ADVERTISEMENT

ಗದಗ: ಒಂದು ದಿನ ಮೊದಲೇ ಬಸ್‌ ಸಂಚಾರ ಸ್ಥಗಿತ

ಪ್ರಯಾಣಿಕರಿಗೆ ತಟ್ಟಿದ ಬಿಸಿ, ಗಜೇಂದ್ರಗಡದಲ್ಲೂ ಇಲ್ಲ ಬಸ್‌, ಪ್ರಯಾಣಿಕರ ಆತಂಕ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 2:29 IST
Last Updated 7 ಏಪ್ರಿಲ್ 2021, 2:29 IST
ಗದುಗಿನ ಬಸ್‌ ನಿಲ್ದಾಣ
ಗದುಗಿನ ಬಸ್‌ ನಿಲ್ದಾಣ   

ಗದಗ: ಸಾರಿಗೆ ನೌಕರರ ಸಂಘ ಬುಧ ವಾರದಿಂದ ಕರೆ ನೀಡಿರುವ ಮುಷ್ಕರಕ್ಕೆ ಗದಗ ಜಿಲ್ಲಾ ಸಾರಿಗೆ ನೌಕರರು ಮಂಗಳವಾರ ಮಧ್ಯಾಹ್ನದಿಂದಲೇ ಬೆಂಬಲ ಸೂಚಿಸಿ, ಕರ್ತವ್ಯಕ್ಕೆ ಗೈರಾದರು. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

‘ಮಂಗಳವಾರ ಡಿಪೋದಿಂದ 355 ಬಸ್‌ಗಳು ಸಂಚರಿಸಬೇಕಿತ್ತು. ಆದರೆ, 280 ಬಸ್‌ಗಳು ಮಾತ್ರ ಸಂಚರಿಸಿವೆ. ರಾತ್ರಿ ವೇಳೆಗೆ ಅವೆಲ್ಲವೂ ಮರಳಿ ಡಿಪೋಗೆ ಬರಲಿವೆ. ಗದಗ ವಿಭಾಗದ ಬಸ್‌ ಚಾಲಕರು ಮತ್ತು ನಿರ್ವಾಹಕರು ಮಂಗಳವಾರ ಮಧ್ಯಾಹ್ನದಿಂದಲೇ ಕರ್ತವ್ಯಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಸ್ಥಳೀಯ ಹಾಗೂ ಹೊರ ಜಿಲ್ಲೆಗಳ ಪ್ರಯಾಣಿಕರಿಗೆ ತೊಂದರೆ ಆಯಿತು‌’ ಎಂದು ಗದಗ ವಿಭಾಗದ ಸಂಚಾರ ನಿಯಂತ್ರಣ ಅಧಿಕಾರಿ ಜಿ.ಐ.ಬಸವಂತಪುರ ತಿಳಿಸಿದರು.

‘ದೂರದ ಊರುಗಳಿಗೆ ತೆರಳುವವರು ರಾತ್ರಿ ಇಲ್ಲಿಂದ ಹೊರಡುವ ಬಸ್‌ಗಳನ್ನೇ ಅವಲಂಬಿಸಿದ್ದರು. ಆದರೆ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಬರದೇ ಇದ್ದಿದ್ದರಿಂದಾಗಿ ಅವರಿಗೆ ಸಾಕಷ್ಟು ಸಮಸ್ಯೆ ಎದು ರಾಯಿತು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಲಕ್ಷ್ಮೇಶ್ವರ ವರದಿ: ಎಂದಿನಂತೆ ಪ್ರಯಾಣಿಕರು, ವಿದ್ಯಾರ್ಥಿಗಳು ಬೇರೆ ಊರುಗಳಿಂದ ಮಂಗಳವಾರ ಪಟ್ಟಣಕ್ಕೆ ಬಂದಿದ್ದರು.

ಆದರೆ ಸಂಜೆ ಮರಳಿ ಊರಿಗೆ ಹೋಗುವಷ್ಟರಲ್ಲಿ ಬಸ್‍ಗಳ ಸಂಖ್ಯೆ ಬಹಳಷ್ಟು ಕಡಿಮೆ ಆಗಿತ್ತು. ಹೀಗಾಗಿ ವಿವಿಧ ಹಳ್ಳಿಗಳಿಗೆ ಹೋಗಬೇಕಾದ ಪ್ರಯಾಣಿಕರು ಮತ್ತು ಶಾಲಾ ಕಾಲೇಜುಗಳ ಮಕ್ಕಳು ಪರದಾಡಬೇಕಾಯಿತು.

ಮಂಗಳವಾರ ವಸ್ತಿ ಬಸ್ ಬಿಡಲಾಗುವುದಿಲ್ಲ ಎಂದು ಇಲ್ಲಿನ ಬಸ್ ನಿಲ್ದಾಣದಲ್ಲಿ ನಾಮಫಲಕ ಹಾಕ ಲಾಗಿತ್ತು. ಆದರೆ ವಸ್ತಿ ಬಸ್ ಹೊರತು ಇತರೇ ಬಸ್‍ಗಳ ಸಂಚಾರವೂ ಬಂದ್ ಆಗಿದ್ದು ಕಂಡು ಬಂದಿತು. ಕೊನೆಗೆ ಸಿಕ್ಕ ವಾಹನಗಳಲ್ಲಿ ಜನರು ಮನೆ ಸೇರಿಕೊಂಡರು.

ಗಜೇಂದ್ರಗಡ ವರದಿ: ಮುಷ್ಕರಕ್ಕೆ ಪಟ್ಟಣದ ಸಾರಿಗೆ ನೌಕರರು ಬೆಂಬಲಿ ಸಿದ್ದು, ಮಂಗಳವಾರ ಸಂಜೆಯಿಂದಲೇ ಬಸ್ ಸಂಚಾರ ವಿರಳವಾಗಿತ್ತು.

'ನೌಕರರು ಕೆಲಸಕ್ಕೆ ಹಾಜರಾದರೆ ಮಾತ್ರ ಬಸ್ ಸಂಚಾರ ಇರಲಿದೆ. ಇಲ್ಲವಾದಲ್ಲಿ ಸಂಪೂರ್ಣ ಬಂದ್ ಆಗಲಿದೆ. ಬಹುತೇಕ ಸಿಬ್ಬಂದಿ ಮಂಗಳವಾರದಿಂದಲೇ ಕೆಲಸಕ್ಕೆ ಗೈರಾಗಿದ್ದರು' ಎಂದು ಗಜೇಂದ್ರಗಡ ಬಸ್ ಡಿಪೋ ವ್ಯವಸ್ಥಾಪಕಿ ದೇವಕ್ಕೆ ನಾಯಕ ಮಾಹಿತಿ ನೀಡಿದರು.

ನರಗುಂದ ವರದಿ: ಬಸ್ ಕಡಿಮೆಯಾಗಿದ್ದರಿಂದ ಜನ ಆತಂಕಕ್ಕೆ ಒಳಗಾದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಎ.ಎಸ್.ಹಳ್ಳದ ಮಾತನಾಡಿ 'ಮೇಲಾಧಿಕಾರಿಗಳ ಆದೇಶದ ಮೇರೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ಅವರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.