
ಗದಗ: ಜಿಲ್ಲೆಯಲ್ಲಿನ ಪ್ರಮುಖ ಬಸ್ ನಿಲ್ದಾಣಗಳು ಉತ್ತಮ ಕಟ್ಟಡ ವ್ಯವಸ್ಥೆ ಹೊಂದಿವೆ. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಇದರಿಂದಾಗಿ ಸಾರಿಗೆ ಬಸ್ ನಿಲ್ದಾಣಗಳನ್ನು ಉಪಯೋಗಿಸುವ ಪ್ರಯಾಣಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಬಸ್ ನಿಲ್ದಾಣಗಳೆಂದರೆ ಸಂಚಾರ ನಿರ್ವಹಣೆಯ ತಾಣವಷ್ಟೇ ಅಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಬಸ್ ನಿಲ್ದಾಣಗಳ ನಿರ್ವಹಣೆಗೂ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಹತ್ತಲು, ಇಳಿಯಲು ಉತ್ತಮ ಫ್ಲಾಟ್‌ಫಾರ್ಮ್‌ಗಳು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಗದಗ ಹೊಸ ಬಸ್ ನಿಲ್ದಾಣ, ಪಂಡಿತ್ ಪುಟ್ಟರಾಜ ಗವಾಯಿಗಳ ಗ್ರಾಮೀಣ ಬಸ್ ನಿಲ್ದಾಣ ಹಾಗೂ ಬೆಟಗೇರಿ ಬಸ್ ನಿಲ್ದಾಣಗಳಲ್ಲಿ ದಿನಕ್ಕೆ ಸರಾಸರಿ 15 ಸಾವಿರ ಮಂದಿ ಪ್ರಯಾಣಿಕರು ಬಳಕೆ ಮಾಡುತ್ತಾರೆ. ಆದರೆ, ಅವರಿಗೆ ಇಲ್ಲೆಲ್ಲಾ ಆರಾಮದಾಯಕ ಅನುಭೂತಿ ಎಂಬುದು ಮರೀಚಿಕೆಯಾಗಿದ್ದು, ಕಿರಿಕಿರಿಯೇ ಹೆಚ್ಚಿದೆ. ಬೆಟಗೇರಿ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿವೆ.
ಹೊಸ ಬಸ್ ನಿಲ್ದಾಣ ಮತ್ತು ಗ್ರಾಮೀಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ಇಲ್ಲೂ ಕೂಡ ಸೌಲಭ್ಯಗಳ ಕೊರತೆ ಇದೆ. ಶೌಚಾಲಯಗಳು ಸರಿಪಡಿಸಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಹದಗೆಟ್ಟಿವೆ.
ಏಜೆನ್ಸಿಯವರಿಗೆ ದಂಡ;
ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳ ಸ್ವಚ್ಛತೆಗೆ ಕ್ಲೀನಿಂಗ್ ಏಜೆನ್ಸಿಗಳಿವೆ. ಅವರು ಬಸ್ ನಿಲ್ದಾಣಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಕಂಡು ಬಂದರೆ ನೋಟಿಸ್ ಕೊಟ್ಟು, ದಂಡ ವಿಧಿಸಲಾಗುತ್ತಿದೆ ಎಂದು ಗದಗ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಪರುಶುರಾಮ ಗಡೇದ ತಿಳಿಸಿದ್ದಾರೆ.
‘ಬಸ್ ನಿಲ್ದಾಣಗಳ ಸ್ವಚ್ಛತೆಗೆ ಟೆಂಡರ್ ಪಡೆದುಕೊಂಡ ಏಜೆನ್ಸಿಯವರು ಬಸ್ ನಿಲ್ದಾಣಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನೋಟಿಸ್, ದಂಡ ಯಾವುದಕ್ಕೂ ಜಗ್ಗುತ್ತಿಲ್ಲ. ಹಾಗಾಗಿ, ಅವರನ್ನು ಕಿತ್ತುಹಾಕಿ ಬೇರೆಯವರಿಗೆ ಟೆಂಡರ್ ಕೊಟ್ಟು, ಬಸ್ ನಿಲ್ದಾಣಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಕ್ರಮವಹಿಸಬೇಕು’ ಎಂದು ಪ್ರಯಾಣಿಕ ವಿಶ್ವನಾಥ ಖಾನಾಪುರ ಆಗ್ರಹಿಸಿದ್ದಾರೆ.
