ADVERTISEMENT

ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:58 IST
Last Updated 26 ಸೆಪ್ಟೆಂಬರ್ 2021, 3:58 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಸಂಜೆ 4ಕ್ಕೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್) ಆವರಣದಲ್ಲಿ ಕಟ್ಟಡ ಸೇರಿದಂತೆ ಜಿಲ್ಲೆಯ ವಿವಿಧ ಕಟ್ಟಡ ಕಾಮಗಾರಿಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ.

ಜಿಮ್ಸ್‌ನಲ್ಲಿ ₹22.82 ಕೋಟಿ ಅನುದಾನದಲ್ಲಿ ನಿರ್ಮಿಸಲಾದ 6 ಅಂತಸ್ತಿನ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳ ಉದ್ಘಾಟನೆ ಹಾಗೂ ಕೋವಿಡ್ ಸಾಂಕ್ರಾಮಿಕ ಚಿಕಿತ್ಸೆಗೆ ಆಮ್ಲಜನಕದ ಕೊರತೆ ಉಂಟಾಗದಿರಲು ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕದ ಲೋಕಾರ್ಪಣೆ, 20 ಕೆ.ಎಲ್ ಸಾಮರ್ಥ್ಯದ ಆಮ್ಲಜನಕ ಸಂಗ್ರಹಾಗಾರದ ಉದ್ಘಾಟನೆ ನೆರೆವೇರಿಸಲಿದ್ದಾರೆ.

ಜಿಮ್ಸ್ ಆವರಣದಲ್ಲಿ 100 ಹಾಸಿಗೆಗಳ ಮಾಡ್ಯುಲರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಹಾಸಿಗೆಗಳ ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕದ ಉದ್ಘಾಟನೆ ಮತ್ತು ಜಿಮ್ಸ್‌ಗೆ ನೂತನವಾಗಿ ಮಂಜೂರಾಗಿರುವ 17 ವಿವಿಧ ವಿಭಾಗಗಳ ಪ್ರಾರಂಭಗೊಳ್ಳುತ್ತಿರುವ ಪೋಸ್ಟ್ ಪಿಜಿ ಫೆಲೋಶಿಪ್ ಕೋರ್ಸುಗಳಿಗೆ ಚಾಲನೆ ನೀಡಲಿದ್ದಾರೆ.

ADVERTISEMENT

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್ ಕಟ್ಟಡದ ಉದ್ಘಾಟನೆ, ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಯೋಜನೆಯಡಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಿಸಲಾದ 50 ಹಾಸಿಗೆಗಳ ಆಯುಷ್ ಆಸ್ಪತ್ರೆಯ ಲೋಕಾರ್ಪಣೆ ನಡೆಯಲಿದೆ.

ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ 12, ರೋಣ ಪೊಲೀಸ್ ಠಾಣಾ ವ್ಯಾಪ್ತಿಯ 12, ಹಾಗೂ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ 12 ಪೊಲೀಸ್ ವಸತಿ ಗೃಹಗಳ ಕಾಮಗಾರಿ ಮತ್ತು ಗಜೇಂದ್ರಗಡ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆಯನ್ನು ಮುಖ್ಯಮತ್ರಿ ಬಸವರಾಜ ಬೊಮ್ಮಾಯಿಯವರು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.