ADVERTISEMENT

ಗದಗ | ದ್ವೇಷ ಭಾಷಣ ಮಸೂದೆ ಮೂಲಕ‌ ತುರ್ತು ಪರಿಸ್ಥಿತಿ ಹೇರಲು ಯತ್ನ: ಎಂ.ಎಂ.ಹಿರೇಮಠ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:15 IST
Last Updated 27 ಡಿಸೆಂಬರ್ 2025, 4:15 IST
<div class="paragraphs"><p>ಎಂ.ಎಂ.ಹಿರೇಮಠ</p></div>

ಎಂ.ಎಂ.ಹಿರೇಮಠ

   

ಗದಗ: ‘ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರವು ವಿರೋಧ ಪಕ್ಷಗಳನ್ನು ಹಣಿಯಲು ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ ಮಂಡಿಸಿ, ತುರ್ತು ಪರಿಸ್ಥಿತಿ ಹೇರಲು ಹೊರಟಿದೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಟೀಕಿಸಿದ್ದಾರೆ.

‘ದ್ವೇಷ ಭಾಷಣ ವಿಧೇಯಕವು ಪೊಲೀಸ್‌ ವ್ಯವಸ್ಥೆಯ ದುರುಪಯೋಗಕ್ಕೆ ದಾರಿ ಮಾಡಿಕೊಡಲಿದೆ. ಸಂದೇಶ, ವ್ಯಂಗ್ಯಚಿತ್ರ, ಲೇಖನವು ದ್ವೇಷಕ್ಕೆ ಪ್ರಚೋದನೆ ನೀಡುತ್ತದೆಂದು ನಿರ್ಧರಿಸುವ ಅಧಿಕಾರ ಕೆಳ ಹಂತದ ಪೊಲೀಸ್ ಅಧಿಕಾರಿಗೂ ಇರುತ್ತದೆ’ ಎಂದಿದ್ದಾರೆ.

ADVERTISEMENT

‘ಬಿ.ಆರ್. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಮಾತನಾಡುವ ಹಕ್ಕು ನೀಡಲಾಗಿದೆ. ಸಂವಿಧಾನದ ಪುಸ್ತಕ ಹಿಡಿದು, ಅದರ ರಕ್ಷಕನಂತೆ ಬಿಂಬಿಸಿಕೊಳ್ಳುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರದ್ದೇ ಸರ್ಕಾರ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ. 

‘ದ್ವೇಷ ಭಾಷಣ ನಿಯಂತ್ರಿಸಲು ಈಗಾಗಲೇ ಸಾಕಷ್ಟು ಕಾನೂನುಗಳಿವೆ. ಬಲಿಷ್ಠ ಕಾನೂನುಗಳು ಇದ್ದರೂ, ಕಾಂಗ್ರೆಸ್‌ ಸರ್ಕಾರ ಹೊಸ ಮತ್ತು ಹೆಚ್ಚು ಕಠಿಣವಾದ ಕಾಯ್ದೆ ಜಾರಿಗೆ ತರಲು ಯತ್ನಿಸುವ ಅವಶ್ಯಕತೆ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ. 

‘ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ವಿರೋಧ ಪಕ್ಷಗಳು ಹಾಗೂ ಸಂಘಟನೆಗಳ ಕರ್ತವ್ಯ. ಪ್ರತಿಭಟನೆ ಸಮಯದಲ್ಲಿ ಆಕ್ರೋಶದ ಮಾತುಗಳು ಬರುವುದು ಸಹಜ. ಇದನ್ನು ರಾಜ್ಯ ಸರ್ಕಾರ ಬಲವಾಗಿ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ. ಸರ್ಕಾರದ ನೀತಿ ಟೀಕಿಸುವ ಧ್ವನಿಗಳು ಅಡಗಿದರೆ ಸರ್ವಾಧಿಕಾರಕ್ಕೆ ದಾರಿಯಾಗುತ್ತದೆ. ಈ ಜನವಿರೋಧಿ ಮಸೂದೆಗೆ ರಾಜ್ಯಪಾಲರು ಸಹಿ ಮಾಡಬಾರದು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.