ಅಧಿಕಾರಿಗಳಿಗೆ ಸೂಚನೆ:
ಈಚೆಗಷ್ಟೇ ಅಧಿಕಾರ ಸ್ವೀಕರಿಸಿದ ಪರುಶುರಾಮ್ ಗಡೇದ ಅವರು, ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಿಗೆ ಅಡ್ಡಾಡಿ ಅಲ್ಲಿನ ಸಮಸ್ಯೆಗಳನ್ನು ಗುರುತಿಸಿದ್ದಾರೆ. ಅವುಗಳನ್ನು ಪರಿಹರಿಸಲು ಕ್ರಮವಹಿಸುವಂತೆ ಡಿಟಿಒಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಮಂದ ಚರ್ಮದ ಅಧಿಕಾರಿಗಳು ಸೂಚನೆ ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
‘ಬಸ್ ನಿಲ್ದಾಣ ಸ್ವಚ್ಛತೆ, ನಿರ್ವಹಣೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಏಜೆನ್ಸಿ, ಅಧಿಕಾರಿಗಳು ಅಥವಾ ಪ್ರಯಾಣಿಕರು ಯಾರಿಂದಲೇ ಸ್ವಚ್ಛತೆಗೆ ಧಕ್ಕೆಯಾದರೆ ಕಠಿಣ ಕ್ರಮವಹಿಸುವಂತೆ ಸೂಚಿಸಿದ್ದಾರೆ. ಹಾಗಾಗಿ, ನಿರ್ವಹಣೆ ಮಾಡದ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ವಹಿಸಲಾಗುತ್ತಿದೆ. ಅದೇರೀತಿ, ನಿಲ್ದಾಣಗಳ ಸ್ವಚ್ಛತೆಗೆ ಕ್ರಮವಹಿಸದ ಅಧಿಕಾರಿಗಳು ಹಾಗೂ ಸ್ವಚ್ಛತೆ ಹಾಳು ಮಾಡುವ ನಾಗರಿಕರ ಮೇಲೂ ನಿಗಾವಹಿಸಲಾಗಿದೆ’ ಎಂದು ಸಾರಿಗೆ ಡಿಸಿ ಪರುಶುರಾಮ ತಿಳಿಸಿದ್ದಾರೆ.
ಗಬ್ಬೆದ್ದು ನಾರುವ ಶೌಚಾಲಯಗಳು; ಬಸ್ ನಿಲ್ದಾಣದಲ್ಲೇ ಮೂತ್ರ ವಿಸರ್ಜನೆ ಫ್ಲಾಟ್‌ಫಾರ್ಮ್‌ಗಳ ತುಂಬ ಕೆಂಪು ಕಲೆ; ಉಗಿಯುವವರಿಗಿಲ್ಲ ಕಡಿವಾಣ ಕೇಂದ್ರ ಕಚೇರಿಯಿಂದ ನಡೆದಿರುವ ‘ಸ್ವಚ್ಛ ಬಸ್ ನಿಲ್ದಾಣ’ ಅಭಿಯಾನಕ್ಕೆ ಸಿಗದ ಯಶಸ್ಸು
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶುದ್ಧನೀರಿನ ಘಟಕ ಅಳವಡಿಸಲಾಗಿದ್ದು ಕೆಲವು ಕಡೆಗಳಲ್ಲಿ ಹಾಳಾಗಿವೆ. ಅವುಗಳ ದುರಸ್ತಿಗೆ ಕ್ರಮವಹಿಸಲಾಗಿದೆ. ಬಸ್ ನಿಲ್ದಾಣಗಳ ಸ್ವಚ್ಛತೆಗೆ ಕೈಜೋಡಿಸುವಂತೆ ಸಾರ್ವಜನಿಕರಿಗೂ ತಿಳಿವಳಿಕೆ ಮೂಡಿಸಲಾಗುತ್ತಿದೆ.ಪರುಶುರಾಮ ಗಡೇದ ಸಾರಿಗೆ ಡಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.