ಗದಗ: ‘ಸಂಗೀತ ಲೋಕದ ಧ್ರುವತಾರೆ ಪಂಡಿತ್ ಭೀಮಸೇನ ಜೋಶಿ ಸಂಗೀತ ಪ್ರೇಮಿಗಳ ಹೃನ್ಮನಗಳಲ್ಲಿ ನೆಲೆಸಿ ಅಜರಾಮರರಾಗಿದ್ದಾರೆ’ ಎಂದು ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ್ ವೆಂಕಟೇಶ ಕುಮಾರ ಹೇಳಿದರು.
ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಪುಣೆಯ ಪಂಡಿತ್ ಕಾಣೆಬುವಾ ಪ್ರತಿಷ್ಠಾನದವರು ಆಯೋಜಿಸಿದ್ದ ಪಂಡಿತ್ ಭೀಮಸೇನ ಜೋಶಿ ಜನ್ಮಶತಾಬ್ದಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪಂ.ಭೀಮಸೇನ ಜೋಶಿ ಅವರ ತವರುಮನೆಯೂ ಆದ ಗದಗ ಪಂ. ಪಂಚಾಕ್ಷರಿ ಗವಾಯಿಗಳು, ಪಂಡಿತ್ ಪುಟ್ಟರಾಜ ಗವಾಯಿಗಳಂತಹ ಮಹಾನ್ ಸಂಗೀತಗಾರರ ಪುಣ್ಯಭೂಮಿಯೂ ಆಗಿದೆ. ಇವರ ಶಿಷ್ಯರೂ ಭಾರತದ ತುಂಬೆಲ್ಲಾ ಸಂಗೀತ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಹೇಳಿದರು.
ಪಂ. ಭೀಮಸೇನ ಜೋಶಿ ಅವರ ನೇರ ಶಿಷ್ಯ ಹಾಗೂ ಪಂ. ಭೀಮಸೇನ ಜೋಶಿ ಪ್ರತಿಷ್ಠಾನದ ಅಧ್ಯಕ್ಷ ಪಂ. ಅರವಿಂದ ಹುಯಿಲಗೋಳಕರ ಹಾಗೂ ಪಂ. ಜೋಶಿ ಅವರ ಸಹೋದರ ಹಿರಿಯ ರಂಗಭೂಮಿ ಕಲಾವಿದ ಸುಶೀಲೇಂದ್ರ ಜೋಶಿ ಅವರನ್ನು ಗೌರವಿಸಲಾಯಿತು.
ಕಿರ್ಲೋಸ್ಕರ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ, ‘ಪಂ. ಜೋಶಿ ಅವರ ನಿಕಟವರ್ತಿಗಳಾದ ಪಂ. ಕಾಣೆಬುವಾ ಹೆಸರಿನಲ್ಲಿ ಸ್ಥಾಪನೆಗೊಂಡ ಕಾಣೆಬುವಾ ಪ್ರತಿಷ್ಠಾನ ಪಂಡಿತ್ ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ ಕಾರ್ಯಕ್ರಮಗಳನ್ನು ಸಂಗೀತದ ಕಾಶಿ ಗದುಗಿನಿಂದ ಆರಂಭಿಸುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿದರು.
ನಂತರ ಪ್ರಸಿದ್ಧ ಹಿಂದೂಸ್ತಾನಿ ಸಂಗೀತ ಕಲಾವಿದೆ ಮಂಜುಷಾ ಪಾಟೀಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಭಜನ್‌ಗಳನ್ನು ಪ್ರಸ್ತುತ ಪಡಿಸಿದರು. ತಬಲಾ ಕಲಾವಿದ ವಿಜಯ ಘಾಟೆ ತಬಲಾದಲ್ಲಿ ಸಾಥ್ ನೀಡಿದರು. ಗುರುಪ್ರಸಾದ ಹೆಗಡೆ, ಕೇಶವ ಜೋಶಿ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.
ಯುವ ಕಲಾವಿದೆ ಐಶ್ವರ್ಯ ದೇಸಾಯಿ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಗೀತೆ ಪ್ರಸ್ತುತಪಡಿಸಿದರು. ಹಿರಿಯ ಸಾಹಿತಿ ಡಾ. ಚಂದ್ರಶೇಖರ ವಸ್ತ್ರದ, ಕಾಣೆಬುವಾ ಪ್ರತಿಷ್ಠಾಪನದ ಸಂಚಾಲಕ ಗೋವಿಂದ ಭಿಡೇಕರ, ಹಿರಿಯ ಹವ್ಯಾಸಿ ರಂಗಭೂಮಿ ಕಲಾವಿದ ಆರ್.ಎನ್.ಕುಲಕರ್ಣಿ, ಡಾ. ಶೇಖರ ಸಜ್ಜನರ, ಡಾ. ಅನಂತ ಶಿವಪೂರ, ಶ್ರೀನಿವಾಸ ಹುಯಿಲಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.