ADVERTISEMENT

ಮತದಾರರ ಋಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ

ನರಸಾಪೂರದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 15:45 IST
Last Updated 23 ಜೂನ್ 2023, 15:45 IST
ಗದಗ ತಾಲ್ಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ಖಾದಿ ನಗರದ ಹಿತರಕ್ಷಣಾ ಸಮಿತಿ ವತಿಯಿಂದ ಶಾಸಕ ಸಿ.ಸಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು
ಗದಗ ತಾಲ್ಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ಖಾದಿ ನಗರದ ಹಿತರಕ್ಷಣಾ ಸಮಿತಿ ವತಿಯಿಂದ ಶಾಸಕ ಸಿ.ಸಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು    

ಗದಗ: 2018ರಿಂದ 2023ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ನನಗೆ ನೀಡಿದ ಖಾತೆಗಳನ್ನು ಯಾವುದೇ ಕಪ್ಪುಚುಕ್ಕೆ ಬರದ ರೀತಿಯಲ್ಲಿ ಸಮರ್ಥವಾಗಿ ನಿರ್ವಹಿಸಿದ ತೃಪ್ತಿಯಿದೆ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ತಾಲ್ಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

‘ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆದ ಸಂದದರ್ಭದಲ್ಲಿ ಅವರ ಆಶೀರ್ವಾದದಿಂದ ಸಚಿವನಾಗುವ ಅವಕಾಶ ಸಿಕ್ಕಿತು. ಗಣಿ ಮತ್ತು ಭೂ ವಿಜ್ಞಾನ ಸಚಿವನಾಗಿದ್ದ ವೇಳೆ ಇಲಾಖೆಗೆ ವರ್ಷಕ್ಕೆ ₹3,500 ಕೋಟಿ ಆದಾಯ ಸಂದಾಯವಾಗುವಂತೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೇನೆ’ ಎಂದರು.

ADVERTISEMENT

‘ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವನಾದ ನಂತರ ಸಮಗ್ರ ರಾಜ್ಯದ ರಸ್ತೆ ಜಾಲವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ₹1,800 ಕೋಟಿ ಅನುದಾನ ತರುವ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿದ್ದೇನೆ’ ಎಂದು ಹೇಳಿದರು.

ಭಾವುಕರಾದ ಸಿ.ಸಿ.ಪಾಟೀಲ: 2023ರ ಚುನಾವಣೆಯಲ್ಲಿ ನರಸಾಪೂರ ಗ್ರಾಮ ಅತಿ ಹೆಚ್ಚಿನ ಮತಗಳನ್ನು ಕೊಟ್ಟಿದ್ದು, ಅಭಿಮಾನದ ಸಂಗತಿಯಾಗಿದೆ. ತಮ್ಮೆಲ್ಲರಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ ಜೀವನದ ಕೊನೆ ಉಸಿರಿರುವವರೆಗೆ ಮುಂದುವರಿಯಲಿ ಎನ್ನುತ್ತಲೇ ಭಾವುಕರಾದರು.

ಕಷ್ಟದ ಸಮಯದಲ್ಲೂ ನನ್ನ ಕೈಹಿಡಿದ ಜನತೆಯ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಪಿಡಿಒಗೆ ತರಾಟೆ: ನರಸಾಪೂರ ಗ್ರಾಮದ ಬನಶಂಕರಿ ಬಡಾವಣೆಯಲ್ಲಿ ಉದ್ಯಾನ ಹಾಗೂ ಖಾದಿ ನಗರದಲ್ಲಿ ರಸ್ತೆ ಅತಿಕ್ರಮಣ ಮಾಡಲಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯರು ಶಾಸಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪಿಡಿಒ ಸುರೇಶ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಒಂದು ವಾರದೊಳಗೆ ಕುಡಿಯುವ ನೀರು ಪೂರೈಕೆ ಜೊತೆಗೆ ಸ್ಥಳೀಯ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂತರ ಫೋನ್‌ ಮೂಲಕ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುಶೀಲಾ ಬಿ. ಅವರಿಗೆ ಮಾತನಾಡಿ, ಹಾತಲಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇಒ ಹಾಗೂ ಪಿಡಿಒ ಅವರಿಗೆ ಸೂಚನೆ ನೀಡುವ ಮೂಲಕ ಆದ್ಯತೆ ಮೇರೆಗೆ ನರಸಾಪೂರ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.

ಖಾದಿ ನಗರದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್. ಹಿರೇಮಠ, ಮುಖಂಡ ವಸಂತ ಮೇಟಿ, ಬಿಜೆಪಿ ಲಕ್ಕುಂಡಿ ಮಂಡಲದ ಅಧ್ಯಕ್ಷ ನಿಂಗಪ್ಪ ಮಣ್ಣೂರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಖಾದಿ ನಗರದ ಹಿತರಕ್ಷಣಾ ಸಮಿತಿ ವತಿಯಿಂದ ಶಾಸಕ ಸಿ.ಸಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಹಾತಲಗೇರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗೌಡ್ರ, ಸದಸ್ಯರಾದ ಜಂಬಣ್ಣ ಕಲಬುರಗಿ, ನಿರ್ಮಲಾ ಕರಿಗೌಡ್ರ, ಮುಖಂಡರಾದ ಶಿವಪುತ್ರಪ್ಪ ಗುರ್ಲಹೊಸೂರ, ಸಿ.ವಿ.ಪವಾಡಶೆಟ್ಟರ, ಸಿದ್ದಲಿಂಗಪ್ಪ ಕುರ್ಲಗೇರಿ, ಮಲ್ಲಿಕಾರ್ಜುನ ದೊಡ್ಡಮನಿ, ಹನಮಂತ ಬಾವಿಕಟ್ಟಿ, ಈಶ್ವರ, ವಿನೋದ ಬೀಳಗಿ, ನಾಗೇಶ ಸಜ್ಜಿ, ಸೌಮ್ಯ ಕೆರಕನವರ, ಶಾರದಾ ಬೀಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.