ADVERTISEMENT

25 ವರ್ಷಗಳ ಅಭಿವೃದ್ಧಿಗೆ ದಿಕ್ಸೂಚಿ ಬಜೆಟ್: ಸಿ.ಸಿ. ಪಾಟೀಲ ಮೆಚ್ಚುಗೆ

ವಿರೋಧ ಪಕ್ಷದವರಿಂದ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 3:08 IST
Last Updated 2 ಫೆಬ್ರುವರಿ 2022, 3:08 IST
ಸಿ.ಸಿ. ಪಾಟೀಲ
ಸಿ.ಸಿ. ಪಾಟೀಲ   

ಗದಗ: ಲೋಕಸಭೆಯಲ್ಲಿ ಮಂಡಿಸಲಾದ ಕೇಂದ್ರ ಸರ್ಕಾರದ ಮುಂಗಡ ಪತ್ರವು ನಮ್ಮ ರಾಷ್ಟ್ರಕ್ಕೆ ಮುಂದಿನ 25 ವರ್ಷಗಳ ಪ್ರಗತಿಗೆ ದಿಕ್ಸೂಚಿಯಂತಿದೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.

ಕೋವಿಡ್‌ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಕೃಷಿ, ಮೂಲಸೌಕರ್ಯ, ನೀರಾವರಿ, ಕೈಗಾರಿಕೆ, ಸಾರಿಗೆ ಸಂಪರ್ಕ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿರುವುದು ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಆತ್ಮ ನಿರ್ಭರ ಭಾರತ ಅಂಗವಾಗಿ ಕೈಗೊಂಡ ಕ್ರಮಗಳು ಫಲಶ್ರುತಿ ನೀಡುವಲ್ಲಿ ಯಶಸ್ವಿಯಾಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಲ್ಲಿ ರಸ್ತೆ, ಹೆದ್ದಾರಿ, ವಿಮಾನ ನಿಲ್ದಾಣ, ಬಂದರು, ಜಲಸಾರಿಗೆ, ಭೂಸಾರಿಗೆ ಮತ್ತು ಸರಕು ಸಾಗಾಟದ ಸೌಲಭ್ಯಗಳಿಗೆ ಆದ್ಯತೆ ನೀಡಿರುವುದು ಭವಿಷ್ಯದಲ್ಲಿ ದೇಶದ ಸಂಪರ್ಕ ಕ್ರಾಂತಿಗೆ ಮುನ್ನುಡಿಯಾಗಲಿದೆ. ಇನ್ನೆರಡು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲವನ್ನು ಇನ್ನಷ್ಟು ಅಂದರೆ 25 ಸಾವಿರ ಕಿ.ಮೀ.ನಷ್ಟು ವಿಸ್ತರಿಸಲಾಗುವುದು ಮತ್ತು ಹೆದ್ಧಾರಿ –ಮೂಲಸೌಲಭ್ಯ ನಿರ್ಮಾಣಕ್ಕೆ ₹20 ಸಾವಿರ ಕೋಟಿ ಘೋಷಿಸಿರುವುದರಿಂದ ನಮ್ಮ ರಾಜ್ಯಕ್ಕೂ ವರದಾನವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ನೇತೃತ್ವದಲ್ಲಿ ನೀಡಲಾಗಿದ್ದ ನಮ್ಮ ಮನವಿಗೆ ಕೇಂದ್ರ ಭೂಸಾರಿಗೆ ಸಚಿವರು ಸ್ಪಂದಿಸಿ ಈಗಾಗಲೇ ಶಿರಾಡಿ ಘಾಟ್ ಹೆದ್ದಾರಿ ಉನ್ನತೀಕರಣಕ್ಕೆ ₹1,200 ಕೋಟಿ ಮತ್ತು ಬಾನಾಪುರ –ಗದ್ದನಕೇರಿ ಹೆದ್ದಾರಿ ವಿಸ್ತರಣೆಗೆ ₹173 ಕೋಟಿ ಘೋಷಿಸಿರುವುದು ನಮ್ಮ ರಾಜ್ಯಕ್ಕೆ ಕೇಂದ್ರವು ನೀಡಿದ ವಿಶೇಷ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.

