ADVERTISEMENT

ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:33 IST
Last Updated 9 ಜುಲೈ 2025, 4:33 IST
<div class="paragraphs"><p>ಆಹ್ವಾನ</p></div>

ಆಹ್ವಾನ

   

ಗದಗ: ಪಂ. ಪುಟ್ಟರಾಜ ಸೇವಾ ಸಮಿತಿಯು ‘ತ್ರಿಭಾಷಾ ಕವಿ’ ಗುರು ಪುಟ್ಟರಾಜರ ಸಾಹಿತ್ಯ ಸೇವೆಯ ಸ್ಮರಣೆಯಲ್ಲಿ 23 ವರ್ಷಗಳಿಂದ ‘ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ’ ನೀಡುತ್ತಾ ಬಂದಿದೆ. ಅದರಂತೆ ಈ ವರ್ಷ ಕೂಡ ಈ ಪ್ರಶಸ್ತಿಗಾಗಿ 2024-25ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.

‘ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ’ಗೆ ಕನ್ನಡದ ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಹಿಂದಿ ಮತ್ತು ಸಂಸ್ಕೃತ ಕೃತಿಗಳಲ್ಲಿ ಉತ್ತಮ ಕೃತಿ ಆಯ್ಕೆಮಾಡಿ ಉತ್ತಮ ಕೃತಿಕರ್ತರಿಗೆ ‘ಪುಟ್ಟರಾಜ ಸಾಹಿತ್ಯ ಸಮ್ಮಾನ ಪ್ರಶಸ್ತಿ’ ನೀಡಲಾಗುವುದು.

ADVERTISEMENT

ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಯು ₹5 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದ ಕೃತಿ ಕರ್ತರಿಗೆ ದಾಂಡೇಲಿಯಲ್ಲಿ ನಡೆಯುವ ಪಂ. ಪುಟ್ಟರಾಜರ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಸಮೀಪದ ಪ್ರತಿಸ್ಪರ್ಧಿಯಾದ ವಿವಿಧ ಪ್ರಕಾರದ 10 ಕೃತಿಗಳನ್ನು ಗುರುತಿಸಿ, ವರ್ಷದ ‘ಶ್ರೇಷ್ಠ ಕೃತಿ ರತ್ನ ಸಮ್ಮಾನ’ ನೀಡಿ ಗೌರವಿಸಲಾಗುವುದು ಎಂದು ಸೇವಾ ಸಮಿತಿಯ ರಾಜ್ಯ ಸಂಚಾಲಕ ಮತ್ತು ಸಾಹಿತ್ಯ ಪುರಸ್ಕಾರ ಆಯ್ಕೆ ಸಮಿತಿಯ ಸದಸ್ಯ ಸಂಚಾಲಕಿ ಸುಮಾ ಹಡಪದ ಹಳಿಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಲೇಖಕರು ತಮ್ಮ ಭಾವಚಿತ್ರ ಸಹಿತ ಪರಿಚಯ ಪತ್ರ, 2024ರ ಏಪ್ರಿಲ್‌ 1ರಿಂದ 2025ರ ಮಾರ್ಚ್‌ 31ರ ಒಳಗೆ ಪ್ರಕಟವಾದ 3 ಕೃತಿಗಳೊಂದಿಗೆ ಆಗಸ್ಟ್‌ 15ರ ಒಳಗಾಗಿ ತಲುಪುವಂತೆ ಕಳಿಸಿಕೊಡಲು ಕೋರಲಾಗಿದೆ.

ಪುಸ್ತಕಗಳನ್ನು ಕಳಿಸಿಕೊಡಬೇಕಾದ ವಿಳಾಸ: ಸಿ.ಕೆ.ಎಚ್ ಶಾಸ್ತ್ರೀ (ಕಡಣಿ), ಸದಸ್ಯರು, ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ, ‘ಸಮನ್ವಯ’ #332, ಕೆಎಚ್‌ಬಿ ಕಾಲೊನಿ, ರಾಜೀವ್‌ಗಾಂಧಿ ನಗರ, ಗದಗ - 582101. ಸಂಪರ್ಕಕ್ಕೆ: 98867 17732 ಸಂಪರ್ಕಿಸಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.