿಂದ ಇಲ್ಲಿನ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಪೈಪ್‌ಲೈನ್‌ ಕಾಮಗಾರಿ ಮಾಡಿಲ್ಲ. ಕುಡಿಯುವ ನೀರಿಗಾಗಿ ಎರಡು ನೀರಿನ ಟ್ಯಾಂಕ್ ನೆಚ್ಚಿಕೊಂಡಿರುವ ಇಲ್ಲಿನ ಜನ ದಿನವಿಡೀ ಸರದಿ ಸಾಲಿನಲ್ಲಿ ನಿಂತು ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಈ ನಗರದಲ್ಲಿರುವ ನಾಲ್ಕು ಕೊಳವೆಬಾವಿಗಳು ಜನರ ನೀರಿನ ದಾಹ ನೀಗಿಸುತ್ತಿವೆ. ಆದರೆ, ನಿತ್ಯ ದೈನಂದಿನ ಕೆಲಸ ಕಾರ್ಯ, ಉದ್ಯೋಗ ಬಿಟ್ಟು ಟ್ಯಾಂಕ್ ಇರುವಲ್ಲಿಗೆ ಹೋಗಿ ಕಾದು ನಿಂತು ನೀರು ತರುವ ಪರಿಸ್ಥಿತಿ ಇದೆ. ಮಳೆ, ಚಳಿ, ಬಿಸಿಲು ಎನ್ನದೇ ನೀರಿಗಾಗಿ ಜನ ನಿತ್ಯ ಪರಿತಪಿಸುವಂತಾಗಿದೆ.

ADVERTISEMENT

ಆಶ್ರಯ ಮನೆಗಳನ್ನು ನಿರ್ಮಿಸಿದ ನಂತರ ಉಳಿದ ಜಾಗವನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗಿದ್ದು, ಇದು ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದೆ. ರಸ್ತೆ, ಚರಂಡಿ ಬರುವಲ್ಲಿ ನಿವೇಶನ ಕೊಟ್ಟಿದ್ದಾರೆ. ಮನೆ ಕಟ್ಟಿಕೊಂಡವರು ಜಾಗ ಒತ್ತುವರಿ ಮಾಡಿಕೊಂಡಿದ್ದರಿಂದ ಇಲ್ಲಿ ಚರಂಡಿ ನಿರ್ಮಾಣ ಸಾಧ್ಯವಾಗಿಲ್ಲ. ಹೀಗಾಗಿ ಕೊಳಚೆ ನೀರು ಮುಂದೆ ಹೋಗದೆ ನಿಲ್ಲುತ್ತಿದೆ.

ಇನ್ನು ಇಳಿಜಾರು ಜಾಗದಲ್ಲಿನ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ಸಮಸ್ಯೆಯಾಗುತ್ತದೆ. ನಡೆದಾಡಲು ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗುತ್ತಿದೆ ಎಂದುಸ್ಥಳೀಯರು ದೂರಿದ್ದಾರೆ.

ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವುದು, ಚರಂಡಿ, ರಸ್ತೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ಬಸವೇಶ್ವರ ನಗರದಲ್ಲಿ ಕುಡಿಯುವ ನೀರಿನ ನಳ ಸಂಪರ್ಕ ಜೋಡಣೆಗೆ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರವೇ ಆರಂಭಿಸಲಾಗುವುದು. ನಿವೇಶನ ಹಂಚಿಕೆ ಈ ಹಿಂದೆ ನಡೆದಿದ್ದು ರಸ್ತೆ ಬರುವಲ್ಲಿ ತೆರವು ಮಾಡಿದ್ದೇವೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

ಪೈಪ್‌ಲೈನ್‌ ಕಾಮಗಾರಿಗೆ ಯೋಜನೆ

‘ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಲು 2020-21ನೇ ಎಸ್‌.ಎಫ್‌.ಸಿ ಅಡಿ ₹2.5 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ. ಕೆಲವು ಕಡೆ ಅತಿಕ್ರಮಣದಿಂದ ಚರಂಡಿ ಕೆಲಸ ಸಾಧ್ಯವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು’ ಎಂದು ಪಟ್ಟಣ ಪಂಚಾಯ್ತಿ 16ನೇ ವಾರ್ಡ್‌ ಸದಸ್ಯೆ ಚಂಪಾವತಿ ಗುಳೇದ ಹೇಳಿದರು.

ಸಮರ್ಪಕವಾಗಿ ನೀರು ಲಭ್ಯವಿದ್ದರೂ ಮನೆಗಳಿಗೆ ನಳದ ಸಂಪರ್ಕ ಕಲ್ಪಿಸದ್ದರಿಂದ ಕೆಲಸ ಬಿಟ್ಟು ನೀರಿಗೆ ಕಾಯುವಂತಾಗಿದೆ.
ನಿರ್ಮಲಾ ಹಿರೇಮಠ, ಬಸವೇಶ್ವರ ನಗರ ನಿವಾಸಿ

ಮನೆ ಎದುರೇ ಕೊಳಚೆ ನೀರು ಹರಿಯುತ್ತದೆ. ಚರಂಡಿ ಇಲ್ಲದೆ ಮಳೆಯಾದರೆ ನೀರು ಮನೆಯೊಳಗೆ ನುಗ್ಗಿ ದವಸ ಧಾನ್ಯ ಹಾಳಾಗುತ್ತಿವೆ ಸಿದ್ದಪ್ಪ ಭಂಗಿ, ಬಸವೇಶ್ವರ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.