ADVERTISEMENT

ಶಾಲಾ ಆವರಣ ಸ್ವಚ್ಛಗೊಳಿಸಲು ಸಲಿಕೆ ಹಿಡಿದ ಬಿಇಒ..!

ಡಂಬಳ ಹೋಬಳಿಯ ನಾರಾಯಣಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಲಕ್ಷ್ಮಣ ದೊಡ್ಡಮನಿ
Published 6 ಆಗಸ್ಟ್ 2018, 15:54 IST
Last Updated 6 ಆಗಸ್ಟ್ 2018, 15:54 IST
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ ಅವರು ಸೋಮವಾರ ಡಂಬಳ ಹೋಬಳಿಯ ನಾರಾಯಣಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛಗೊಳಿಸಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ ಅವರು ಸೋಮವಾರ ಡಂಬಳ ಹೋಬಳಿಯ ನಾರಾಯಣಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛಗೊಳಿಸಿದರು   

ಡಂಬಳ: ಹೋಬಳಿಯ ನಾರಾಯಣಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ, ತಾವೇ ಸಲಿಕೆ ಹಿಡಿದು ಶಾಲಾ ಆವರಣ ಸ್ವಚ್ಚಗೊಳಿಸಿದರು.

ಶಾಲೆಗೆ ಭೇಟಿ ನೀಡಿದಾಗ, ಶಾಲಾ ಆವರಣದಲ್ಲಿ ಕಸ ಬಿದ್ದಿರುವುದನ್ನು ಮತ್ತು ಆವರಣ ಗೋಡೆಗೆ ಹೊಂದಿಕೊಂಡಂತೆ ಚರಂಡಿ ನೀರು ಹಿರಿದು ಹೋಗುತ್ತಿರುವುದನ್ನು ನೋಡಿದರು. ಮಕ್ಕಳು ಇದೇ ಚರಂಡಿ ದಾಟಿಕೊಂಡು ಶಾಲೆಗೆ ಬರುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಗ್ರಾಮಸ್ಥರ ಮನವೊಲಿಸಿ, ಸಲಕೆ, ಪಿಕಾಸಿ, ಹಾರೆ ತರಿಸಿದರು. ಅವರೊಂದಿಗೆ ಸೇರಿ ತಾವು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಗ್ರಾಮದ ಯುವಕರು, ಹಿರಿಯ ಮಹಿಳೆಯರು ಇದಕ್ಕೆ ಕೈಜೋಡಿಸಿದರು. ಅರ್ಧ ಗಂಟೆಯಲ್ಲಿ ಶಾಲಾ ಆವರಣ ಸ್ವಚ್ಛವಾಯಿತು.

‘ಶಾಲಾ ಆವರಣವನ್ನು ಶಿಕ್ಷಕರು ಸ್ವಚ್ಛಗೊಳಿಸಿದರೆ ತಪ್ಪೇನಿಲ್ಲ. ಶಿಕ್ಷಕರು ಮಾಡುವ ಕಾರ್ಯದಿಂದ ಪ್ರೇರಣೆಗೊಂಡು ಗ್ರಾಮಸ್ಥರು ಸಹ ಇದಕ್ಕೆ ಕೈಜೋಡಿಸಬಹುದು. ಸರ್ಕಾರಿ ಶಾಲೆಗಳ ಉಳಿವು ಗ್ರಾಮಸ್ಥರ ಸಹಭಾಗಿತ್ವದಿಂದ ಮಾತ್ರ ಸಾಧ್ಯ’ ಎಂದು ಶ್ರಮದಾನದ ಬಳಿಕ ಹಳ್ಳಿಗುಡಿ ಅಭಿಪ್ರಾಯಪಟ್ಟರು.

‘ಇದು ನಿಮ್ಮೂರ ಶಾಲೆ. ನಿಮ್ಮ ಮಕ್ಕಳು ಓದುವ ಶಾಲೆ. ಈ ಶಾಲೆಯನ್ನು ಮನೆಯಂತೆ ಸ್ವಚ್ಛಗೊಳಿಸಿ ಇಟ್ಟುಕೊಳ್ಳಬೇಕು’ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕವಲೂರ, ಉಪಾಧ್ಯಕ್ಷೆ ರೇಣುಕಾ ಕ್ಯಾಸಲಾಪೂರ, ಗ್ರಾಮ ಪಂಚಾಯ್ತಿ ಸದಸ್ಯ ಎಂ.ಕೆ ಗುಂಡಿಕೇರಿ,ಬವಸಣ್ಣೆವ್ವ ಕುರಿ, ಬಸಪ್ಪ ಪೂಜಾರ, ಮಾರುತಿ ಕ್ಯಾಸಲಾಪೂರ, ಸಿದ್ದಪ್ಪ ಪಾಳೇಗಾರ, ದೇವಪ್ಪ ಸ್ವಾಗಿ, ಮಹಾದೇವಿ ಕವಲೂರ, ಗಿರಿಜವ್ವ ಪೂಜಾರ, ಮಹಾದೇವಕ್ಕ ವಡವಿ, ರೇಣವ್ವ ಕಲಕೇರಿ, ಚನ್ನವ್ವ ಕುರಿ, ಈರವ್ವ ಗೌಡ್ರ, ಬಸವ್ವ ಕುರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.