ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
(ಫೇಸ್‌ಬುಕ್ ಚಿತ್ರ)
ಗದಗ: ‘ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯ ಸರ್ಕಾರವು ಸೆ.22ರಿಂದ ಆರಂಭಿಸುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸಮಾಜದ ಒಗ್ಗಟ್ಟು ಪ್ರದರ್ಶನ ಹಾಗೂ ಸಮೀಕ್ಷೆ ವೇಳೆ ನಮೂದಿಸಲಾಗುವ ಜಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಣೆ ಉದ್ದೇಶದಿಂದ ಸೆ.19ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಭಿನವ ಬೂದೀಶ್ವರ ಸ್ವಾಮೀಜಿ ತಿಳಿಸಿದರು.
‘ವೀರಶೈವ, ಲಿಂಗಾಯತ ಬೇರೆ ಬೇರೆ ಅಲ್ಲ. ಆದರೆ, ಕೆಲವರು ಈ ವಿಚಾರದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಶಿವಯೋಗಿ ಮಂದಿರ ಸ್ಥಾಪನೆಯಾಗಿ 150 ವರ್ಷಗಳು, ಮಹಾಸಭಾ ಸ್ಥಾಪನೆಯಾಗಿ 100 ವರ್ಷಗಳಾಗಿವೆ. ಎಲ್ಲರೂ ಬಸವಣ್ಣ ಮತ್ತು ರೇಣುಕರು ಹಾಗೂ ಹಾನಗಲ್ ಗುರು ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲೇ ಮುಂದುವರಿಯುತ್ತಿದ್ದೇವೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯ ಸರ್ಕಾರ ಈ ಹಿಂದೆ ₹150 ಕೋಟಿ ಖರ್ಚು ಮಾಡಿ ಕಾಂತರಾಜ ಆಯೋಗದ ಮೂಲಕ ಸಮೀಕ್ಷೆ ಮಾಡಿಸಿತ್ತು. ಈಗ ₹400 ಕೋಟಿ ವೆಚ್ಚದಲ್ಲಿ ಮತ್ತೇ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಮುಂದಾಗಿದ್ದು, ಈ ವೇಳೆ ಜಾತಿಗಳಲ್ಲಿ ಉಪ ಜಾತಿಗಳನ್ನು ಜಾಸ್ತಿ ಮಾಡಿದೆ. ಕ್ರೈಸ್ತ ಪದವನ್ನು ಹೆಚ್ಚುವರಿಯಾಗಿ ಸೇರಿಸಿದೆ. ಇದಕ್ಕೆ ನಮ್ಮ ವಿರೋಧ ಇದೆ. ಹೀಗಾಗಿ ಈ ಸಮಾವೇಶ ಮೂಲಕ ಜನರಲ್ಲಿನ ಗೊಂದಲ ನಿವಾರಿಸಿ, ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ, ಲಿಂಗಾಯತ ಗಾಣಿಗ ಹೀಗೆ ತಮ್ಮ-ತಮ್ಮ ಜಾತಿಯ ಒಳಪಂಗಡಗಳನ್ನು ಬರೆಯಿಸಲಿ’ ಎಂದು ಹೇಳಿದರು.
‘ವೀರಶೈವ ಮಹಾಸಭಾಕ್ಕೂ, ಲಿಂಗಾಯತ ಮಠಾಧೀಶರ ಒಕ್ಕೂಟಕ್ಕೂ ಸಂಬಂಧವಿಲ್ಲ’ ಎಂಬ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ವಚನಾನಂದ ಶ್ರೀಗಳಿಗೆ ಮಾಹಿತಿ ಕೊರತೆ ಇರಬಹುದು. ಈ ಸಮಾವೇಶಕ್ಕೆ ಅವರನ್ನೂ ಆಹ್ವಾನಿಸಲಾಗಿದೆ. ವೀರಶೈವ-ಲಿಂಗಾಯತ ಒಂದೇ ಎಂಬುದಕ್ಕೆ ಬಹಿರಂಗ ಚರ್ಚೆಗೆ ಈಗಲೂ ಸಿದ್ಧ’ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ‘ಸೆ.19ರಂದು ಮಧ್ಯಾಹ್ನ 1ಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಸಮಾವೇಶ ನಡೆಯುವ ನೆಹರೂ ಮೈದಾನವರೆಗೆ ಪಾದಯಾತ್ರೆ ನಡೆಯಲಿದೆ. ಈ ಸಮಾವೇಶದಲ್ಲಿ ಮಹಾಸಭಾದ ರಾಷ್ಟ್ರೀಯ ಗೌರವ ಅಧ್ಯಕ್ಷ ಭೀಮಣ್ಣ ಖಂಡ್ರೆ, ಪ್ರಮುಖರಾದ ಶಾಮನೂರ ಶಿವಶಂಕರಪ್ಪ, ಶಂಕರ ಬಿದರಿ ಸೇರಿ ಹಲವರು ಪಾಲ್ಗೊಳ್ಳುವರು. ಗದಗ ಜಿಲ್ಲೆಯಿಂದಲೂ 15 ಸಾವಿರ ಜನರು ಭಾಗವಹಿಸುವರು’ ಎಂದು ಹೇಳಿದರು.
ಪಂಚಮಸಾಲಿ ಸಮಾಜದ ಮುಖಂಡರಾದ ವಿಜಯಕುಮಾರ ಗಡ್ಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಮಾನ್ವಿ, ಬಸವರಾಜ ಅಂಗಡಿ, ಮಹಾಸಭಾದ ಉಪಪೋಷಕರಾದ ಡಾ.ಜಿ.ಎಸ್. ಹಿರೇಮಠ, ಚನ್ನವೀರ ಹುಣಸಿಕಟ್ಟಿ, ಮುರುಘರಾಜೇಂದ್ರ ಬಡ್ನಿ, ಸಿದ್ದು ಜೀವನಗೌಡ್ರ, ಕೆ.ವಿ. ಗದುಗಿನ, ಸುರೇಖಾ ಪಿಳ್ಳಿ, ಜಯಶ್ರೀ ಉಗಲಾಟದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.