ADVERTISEMENT

‘ಉತ್ತಮ ಓದುಗರಿಂದ ಉತ್ತಮ ಸಮಾಜ’

ಪ್ರೊ.ರವೀಂದ್ರ ಕೊಪ್ಪರ ಅವರ ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 15:46 IST
Last Updated 23 ಸೆಪ್ಟೆಂಬರ್ 2020, 15:46 IST

ಗದಗ: ‘ಇಂದು ನೂರಾರು ಪುಸ್ತಕಗಳು ಬಿಡುಗಡೆಯಾಗುತ್ತಿದ್ದರೂ ಓದುಗರ ಕೊರತೆ ಎಲ್ಲೆಡೆ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಹವ್ಯಾಸಿ ಬರಹಗಾರರ ವೇದಿಕೆಯಂತಹ ಸಂಘಟನೆಗಳು ಇ–ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ. ಉತ್ತಮ ಓದುಗರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ’ ಎಂದು ಭಾರತೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಸ್.ವೈ.ಚಿಕ್ಕಟ್ಟೆ ಹೇಳಿದರು.

ಅವರು ಗದಗ ಜಿಲ್ಲಾ ಹವ್ಯಾಸಿ ಬರಹಗಾರರ ವೇದಿಕೆ ವತಿಯಿಂದ ಕೊಪ್ಪರ ಅಕಾಡೆಮಿಯಲ್ಲಿ ಬಿ.ಎಂ.ಹರಪನಹಳ್ಳಿ ಅವರ ‘ಪಾಪಿ ದೇವಾಲಯ’ ಕಾದಂಬರಿಯನ್ನು ಹಿರಿಯ ಬರಹಗಾರ ಪ್ರೊ.ರವೀಂದ್ರ ಕೊಪ್ಪರ ಅವರು ‘ದಿ ಶನ್ಡ್‌ ಟೆಂಪಲ್’ ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ ಕೃತಿಯ ಇ–ಪುಸ್ತಕವನ್ನು ಸಾಮಾಜಿಕ ಜಾಲತಾಣಗಳಿಗೆ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಪುಸ್ತಕ ಲಭ್ಯವಾಗದ ವಿದೇಶದಲ್ಲಿರುವ ಓದಗರೂ ಕೂಡ ಇ–ಪುಸ್ತಕಗಳನ್ನು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಓದಬಹುದಾಗಿದೆ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೆ.ಎಚ್.ಬೇಲೂರ ಮಾತನಾಡಿ, ‘ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಎರಡು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದು ಸ್ವಾಗತಾರ್ಹ. ಇದೀಗ ಇ–ಪುಸ್ತಕಗಳ ಬಿಡುಗಡೆ ಮತ್ತಷ್ಟು ಓದುಗರನ್ನು ಇಂತಹ ಕೃತಿಗಳತ್ತ ಆಕರ್ಷಿಸುತ್ತದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಪನ್ಯಾಸಕ ಬಿ.ಜಿ.ಗಿರಿತಮ್ಮಣ್ಣವರ ಹಾಗೂ ಡಾ.ಬಿ.ಎಸ್.ರಾಠೋಡ್ ಅವರನ್ನು ಗೌರವಿಸಲಾಯಿತು.

ವಿಹಾನ್ ಕೊಪ್ಪರ ಪ್ರಾರ್ಥನೆ ಹಾಡಿದರು. ಬರಹಗಾರರ ವೇದಿಕೆಯ ಪ್ರಧಾನ ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಬರಹಗಾರರ ವೇದಿಕೆ ಉಪಾಧ್ಯಕ್ಷ ಪ್ರೊ.ಎಂ.ಎಸ್.ಕುಲಕರ್ಣಿ ಸ್ವಾಗತಿಸಿದರು. ಪುಸ್ತಕ ಅನುವಾದ ಕುರಿತು ಪ್ರೊ.ರವೀಂದ್ರ ಕೊಪ್ಪರ, ಪುಸ್ತಕ ರಚನೆ ಕುರಿತು ಲೇಖಕರಾದ ಬಿ.ಎಂ.ಹರಪನಹಳ್ಳಿ ಮಾತನಾಡಿದರು. ಹಿರಿಯ ಸಾಹಿತ್ಯ ಪ್ರೇಮಿ ಸುಬ್ಬಣ್ಣವರ ಇದ್ದರು.

ಪ್ರೊ.ಕೇಶವ ಜಹಗೀರದಾರ, ಪ್ರೊ.ರಮಾಕಾಂತ ದೊಡ್ಡಮನಿ, ಕಾಟೇವಾಲ, ಪ್ರೊ.ಕುಂದಗೋಳ, ಮಾಲಗಿತ್ತಿ, ಅನೀಲ ವೈದ್ಯ, ಎಸ್.ಸಿ.ಹೆದ್ದೂರಿ, ಶ್ರೀಧರ ದೇಶಪಾಂಡೆ, ಎಸ್.ಎಲ್.ಹುಯಿಲಗೋಳ ಸೇರಿದಂತೆ ಬರಹಗಾರರ ವೇದಿಕೆಯ ಹಾಗೂ ಗದಗ ಜಿಲ್ಲಾ ಇಂಗ್ಲಿಷ್‌ ಉಪನ್ಯಾಸಕರ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.