ಮುಂಡರಗಿ: 'ಇತ್ತೀಚಿನ ವರ್ಷಗಳಲ್ಲಿ ದೇಶವು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದು, ಪ್ರತಿಯೊಬ್ಬ ನಾಗರಿಕನು ದೇಶದ ಪ್ರಗತಿಗೆ ಕೈಜೋಡಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ನೆರವಾಗಬೇಕು' ಎಂದು ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’ದೇಶ ಸಮೃದ್ಧವಾಗಿದ್ದರೆ ಮಾತ್ರ ನಾವೆಲ್ಲ ನೆಮ್ಮದಿಯಿಂದ ಬದುಕಲು ಸಾಧ್ಯ. ಬಸವಣ್ಣ ಸೇರಿದಂತೆ 12ನೇ ಶತಮಾನದ ಶರಣರು ಸಾರಿರುವಂತಹ ಸಮ ಸಮಾಜ ಹಾಗೂ ಸಮಬಾಳಿನ ಕಲ್ಪನೆಯನ್ನು ನಾವೆಲ್ಲ ಸಕಾರಗೊಳಿಸಬೇಕಿದೆ. ಶರಣರು ರಚಿಸಿದ್ದ ಅನುಭವ ಮಂಟಪದ ಮಾದರಿಯಲ್ಲಿ ನಮ್ಮ ಸಮಾಜ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ದೊಡ್ಡ ಪರಂಪರೆ ಇದ್ದು, ಅದರ ತತ್ವಾದರ್ಶಗಳು ವಿಶ್ವಮಾನ್ಯವಾಗಿವೆ. ಮಾನವ ಹಕ್ಕುಗಳ ಪ್ರತಿಪಾದನೆ ಮಾಡುವುದು ಲಿಂಗಾಯತ ಧರ್ಮದ ಪರಂಪರೆಯಾಗಿದೆ. ಲಿಂಗಾಯತ ಮಠಾಧೀಶರು ಪ್ರಸಾದ ನಿಲಯ ತೆರೆದು ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದ್ದರಿಂದ ಇಂದು ಎಲ್ಲರೂ ಶಿಕ್ಷಣವಂತರಾಗಲು ಸಾಧ್ಯವಾಯಿತು ಎಂದು ತಿಳಿಸಿದರು.
ಬಸವೇಶ್ವರಿ ಮಾತಾಜಿ ಮಾತನಾಡಿ, ಶರಣರು ಪ್ರತಿಪಾದಿಸಿದ ದಾಸೋಹ ಹಾಗೂ ಕಾಯಕ ತತ್ವಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಪ್ರವಚನ ಸೇವಾ ಸಮಿತಿ ಮುಖಂಡ ಕೊಟ್ರೇಶ ಅಂಗಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮಾಜಿ ಸಚಿವ ಎಸ್.ಎಸ್.ಪಾಟೀಲ, ಶಾಸಕ ಡಾ.ಚಂದ್ರು ಲಮಾಣಿ, ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ಎಸ್.ಎಸ್.ಗಡ್ಡದ, ಶಿವಕುಮಾರ ಬೆಟಗೇರಿ, ಲಿಂಗರಾಜಗೌಡ ಪಾಟೀಲ, ಪವನ ಚೋಪ್ರಾ, ಎಚ್.ವಿರುಪಾಕ್ಷಗೌಡ, ಪಾಲಾಕ್ಷಿ ಗಣದಿನ್ನಿ, ವಿಶ್ವನಾಥ ಉಳ್ಳಾಗಡ್ಡಿ, ವೀರಪ್ಪ ಮಡಿವಾಳರ ಉಪಸ್ಥಿತರಿದ್ದರರು.
ಗುಡಿಗಳ ಬದಲು ಶಾಲೆ ಕಟ್ಟೋಣ: ಲಿಂಗಾಯತ ಎನ್ನುವುದು ಜಾತಿಯಲ್ಲ. ಅದು ಮನುಷ್ಯತ್ವ ಪ್ರತಿಪಾದಿಸುವ ಪರಂಪರೆಯಾಗಿದ್ದು, ಅದನ್ನು ಲಿಂಗಾಯತರು ಅಭಿಮಾನ ಮತ್ತು ಹೆಮ್ಮೆಯಿಂದ ಹೇಳಬೇಕು. ಗುಡಿ, ಗುಂಡಾರಗಳನ್ನು ಕಟ್ಟದೇ ಮನುಕುಲಕ್ಕೆ ಬೆಳಕಾಗುವ ಶಾಲೆ, ಕಾಲೇಜು ನಿರ್ಮಿಸಬೇಕು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.