ಅಭಿವೃದ್ಧಿಗೆ ಆದ್ಯತೆ: ಸಂಸದ ಉದಾಸಿ
ಗದಗ:
ಈ ಸಾಲಿನ ಕೇಂದ್ರ ಮುಂಗಡ ಪತ್ರವು ಕೃಷಿ, ರಸ್ತೆ, ವಸತಿ, ಶಿಕ್ಷಣ, ಆರೋಗ್ಯ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ರಕ್ಷಣಾ ಕ್ಷೇತ್ರ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.

ಸ್ವಾತಂತ್ರ ಮಹೋತ್ಸವದ ಶತಮಾನೋತ್ಸವದ ಸಂದರ್ಭದಲ್ಲಿ ಭಾರತವನ್ನು ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ, ಉತ್ಪಾದಕತೆ, ಹಣಕಾಸು ಹೂಡಿಕೆ ಸೇರಿದಂತೆ ಸದೃಢ, ಆರ್ಥಿಕತೆಗೆ ಭದ್ರ ಬುನಾದಿ ಹಾಕಿದ ಮುಂಗಡ ಪತ್ರ ಎಂದು ತಿಳಿಸಿದ್ದಾರೆ.

ದೇಶದ ಐದು ನದಿಗಳ ಜೋಡಣೆ, ಸಣ್ಣ ಉದ್ದಿಮೆಗಳಿಗೆ ತುರ್ತುಸಾಲ, ವಿದ್ಯುತ್ ಚಾಲಿತ ವಾಹನ ಉದ್ಯಮಕ್ಕೆ ಉತ್ತೇಜನ ಕೊಡುವ ದೃಷ್ಠಿಯಿಂದ ಬ್ಯಾಟರಿ ಇಂಧನ ಅಭಿವೃದ್ಧಿಗೆ ಒತ್ತು ನೀಡುವದರೊಂದಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 5 ಜಿ ತರಂಗಾಂತರ ಹರಾಜು ಮಾಡುವುದನ್ನು ಘೋಷಿಸಲಾಗಿದೆ.

ಇದರೊಂದಿಗೆ ದೇಶವು ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದೆ. ಹಾಗೂ ರಕ್ಷಣಾ ವಲಯಕ್ಕೆ ಆದ್ಯತೆ, ಯುವ ಸಬಲೀಕರಣ, ಸ್ಟಾರ್ಟ್‌ಅಪ್‌ ಯೋಜನೆಗೆ ಸಾಕಷ್ಟು ಪ್ರೋತ್ಸಾಹದಾಯಕ ಯೋಜನೆಗಳನ್ನು ಘೋಷಿಸಿದೆ. ಒಟ್ಟಾರೆ ಈ ಮುಂಗಡ ಪತ್ರವು ರಾಷ್ಟ್ರಕ್ಕೆ ಆರ್ಥಿಕ ಭದ್ರ ಬುನಾದಿ ಹಾಕುವ ದೂರದೃಷ್ಟಿಯ ಮುಂಗಡ ಪತ್ರವಾಗಿದೆ ಎಂದು ಹೇಳಿದ್ದಾರೆ.

