
ಭುವನೇಶ್ವರಿಯ ತೈಲವರ್ಣ ಚಿತ್ರ
ನರೇಗಲ್: ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಪರಿಕಲ್ಪನೆಯಂತೆ 1953ರ ಜ.11ರಂದು ಗದುಗಿನ ಕಲಾವಿದ ಸಿ.ಎನ್.ಪಾಟೀಲ ಅವರು ಜಕ್ಕಲಿಯ ಅನ್ನದಾನೇಶ್ವರ ಮಠದಲ್ಲಿ ರಚಿಸಿದ ಆರು ಅಡಿ ಎತ್ತರದ ಭುವನೇಶ್ವರಿಯ ಮೊದಲ ತೈಲಚಿತ್ರವನ್ನು ಸರ್ಕಾರ ನಾಡದೇವತೆಯ ಅಧಿಕೃತ ಚಿತ್ರವೆಂದು ಘೋಷಿಸಬೇಕು ಎಂದು ಧ್ವನಿ ಎತ್ತಿದವರಲ್ಲಿ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಮೊದಲಿಗರಾಗಿದ್ದರು ಎಂದು ರವೀಂದ್ರನಾಥ ದೊಡ್ಡಮೇಟಿ ಮಾಹಿತಿ ನೀಡಿದರು.
ತೋಂಟದಾರ್ಯ ಮಠದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಇದೇ ಚಿತ್ರದ ಬಳಕೆಗೆ ಮುಂದಾದರು. ಅದೇ ಮಠದಲ್ಲಿ ಅಂದಾನಪ್ಪ ದೊಡ್ಡಮೇಟಿಯವರ ಶತಮಾನೋತ್ಸವ ನಡೆಸಿ, ತೈಲವರ್ಣದ ಭುವನೇಶ್ವರಿಯ ಚಿತ್ರ ಗದಗ ಜನರು ಹಾಗೂ ಕನ್ನಡಿಗರ ಸ್ವಾಭಿಮಾನದ ಚಿತ್ರವೆಂದು ಹೇಳಿದರು. ನಂತರದ ದಿನಗಳಲ್ಲಿ, ನಾಡದೇವತೆಯ ಚಿತ್ರವಾಗಿ ಇದೇ ಚಿತ್ರವನ್ನು ಪರಿಗಣಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿದವರಲ್ಲಿ ಮೊದಲಿಗರಾದರು.
ನರೇಗಲ್ ಪಟ್ಟಣದಲ್ಲಿ ನಡೆದ ಸುವರ್ಣ ಕರ್ನಾಟಕ ಕಾರ್ಯಕ್ರಮದಲ್ಲಿ ಹಾಲಕೆರೆಯ ಲಿಂಗೈಕ್ಯ ಅಭಿನವ ಅನ್ನದಾನ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಅವರು ಸಹ ಅಧಿಕೃತ ಘೋಷಣೆ ಮಾಡುವಂತೆ ಹೋರಾಟಕ್ಕೆ ಬುನಾದಿ ಹಾಕಿದರು.
ಗೋಕಾಕ ಚಳವಳಿ ವೇಳೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಇದೇ ತೈಲಚಿತ್ರವನ್ನು ಬಳಕೆ ಮಾಡಲಾಯಿತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎನ್ನುವ ಹೋರಾಟದ ಸಂದರ್ಭದಲ್ಲಿ ಗದಗ ಜಿಲ್ಲಾ ಕನ್ನಡಪರ ಹೋರಾಟಗಾರರು ಸಭೆ ಸೇರಿ ಅಧಿಕೃತ ಬಳಕೆಗೆ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡಲು ಆರಂಭಿಸಿದರು.
ಗದಗದಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಗೀತಾ ನಾಗಭೂಷಣ ಅವರು ತಮ್ಮ ಅಧ್ಯಕ್ಷೀಯ ಭಾಷಣದ ಒಂಬತ್ತನೇ ಠರಾವಿನಲ್ಲಿ ಭುವನೇಶ್ವರಿ ಚಿತ್ರವನ್ನು ಅಧಿಕೃತಗೊಳಿಸುವಂತೆ ಆಗ್ರಹಿಸಿದರು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಅಧಿಕೃತದ ಚಿತ್ರದ ಘೋಷಣೆಗೆ ಮುಂದಾದಾಗ ಸಾಹಿತಿಗಳು, ಹೋರಾಟಗಾರರು, ಉತ್ತರ ಕರ್ನಾಟಕದ ಜನರು ಹೋರಾಟವನ್ನು ತೀವ್ರಗೊಳಿಸಿದರು.
ಅನೇಕ ವಿಶೇಷತೆಗಳೊಂದಿಗೆ ಕರ್ನಾಟದ ನಕ್ಷೆಯಂತಿರುವ ಭುವನೇಶ್ವರಿಯ ಕಲಾಕೃತಿ ಕನ್ನಡಿಗರ ಚಿತ್ರವಾಗಿದೆ. ನಾಡದೇವತೆಯಾಗಿ ಇದೇ ಚಿತ್ರವನ್ನು ಅಧಿಕೃತಗೊಳಿಸಬೇಕೆಂದು ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆಗಳು.- ರವೀಂದ್ರನಾಥ ದೊಡ್ಡಮೇಟಿ, ಸಾಹಿತಿ
ಆಲೂರು ವೆಂಕಟರಾಯರ ಅಧ್ಯಕ್ಷತೆಯಲ್ಲಿ 1956ರ ನ.1ರಂದು ಹಂಪಿಯಲ್ಲಿ ನಡೆದ ಮೈಸೂರು ರಾಜ್ಯದ ಪ್ರಥಮ ಕನ್ನಡ ರಾಜ್ಯೋತ್ಸವದಲ್ಲಿ ಇದೇ ತೈಲಚಿತ್ರಕ್ಕೆ ಪೂಜೆ ನಡೆದಿದೆ. ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಇದೇ ಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವಿಸಿದರು.
ವೀರೇಂದ್ರ ಪಾಟೀಲ, ದೇವರಾಜ ಅರಸು, ಎಸ್. ನಿಜಲಿಂಗಪ್ಪ, ಎಸ್. ಬಂಗಾರಪ್ಪ, ಎಸ್.ಆರ್.ಬೊಮ್ಮಾಯಿ, ಅಬ್ದುಲ್ ನಜೀರಸಾಬ್, ರಾಮಕೃಷ್ಣ ಹೆಗಡೆ, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಜಕ್ಕಲಿ ಗ್ರಾಮದ ಭುವನೇಶ್ವರಿ ಚಿತ್ರಕ್ಕೆ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದಾರೆ ಹಾಗೂ ಅಧಿಕೃತಗೊಳಿಸುವ ಭರವಸೆ ನೀಡಿದ್ದರು.
ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರನ್ನು ಆಮಂತ್ರಿಸಿ, ನಡೆಸಿದ ಸಭೆಯಲ್ಲಿ ರಾಜರು ಭುವನೇಶ್ವರಿಯ ತೈಲವರ್ಣದ ಚಿತ್ರವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ರವೀಂದ್ರನಾಥ ದೊಡ್ಡಮೇಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.