ಗದಗ: ‘ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿ ಗಣತಿಗೂ ಮುಂದಾಗಿದೆ. ಜತೆಗೆ ರಾಜ್ಯ ಸರ್ಕಾರ ಕೂಡ ಸೆ. 22ರಿಂದ ಅ. 7ರ ವರೆಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಿದ್ದು, ಈ ವೇಳೆ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂತಲೂ ಜಾತಿ– ಉಪಜಾತಿ ಕಾಲಂನಲ್ಲಿ ರಡ್ಡಿ ಎಂದೇ ನಮೂದಿಸಬೇಕು’ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಮನವಿ ಮಾಡಿದರು.
‘ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಆರಾಧಕರಾಗಿರುವ ವೀರಶೈವ-ಲಿಂಗಾಯತ ರಡ್ಡಿ ಸಮುದಾಯ ಹಿಂದಿನಿಂದಲೂ ವೀರಶೈವ ಸಂಸ್ಕೃತಿ ಆಚರಿಸುತ್ತ ಇಷ್ಟಲಿಂಗ ಪೂಜೆ ಮಾಡುತ್ತ ಬಂದಿದೆ. ಆದರೆ, ಈಚೆಗೆ ಸಮಾಜದ ಕೆಲವರು ನಮ್ಮ ಧರ್ಮದ ಕಾಲಂನಲ್ಲಿ ಹಿಂದೂ ಎಂತಲೂ ಹಾಗೂ ಜಾತಿ– ಉಪಜಾತಿ ಕಾಲಂನಲ್ಲಿ ರಡ್ಡಿ ಎಂದು ನಮೂದಿಸಬೇಕು ಎಂದು ಹೇಳುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕರ್ನಾಟಕದ ವೀರಶೈವ ಲಿಂಗಾಯತ ರೆಡ್ಡಿ ಸಮಾಜ ವೀರಶೈವ ಲಿಂಗಾಯತ ಧರ್ಮದ ಒಂದು ಭಾಗವಾಗಿದೆ. ಕಾಂತರಾಜು ವರದಿಯಲ್ಲಿ ಉಲ್ಲೇಖಿಸಿರುವಂತೆ ವೀರಶೈವ ಲಿಂಗಾಯತ ಸಮುದಾಯ ಜನಸಂಖ್ಯೆ ಕಡಿಮೆಯಾಗಲು ಸರ್ಕಾರ ದೂಷಣೆ ಸರಿಯಲ್ಲ. ನಾವು ಒಳಪಂಗಡಗಳಾಗಿ ಪ್ರತ್ಯೇಕವಾಗಿದ್ದು ಕೂಡ ಕಾರಣ’ ಎಂದರು.
ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯ ಘಟಕ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ ಮಾತನಾಡಿ, ‘ರಾಜ್ಯದ 17 ಜಿಲ್ಲೆಗಳಲ್ಲಿ ನಮ್ಮ ಸಮಾಜದವರಿದ್ದು, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ನಮ್ಮ ಸಮುದಾಯಕ್ಕೆ 3ಬಿ ಜಾತಿ ಪ್ರಮಾಣಪತ್ರ ನೀಡುತ್ತಿದೆ. ಆದರೆ, ಕೆಲವರು ವೈಯಕ್ತಿಕ ಹಿತಾಸಕ್ತಿ ಉದ್ದೇಶದಿಂದ ಸ್ವಾಮೀಜಿಯೊಬ್ಬರು ಸೇರಿ 3ಎ ಜಾತಿ ಪ್ರಮಾಣ ಪತ್ರಕ್ಕಾಗಿ ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಉಪಜಾತಿ ಕಾಲಂನಲ್ಲಿ ರಡ್ಡಿ ಎಂದು ನಮೂದಿಸಲು ಹೇಳುತ್ತಿದ್ದಾರೆ. ನಮ್ಮಲ್ಲಿ ಜಾತಿ ಪೀಠವೇ ಇಲ್ಲ. ನಾವೆಲ್ಲರೂ ನಮ್ಮತನ ಬಿಟ್ಟುಕೊಡಬಾರದು’ ಎಂದು ತಿಳಿಸಿದರು.
ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಕುಮಾರ ಗಡಗಿ, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ರಘುನಾಥಗೌಡ ಕೆಂಪಲಿಂಗನಗೌಡರ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಕೋಟ್ರೇಶ ಬಿದ್ರಿ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ವಾಮದೇವ, ಯುವ ಘಟಕದ ರಾಜ್ಯ ಘಟಕ ಅಧ್ಯಕ್ಷ ಅನೀಲಕುಮಾರ ತೆಗ್ಗಿನಕೇರಿ, ಮುಖಂಡರಾದ ಎಸ್.ಎಸ್. ಪಾಟೀಲ, ಫಕ್ಕಿರಪ್ಪ ಕಲ್ಲಣ್ಣವರ, ಶರಣಗೌಡ ಪಾಟೀಲ ಸರ್ಜಾಪೂರ, ಜಗದೀಶ, ಸುರೇಶ ಶಿರೋಳ, ಲೋಕೇಶ್, ಬಿ.ವಿ. ಲೋಹಿತ್ ಇದ್ದರು.
ಶಿಕ್ಷಣ ಉದ್ಯೋಗಕ್ಕೆ ಕಂಟಕ
‘ಈಗಾಗಲೇ ರಡ್ಡಿ ಸಮುದಾಯದವರು ತಮ್ಮ ಶಾಲಾ ದಾಖಲಾತಿಗಳಲ್ಲಿ ವೀರಶೈವ ರಡ್ಡಿ ಲಿಂಗಾಯತ ರಡ್ಡಿ ದಾಖಲಾತಿ ಮಾಡಿಕೊಂಡಿದ್ದಾರೆ’ ಎಂದು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಾಮದೇವ ಹೇಳಿದರು. ‘ಆದರೆ ಸರ್ಕಾರದಿಂದ ಕೊಡುವ ಜಾತಿ ಪ್ರಮಾಣಪತ್ರಗಳು ವೀರಶೈವ ಲಿಂಗಾಯತ ಇರುವುದರಿಂದ ನಮ್ಮ ಸಮುದಾಯದ ಇತ್ತೀಚಿನ ಪೀಳಿಗೆ ರೆಡ್ಡಿ ಹೆಸರಿನ ಇನ್ನೊಂದು ಪಂಥದ ಹಾಗೂ ಇನ್ನೊಂದು ಪ್ರವರ್ಗದ ಜಾತಿ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದು ಅವರ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಕಂಟಕ ಆಗುತ್ತಿದೆ’ ಎಂದು ಹೇಳಿದರು.
ರಾಜಕೀಯ ಶಕ್ತಿಗಾಗಿ ನಾವೆಲ್ಲರೂ ಒಂದಾಗಬೇಕು. ಇಲ್ಲದಿದ್ದರೇ ನಮ್ಮ ಮುಂದಿನ ಪೀಳಿಗೆ ನಮಗೆ ಶಾಪ ಹಾಕುವ ಸಮಯ ಬರುತ್ತದೆ.ಜಿ.ಎಸ್.ಪಾಟೀಲ, ಗೌರವ ಅಧ್ಯಕ್ಷರು, ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜ
ರಾಜ್ಯದಲ್ಲಿ ಜನಗಣತಿ ಪ್ರಾರಂಭವಾಗುವ ಸಾಧ್ಯತೆ ಇದ್ದು ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಸದಸ್ಯತ್ವ ನೋಂದಣಿಗಾಗಿ ಆಂತರಿಕ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆಶೇಖರಗೌಡ ಮಾಲೀಪಾಟೀಲ, ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯ ಘಟಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.