ADVERTISEMENT

ಗದಗ | ಸಿಸಿಟಿವಿ ಕ್ಯಾಮೆರಾ ಅಳವಡಿಸಿ: ಎಸ್‌.ಜೋಗದಂಡಕರ

ನಾದಶ್ರೀ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:39 IST
Last Updated 29 ಸೆಪ್ಟೆಂಬರ್ 2025, 6:39 IST
ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಾರಾಧನೆ ಹಾಗೂ ನಾದಶ್ರೀ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ಎಸ್‌ಐ ಮಾರುತಿ ಎಸ್‌.ಜೋಗದಂಡಕರ ಉದ್ಘಾಟಿಸಿದರು
ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಾರಾಧನೆ ಹಾಗೂ ನಾದಶ್ರೀ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ಎಸ್‌ಐ ಮಾರುತಿ ಎಸ್‌.ಜೋಗದಂಡಕರ ಉದ್ಘಾಟಿಸಿದರು   

ಗದಗ: ‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಸುವ ಸಾರ್ವಜನಿಕರು, ಸಾವಿರದ ಲೆಕ್ಕದಲ್ಲಿ ಸಿಗುವ ಸಿಸಿಟಿವಿ ಕ್ಯಾಮೆರಾವನ್ನು ಮನೆಗೆ ಅಳವಡಿಸಲು ಮರೆಯುತ್ತಾರೆ. ಪ್ರತಿ ಮನೆಗೆ ಸಿಸಿಟಿವಿ ಅಳವಡಿಸುವುದರಿಂದ ನಿಮ್ಮ ರಕ್ಷಣೆ ಜತೆಗೆ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗಲಿದೆ’ ಎಂದು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಾರುತಿ ಎಸ್‌.ಜೋಗದಂಡಕರ ಹೇಳಿದರು.

ಗಾನಗಂಧರ್ವ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಾರಾಧನೆ ಹಾಗೂ ನಾದಶ್ರೀ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

‘ಸಾಮಾನ್ಯ ಆಟೊ ಡ್ರೈವರ್ ಆಗಿದ್ದ ನಾನು ಇಂದು ಪೊಲೀಸ್‌ ಇಲಾಖೆ ಸೇರಿ ಎಸ್‌ಐ ಆಗಿ ನಿಮ್ಮ ಮುಂದೆ ನಿಂತಿರುವೆ. ಪೊಲೀಸ್‌ ಇಲಾಖೆಯಲ್ಲಿ ಪ್ರಕರಣ ಭೇದಿಸುವಲ್ಲಿನ ಚಾಕಚಕ್ಯತೆ ಗಮನಿಸಿ ಈಚೆಗೆ ರಾಷ್ಟ್ರಪ್ರಶಸ್ತಿಯೂ ಲಭಿಸಿದೆ. ಇದಕ್ಕೆ ಕಾರಣ ನನ್ನಲ್ಲಿದ್ದ ಸ್ಪಷ್ಟ ಗುರಿ, ಅಚಲ ನಿರ್ಧಾರ ಹಾಗೂ ಕಠಿಣ ಪರಿಶ್ರಮ’ ಎಂದು ಹೇಳಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಮಾತನಾಡಿ, ‘ಗುರು ಕಾರುಣ್ಯ ಎಂಬುದು ಸ್ಪರ್ಶ ಮಣಿ ಇದ್ದಂತೆ. ಭಿಕ್ಷಾ ಪಾತ್ರೆ ಹಿಡಿಯಬೇಕಿದ್ದ ಕೈಗಳು ಗವಾಯಿಗಳವರ ಕಾರುಣ್ಯದಿಂದ ಸಂಗೀತ ವಾದ್ಯ ಹಿಡಿದು ಸ್ವಾಭಿಮಾನದ ಬದುಕು ಕಟ್ಟಿಕೊಂಡರು’ ಎಂದು ಹೇಳಿದರು.

ವೀರೇಶ್ವರ ಶರಣರು ಸಮ್ಮುಖ ವಹಿಸಿದ್ದರು. ಇದೇವೇಳೆ ಎಸ್‌ಐ ಮಾರುತಿ ಎಸ್. ಜೋಗದಂಡಕರ ಅವರನ್ನು ಸನ್ಮಾನಿಸಲಾಯಿತು.

ಭರತ್‌ ಅವರಿಂದ ಗಾಯನ, ವರ್ಷಾ ಕಲಕಂಬಿ ಅವರಿಂದ ಭರತನಾಟ್ಯ ಹಾಗೂ ನಾದಶ್ರೀ ಸಂಗೀತ ಪಾಠಶಾಲೆ ಮಕ್ಕಳಿಂದ ವಚನ ಗಾಯನ ನೃತ್ಯ ಪ್ರದರ್ಶನ ನಡೆಯಿತು.

ಉಮೇಶ, ಧ್ರುವಕುಮಾರ, ಅಂಬಾದಾಸ, ಬಸಪ್ಪ ಗುಡಿಮನಿ ವೇದಿಕೆಯಲ್ಲಿದ್ದರು.

ಸಿದ್ಧಲಿಂಗ ಸ್ವಾಮಿ ಗಡ್ಡದಮಠ ಸ್ವಾಗತಿಸಿದರು. ಶಿವಯೋಗಿ ಗಡ್ಡದಮಠ ನಿರೂಪಿಸಿದರು. ಕುಮಾರಸ್ವಾಮಿ ಹಿರೇಮಠ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.