ADVERTISEMENT

ಜಾತಿ ಸಂಘಟನೆ ಅವಶ್ಯಕ: ಸಿಎಂ ಸಿದ್ದರಾಮಯ್ಯ

ಗದಗ ತಾಲ್ಲೂಕು ಕುರುಬರ ಸಂಘದ ರಜತ ಮಹೋತ್ಸವ, ಫಕೀರಪ್ಪ ಹೆಬಸೂರ ಅಭಿನಂದನಾ ಗ್ರಂಥ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 20:06 IST
Last Updated 20 ಸೆಪ್ಟೆಂಬರ್ 2025, 20:06 IST
ಗದಗ ನಗರದ ಕನಕ ಭವನದಲ್ಲಿ ಶನಿವಾರ ನಡೆದ ಗದಗ ತಾಲ್ಲೂಕು ಕುರುಬರ ಸಂಘದ ರಜತ ಮಹೋತ್ಸವ ಮತ್ತು ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂಘಜೀವಿ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು.
ಗದಗ ನಗರದ ಕನಕ ಭವನದಲ್ಲಿ ಶನಿವಾರ ನಡೆದ ಗದಗ ತಾಲ್ಲೂಕು ಕುರುಬರ ಸಂಘದ ರಜತ ಮಹೋತ್ಸವ ಮತ್ತು ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂಘಜೀವಿ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು.   

ಗದಗ: ‘ಒಂದು ಸಂಘ 25 ವರ್ಷಗಳನ್ನು ಪೂರ್ಣಗೊಳಿಸಿದ್ದು ಅದರ ಇತಿಹಾದಲ್ಲಿ ಒಂದು ಮೈಲುಗಲ್ಲು. ಅವಕಾಶ ವಂಚಿತರು ಅಭಿವೃದ್ಧಿ ಆಗಬೇಕಾದರೆ ಜಾತಿ ಸಂಘಟನೆ ಅವಶ್ಯಕ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕನಕ ಭವನದಲ್ಲಿ ಶನಿವಾರ ನಡೆದ ಗದಗ ತಾಲ್ಲೂಕು ಕುರುಬರ ಸಂಘದ ರಜತ ಮಹೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಂಘಜೀವಿ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಗ್ರಂಥ ಸಮರ್ಪಣೆ ಮತ್ತು ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಗದಗ ನಗರದಲ್ಲಿ ಈ ಹಿಂದೆ ನಾನೇ ಕನಕಭವನ, ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟಿಸಿದ್ದೆ. ಕುರುಬರ ಸಂಘ ಜೀವಂತವಾಗಿ ಮುನ್ನಡೆಯಲು ಹೆಬಸೂರು, ರೊಳ್ಳಿ, ಕೊಪ್ಪದ ಸೇರಿದಂತೆ ಹಲವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಬುದ್ಧ, ಬಸವ, ಅಂಬೇಡ್ಕರ್‌, ಗಾಂಧೀಜಿ ಸಮ ಸಮಾಜ ನಿರ್ಮಾಣ ಆಗಬೇಕೆಂದು ಹೇಳಿದರು. ಆದರೆ, ಜಾತಿ ವ್ಯವಸ್ಥೆ ಇನ್ನೂ ಉಳಿದಿದೆ. ಜಾತಿ ವ್ಯವಸ್ಥೆ ಹೋಗಬೇಕಾದರೆ ಅವಕಾಶ ವಂಚಿತರ ಬದುಕಲ್ಲಿ ಬದಲಾವಣೆ ತರಬೇಕು. ಅವರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ತುಂಬಬೇಕು. ಅದಕ್ಕೆ, ಶಿಕ್ಷಣ, ಸಂಘಟನೆ, ಹೋರಾಟ ಮೂರು ಪ್ರಬಲ ಅಸ್ತ್ರಗಳು’ ಎಂದರು.

‘ಅವಕಾಶವನ್ನು ಬಳಸಿಕೊಳ್ಳದ ಕಾರಣಕ್ಕೆ ಹಣೆಬರಹ ಎನ್ನಬಾರದು. ಹಲವು ಕಷ್ಟಗಳ ನಡುವೆಯೂ ನಾನು ಓದಿದೆ. ಸಿಎಂ ಆದೆ. ವ್ಯಕ್ತಿಗೆ ಓದಿನ ಜತೆಗೆ ಸಾಮಾನ್ಯ ಜ್ಞಾನ ಮುಖ್ಯ. ನಮ್ಮ ವ್ಯಕ್ತಿತ್ವ ಸಮಾಜಮುಖಿಯಾದರಷ್ಟೇ ಜೀವನ ಸಾರ್ಥಕ’ ಎಂದರು.

‘ನಾನು ಸಿಎಂ ಆದ ಮೇಲೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವಂತೆ ಆದೇಶಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಕ್ಕು ಮತ್ತು ಬಾದ್ಯತೆಗಳು ಗೊತ್ತಾಗುತ್ತವೆ. ಇವೆರಡೂ ಸಮಾನವಾಗಿ ಸಾಗಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಅಲ್ಲೀವರೆಗೆ ಹಿಂದುಳಿದ, ಅವಕಾಶ ವಂಚಿತ ಸಮುದಾಯಗಳ ಜಾತಿ ಸಂಘಟನೆ ಅವಶ್ಯಕ’ ಎಂದು ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ‘ಸಮಾಜಮುಖಿ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಂಡಿತು. ರಾಜ್ಯ ಮಟ್ಟದ ಕನಕೋತ್ಸವಕ್ಕೆ ಚಾಲನೆ ನೀಡಲಾಯಿತು.

