ADVERTISEMENT

ಮುಳಗುಂದ | ದುರಸ್ತಿ ಕಾಣದ ಚಿಂಚಲಿ ಗ್ರಾಮದ ಮುಖ್ಯರಸ್ತೆ: ಜನರ ಪರದಾಟ

ನೂತನ ಗ್ರಂಥಾಲಯ ಉದ್ಘಾಟನೆಗೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:21 IST
Last Updated 10 ಸೆಪ್ಟೆಂಬರ್ 2025, 4:21 IST
ಚಿಂಚಲಿ ಗ್ರಾಮದ ಮುಖ್ಯರಸ್ತೆಯಲ್ಲಿ ತಗ್ಗು ಬಿದ್ದು ಮಳೆ ನೀರು ನಿಂತಿರುವುದು
ಚಿಂಚಲಿ ಗ್ರಾಮದ ಮುಖ್ಯರಸ್ತೆಯಲ್ಲಿ ತಗ್ಗು ಬಿದ್ದು ಮಳೆ ನೀರು ನಿಂತಿರುವುದು   

ಮುಳಗುಂದ: ತಾಲ್ಲೂಕಿನ ಚಿಂಚಲಿ ಗ್ರಾಮದ ತೇರಿನ ಗಡ್ಡಿ ಹತ್ತಿರ ಮುಖ್ಯ ರಸ್ತೆ ಗುಂಡಿ ಬಿದ್ದು ಹಾಳಾಗಿದ್ದು, ದುರಸ್ತಿ ಕಾರ್ಯ ನಡೆಯದ ಕಾರಣ ಸಾರ್ವಜನಿಕರು ಸಂಚರಿಸಲು ತೊಂದರೆ ಪಡುವಂತಾಗಿದೆ. ಅದೇರೀತಿ ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ಉದ್ಘಾಟನೆ ಕಾರ್ಯ ನನೆಗುದಿಗೆ ಬಿದ್ದಿದೆ.

ಗ್ರಾಮದ ಮಧ್ಯ ಭಾಗದಲ್ಲಿರುವ ಜಿಲ್ಲಾ ಮುಖ್ಯರಸ್ತೆ ಹಲವು ವರ್ಷಗಳ ಹಿಂದೆಯೇ ಹಾಳಾಗಿದೆ. ಹುಬ್ಬಳ್ಳಿ, ಅಣ್ಣಿಗೇರಿ, ಗದಗ ಹಾಗೂ ಲಕ್ಷ್ಮೇಶ್ವರ ನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ಹಲವು ದಿನಗಳಿಂದ ದುರಸ್ತಿ ಭಾಗ್ಯ ಕಂಡಿಲ್ಲ. ಸ್ವಲ್ಪ ಮಳೆಯಾದರೂ ರಸ್ತೆ ತುಂಬ ಕೆಸರು ತುಂಬುತ್ತದೆ.

ರಸ್ತೆ ಮೂಲಕ ನಿತ್ಯವು 30 ಹೆಚ್ಚು ಬಸ್‌ಗಳ ಸಂಚಾರವಿದ್ದು, ರೈತರ ಎತ್ತಿನ ಚಕ್ಕಡಿ ಸಂಚಾರಕ್ಕೂ ಸಮಸ್ಯೆ ಆಗುತ್ತಿದೆ. ರಸ್ತೆಯ ಸುತ್ತಮುತ್ತ ಮನೆಗಳಿದ್ದು, ದೂಳಿನಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಬದಿಯಲ್ಲಿ ಚರಂಡಿ ಇಲ್ಲದ ಪರಿಣಾಮ ರಸ್ತೆ ಮೇಲೆ ಕೊಳಚೆ ನೀರು ನಿಲ್ಲುತ್ತಿದೆ. ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ದುರಸ್ತಿ ಕಾಮಗಾರಿಗೆ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ADVERTISEMENT

‘ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಈಚೆಗೆ ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಡಿಸಲಾಗಿದ್ದು, ಕಂಪ್ಯೂಟರ್ ಉಪಕರಣಗಳನ್ನು ಕೂಡ ಅಳವಡಿಸಲಾಗಿದೆ. ಆದರೆ, ಇದುವರೆಗೂ ನೂತನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಹಾಗೂ ಉದ್ಘಾಟನೆ ನಡೆಯದ ಕಾರಣ ಸೌಲಭ್ಯಗಳ ಬಳಕೆಗೆ ತೊಂದರೆ ಆಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ’ ಎಂದು ಸ್ಥಳಿಯ ನಿವಾಸಿ ದಾದಾಪೀರ ನದಾಫ್‌ ಆರೋಪಿಸಿದರು.

ಮುಖ್ಯರಸ್ತೆ ಅಭಿವೃದ್ಧಿ ಹಾಗೂ ನೂತನ ಗ್ರಂಥಾಲಯ ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಂಚಲಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಎದುರು ಗಿಡಗಳು ಬೆಳೆದಿರುವುದು 
ಗ್ರಂಥಾಲಯದ ನೂತನ ಕಟ್ಟಡ ಪಂಚಾಯಿತಿಗೆ ಇನ್ನೂ ಹಸ್ತಾಂತರವಾಗಿಲ್ಲ. ಗ್ರಂಥಾಲಯ ಉದ್ಘಾಟನೆ ಕುರಿತು ಸಾಮನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು
ಉಮೇಶ ಬಾರಕೇರ ಚಿಂಚಲಿ ಗ್ರಾಮ ಪಂಚಾಯಿತಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.