ದೇಶದ ಜನರ ಆಶೋತ್ತರಗಳಿಗೆ ತಣ್ಣೀರು: ಪಾಟೀಲ
ಗದಗ:
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ದೇಶದ ಜನರ ಆಶೋತ್ತರಗಳಿಗೆ ತಣ್ಣೀರೆರಚಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕೋವಿಡ್‌–19 ನಿಯಂತ್ರಣಕ್ಕಾಗಿ ಎಷ್ಟು ಹಣ ಖರ್ಚು ಮಾಡಿದೆ ಎಂಬುದರ ಬಗ್ಗೆ ಎಲ್ಲೂ ತಿಳಿಸಿಲ್ಲ. ಕೋವಿಡ್‌ನಿಂದ ಮೃತಪಟ್ಟವರಿಗೆ ಎಷ್ಟು ಪರಿಹಾರ ನೀಡಲಾಗಿದೆ, ಎಷ್ಟು ಪರಿಹಾರ ನೀಡಲಾಗುವುದು ಎಂಬುದರ ಬಗ್ಗೆ ಪ್ರಸ್ತಾಪ ಕೂಡ ಮಾಡಿಲ್ಲ. ಇಂತಹ ದೊಡ್ಡ ಗಂಡಾಂತರ ಎದುರಿಸಿರುವ ನಮ್ಮ ದೇಶದ ಜನರಿಗೆ ಕೇಂದ್ರ ಸರ್ಕಾರ ಸರಿಯಾದ ಲೆಕ್ಕಾಚಾರ, ಭರವಸೆಗಳನ್ನು ನೀಡಿಲ್ಲ. ಇದು ಅತ್ಯಂತ ದುರ್ದೈವ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಪೆನಿನ್ಸುಲರ್ ನದಿ ಜೋಡಣೆ ಪ್ರಸ್ತಾಪ ಮಾಡಿದ್ದಾರೆ. ಈ ಯೋಜನೆ ಬಹಳ ದಿವಸಗಳಿಂದ ಪ್ರಸ್ತಾಪ ಇದೆ. ಈ ಸಂಬಂಧ ರಾಜ್ಯ ಸರ್ಕಾರ ಅವಸರದ ನಿರ್ಧಾರ ಕೈಗೊಳ್ಳಬಾರದು. ಸರ್ವಪಕ್ಷಗಳ ಸಭೆ ಕರೆಯಬೇಕು. ಉಪಯೋಗ, ಮಾರಕಗಳ ಬಗ್ಗೆ ಲೆಕ್ಕಾಚಾರ ಹಾಕಿ ಅಭಿಪ್ರಾಯ ತಿಳಿಸಬೇಕು. ಪಕ್ಷರಾಜಕಾರಣದ ಹಿನ್ನಲೆಯಲ್ಲಿ ಸ್ವಾಗತ ಮಾಡಬಾರದು. ದಲಿತರು, ಅಲ್ಪಸಂಖ್ಯಾತರು. ಹಿಂದುಳಿದ ವರ್ಗದವರ ಕಲ್ಯಾಣ ಕುರಿತು ಒಂದು ಸಾಲೂ ಇಲ್ಲ. ಉದ್ಯೋಗ ಸೃಷ್ಟಿ ಬಗ್ಗೆಯೂ ಮಾತಿಲ್ಲ ಎಂದು ತಿಳಿಸಿದ್ದಾರೆ.

ಆತ್ಮನಿರ್ಭರ ಬಜೆಟ್: ಮೋಹನ
ಗದಗ:
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‍ನಲ್ಲಿ ಪ್ರಧಾನಿ ಗತಿಶಕ್ತಿ ಯೋಜನೆ, ಅಂತರ್ಗತ ಅಭಿವೃದ್ಧಿ, ಉತ್ಪಾದಕತೆ ಹೆಚ್ಚಳ, ಅಭಿವೃದ್ಧಿ ಅವಕಾಶ ಹೆಚ್ಚಳ, ಶಕ್ತಿ ಪರಿವರ್ತನೆ, ಹವಾಮಾನ ಸಂಬಂಧಿತ ಪ್ರಕ್ರಿಯೆ, ಹೂಡಿಕೆಗೆ ಹಣಕಾಸು ನೀಡಿಕೆ ಇದ್ದು ಇದೊಂದು ಆತ್ಮನಿರ್ಭರ ಬಜೆಟ್. ಪಿಎಂ ಗತಿಶಕ್ತಿ ಯೋಜನೆಯನ್ನು ರಸ್ತೆ, ರೈಲ್ವೆ, ವಿಮಾನ ನಿಲ್ದಾನಗಳು, ಬಂದರುಗಳು, ಸಮೂಹ ಸಾರಿಗೆ, ಜಲಸಾರಿಗೆ ಮತ್ತು ಲಾಜಿಸ್ಟಿಕ್ ಇನ್ ಫ್ರಾ ಎಂದು ಏಳು ವಿಭಾಗಗಳನ್ನಾಗಿ ಮಾಡಿದ್ದು ಇದು ಸಮಗ್ರ ಪ್ರಗತಿಗೆ ಪೂರಕ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ತಿಳಿಸಿದ್ದಾರೆ ಅಭಿಪ್ರಾಯಪಟ್ಟಿದ್ದಾರೆ.

14 ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕತೆಗೆ ಪೂರಕ ಹೂಡಿಕೆ (ಪಿಎಲ್‍ಐ)ಯೋಜನೆಗಳ ಮೂಲಕ 60 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಇದು ₹30 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹೊಸ ಉತ್ಪಾದಕತೆಗೆ ಪೂರಕ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.