ADVERTISEMENT

ಪ್ರಶ್ನಿಸುವವರಿಗೆ ಚುನಾವಣೆಯಲ್ಲಿ ಉತ್ತರ: ಕೃಷಿ ಸಚಿವ ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 6:07 IST
Last Updated 10 ನವೆಂಬರ್ 2021, 6:07 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ನರಗುಂದ (ಗದಗ ಜಿಲ್ಲೆ): ‘ಕಾಂಗ್ರೆಸ್‌ ಬಳಿ ಕೇಳಿ ಬಿಜೆಪಿ ಜನ ಸ್ವರಾಜ್‌ ಕಾರ್ಯಕ್ರಮ ಮಾಡಬೇಕಿಲ್ಲ. ಈ ಹಿಂದೆ 18 ತಿಂಗಳು ಅಧಿಕಾರ ನಡೆಸಿದ ಸಮ್ಮಿಶ್ರ ಸರ್ಕಾರದ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ’ ಎಂದು ಕೃಷಿ ಸಚಿವ ಸಿ.ಸಿ.ಪಾಟೀಲ ಕುಟುಕಿದರು.

ನರಗುಂದ ಪಟ್ಟಣದ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ‘ಕೋವಿಡ್‌–19 ಎರಡೂ ಅಲೆಗಳನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಿದ್ದರೆ ರಾಜ್ಯವನ್ನೇ ಮಾರಿಬಿಡುತ್ತಿದ್ದರು. ಇಲ್ಲವೇ ಹಾದಿ ಬೀದಿಯಲ್ಲಿ ಮೃತದೇಹಗಳು ಬಿದ್ದಿರುತ್ತಿದ್ದವು’ ಎಂದು ವ್ಯಂಗ್ಯವಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷ ಸಂಘಟನೆ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದು ಸಹಜ. ಅದೇರೀತಿ ಬಿಜೆಪಿ ‘ಜನ ಸ್ವರಾ‌ಜ್‌ ಯಾತ್ರೆ’ ಮೂಲಕ ಮುಂದೆ ಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸಿದ್ಧತೆ ನಡೆಸಲಿದೆ. ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಪ್ರಶ್ನಿಸುವವರಿಗೆ ಮುಂಬರುವ ಚುನಾವಣೆಯಲ್ಲಿ ಮತ ಪೆಟ್ಟಿಗೆ ಮೂಲಕ ಉತ್ತರ ನೀಡುತ್ತೇವೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.