ಶಾಸಕ ಜಿ.ಎಸ್‌.ಪಾಟೀಲ, ಮುಖಂಡರಾದ ಫಕೀರಪ್ಪ ಹೆಬಸೂರು, ಸಲೀಂ ಅಹ್ಮದ್‌, ಎನ್‌.ಎಚ್‌.ಕೋನರಡ್ಡಿ, ಆನಂದ ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಘವೇಂದ್ರ ಹಿಟ್ನಾಳ್‌, ಎಚ್‌.ಎಂ.ರೇವಣ್ಣ, ರಾಮಣ್ಣ ಲಮಾಣಿ, ಧವನ್‌ ರಾಕೇಶ್‌, ರಾಮಚಂದ್ರಪ್ಪ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಮೊಮ್ಮಗ ಧವನ್‌ ಜತೆಗೆ ಜನರತ್ತ ಕೈಬೀಸಿದ ಸಿಎಂ ಸಿದ್ದರಾಮಯ್ಯ
ನನ್ನ ಮತ್ತು ಫಕೀರಪ್ಪ ಹೆಬಸೂರು ಅವರ ನಡುವಿನ ಗೆಳೆತನ 42 ವರ್ಷಗಳಷ್ಟು ಹಳೆಯದ್ದು. ಜಿಲ್ಲೆಯಲ್ಲಿ ಕುರುಬ ಸಮಾಜ ಸಂಘಟನೆಗೆ ಹಲವರು ಶ್ರಮಿಸಿದ್ದಾರೆ
– ಸಿದ್ದರಾಮಯ್ಯ, ಸಿಎಂ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡತವನ್ನು ತೊಲಗಿಸಿದೆ. ಸಿಎಂ ಸಿದ್ದರಾಮಯ್ಯ ರಾಜಕಾರಣಿಯಲ್ಲ; ಅವರೊಬ್ಬ ಸಮಾಜ ಸುಧಾರಕರು.
– ಎಚ್‌.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಎಲ್ಲೆಲ್ಲೂ ಸಿಎಂ ಸಿದ್ದು ಹವಾ!

ಶನಿವಾರ ಗದಗ ನಗರಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಜನರು ಬಹಳ ಹರ್ಷದಿಂದ ಸ್ವಾಗತಿಸಿದರು. ‘ಟಗರು ಬಂತು ಟಗರು’ ‘ಹೌದು ಹುಲಿಯಾ’ ಅಂತ ಹೇಳಿ ಶಿಳ್ಳೆ ಚಪ್ಪಾಳೆ ಕೇಕೆಯೊಂದಿಗೆ ಸಂಭ್ರಮಿಸಿದ್ದು ಕಂಡುಬಂತು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತಿಗೆ ನಿಂತಾಗ ಕಿವಿಗಡಚಿಕ್ಕುವಂತೆ ಚಪ್ಪಾಳೆಯ ಸುರಿಮಳೆ ಆಯಿತು. ಪಂಚಿಂಗ್‌ ಹೇಳಿಕೆ ವ್ಯಂಗ್ಯ ಭರಿತ ಮಾತುಗಳು ಅವರ ಬಾಯಿಂದ ಬಂದಾಗ ಶಿಳ್ಳೆಗಳು ಬಿದ್ದವು.

ಗಮನ ಸೆಳೆದ ಧವನ್‌ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಮ್ಮಗ ಧವನ್‌ ರಾಕೇಶ್‌ ಸಿದ್ದರಾಮಯ್ಯ ತಾತನ ಜತೆಗೆ ಕಾಣಿಸಿಕೊಂಡು ಜನರ ಗಮನ ಸೆಳೆದರು. ಸಿಎಂ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸುವುದಕ್ಕೂ ಮುನ್ನ ವೇದಿಕೆಯಲ್ಲಿದ್ದ ಅತಿಥಿಗಳನ್ನು ಪರಿಚಯಿಸಿದರು. ಕೊನೆಗೆ ಮೊಮ್ಮಗ ಧವನ್‌ ರಾಕೇಶ್‌ ಸಿದ್ದರಾಮಯ್ಯ ಅವರನ್ನೂ ಬಹಳ ಪ್ರೀತಿಯಿಂದ ಸ್ವಾಗತಿಸಿದರು.

ಆಗ ಸಭಾಂಗಣದ ತುಂಬೆಲ್ಲಾ ಚಪ್ಪಾಳೆಯ ಸುರಿಮಳೆಯಾಯಿತು. ಮೊಮ್ಮಗನನ್ನು ಸ್ವಾಗತಿಸುವ ವೇಳೆ ಸಿಎಂ ಕಣ್ಣಲ್ಲಿ ಅಂತಃಕರಣದ ನೋಟವಿತ್ತು. ತುಟಿಯಂಚಿನಲ್ಲಿ ಅತ್ಯಾಪ್ತವಾದ ನಗು ಸೇರಿತ್ತು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೊಮ್ಮಗನನ್ನು ಕರೆತಂದಿದ್ದನ್ನು ನೋಡಿ ‘ಹೌದೋ ಹುಲಿಯಾ’ ಅಂತ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.