ನರೇಗಲ್: ಹೋಬಳಿ ವ್ಯಾಪ್ತಿಯ ವಿವಿಧೆಡೆ ಇರುವ ಜಮೀನುಗಳಲ್ಲಿ ಸ್ಥಾಪಿಸಲಾಗಿರುವ ರೆಡಿ ಮಿಕ್ಸ್ ಕಾಂಕ್ರೀಟ್ (ಆರ್‌ಎಂಸಿ) ಘಟಕಗಳ ತ್ಯಾಜ್ಯವು ರೈತರು ಹಾಗೂ ಜನರಿಗೆ ತೀವ್ರ ತೊಂದರೆ ನೀಡುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಆರ್‌ಎಂಸಿ ಘಟಕಗಳು ಸ್ಥಾಪನೆಯಾಗಿ ಎರಡು ಮೂರು ವರ್ಷಗಳಾಗಿದ್ದರೂ ಇಲ್ಲಿವರೆಗೆ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಗೆ ತಮ್ಮದೇ ಆದ ವ್ಯವಸ್ಥೆ ಮಾಡಿಕೊಂಡಿಲ್ಲ. ಹೀಗಾಗಿ ಘಟಕದಿಂದ ಉತ್ಪಾದನೆಯಾಗುವ ರಾಸಾಯನಿಕ ಮಿಶ್ರಿತ ಕಾಂಕ್ರೀಟ್ ಹೆಚ್ಚುವರಿಯಾಗಿ ಉಳಿದಾಗ ಅವುಗಳನ್ನು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಅದರಲ್ಲೂ ಹೊಲದ ಬದುವಿನಲ್ಲಿ, ಕಿರು ಹಳ್ಳಗಳಲ್ಲಿ, ಸರುವುಗಳಲ್ಲಿ, ರಸ್ತೆ ಪಕ್ಕದಲ್ಲಿ ಹೀಗೆ ಹತ್ತಾರು ಕಡೆಗಳಲ್ಲಿ ಹಾಕಿ ಹೋಗಿದ್ದಾರೆ.
ಇದರಿಂದಾಗಿ ಕೆಲವು ಕಡೆ ಹೊಲಗಳ ಮೂಲಕ ಹರಿದು ಹೋಗುವ ಮಳೆ ನೀರಿನ ಮಾರ್ಗ ಬದಲಾಗಿದೆ. ಕಾಂಕ್ರೀಟ್ ಮಣ್ಣಿನಲ್ಲಿ ಸೇರಿಕೊಂಡು ಬೆಳೆ ಬೆಳೆಯದಂತಾಗಿದೆ ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ. ಇಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕಿದ್ದ ಪರಿಸರ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ ನೋಡಿಯೂ ನೋಡದಂತೆ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ನರೇಗಲ್ ಪಟ್ಟಣದಿಂದ ಗಜೇಂದ್ರಗಡ ಕಡೆಗೆ ಹೋಗುವ ಮಾರ್ಗದ ಹೊಲವೊಂದರಲ್ಲಿ ಸರ್ವೇ ನಂಬರ್-379/4, ಅಬ್ಬಿಗೇರಿ ಗ್ರಾಮದ ಸರ್ವೇ ನಂಬರ್- 611, ಅಷ್ಟೇ ಅಲ್ಲದೆ ರೋಣ ತಾಲ್ಲೂಕಿನ ರೋಣ-ಜಕ್ಕಲಿ ಮಾರ್ಗದಲ್ಲಿರುವ ಸರ್ವೇ ನಂಬರ್-402/2, ಇಟಗಿ ಗ್ರಾಮದ ಸರ್ವೇ ನಂಬರ್-165/4, ಗಜೇಂದ್ರಗಡ ತಾಲ್ಲೂಕಿನ ಬೇವಿನಕಟ್ಟಿ ಗ್ರಾಮದ ಸರ್ವೇ ನಂಬರ್-111/1 ಸೇರಿದಂತೆ ಗದಗ ಜಿಲ್ಲೆಯ ವಿವಿಧ ಕಡೆಗಳಲ್ಲಿ ಫಲವತ್ತಾದ ಕೃಷಿ ಜಮೀನಿನಲ್ಲಿ ಕಾಂಕ್ರೀಟ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ.
ಬಹುರಾಷ್ಟ್ರೀಯ ಪವನ ವಿದ್ಯುತ್ ಖಾಸಗಿ ಕಂಪನಿಯವರು ನರೇಗಲ್ ಹೋಬಳಿ ಹಾಗೂ ಇತರೆ ಕಡೆಗಳಲ್ಲಿ ಕೃಷಿ ಭೂಮಿಯಲ್ಲಿ ಅಳವಡಿಸುತ್ತಿರುವ ವಿಂಡ್ ಕಂಬಗಳ ಕಾಮಗಾರಿಗೆ ಇಲ್ಲಿ ಉತ್ಪಾದನೆ ಮಾಡಿದ ಕಾಂಕ್ರೀಟ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಕೈಗಾರಿಕಾ ಉದ್ದೇಶಕ್ಕೆ ಕೃಷಿ ಭೂಮಿಯಲ್ಲಿ ಕಾಂಕ್ರೀಟ್ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಕೆಲವು ಘಟಕಗಳು ಇಲ್ಲಿವರೆಗೆ ಭೂ ಪರಿವರ್ತನೆ (ಎನ್.ಎ) ಮಾಡಿಸಿಲ್ಲ ಮತ್ತು ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು (ಎನ್‌ಒಸಿ) ಪಡೆದಿರುವುದಿಲ್ಲ. ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಘಟಕಗಳು ಸಿಮೆಂಟ್ ದೂಳು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ದೂಳು ಸಂಗ್ರಾಹಕಗಳು, ತ್ಯಾಜ್ಯ ನೀರು ಸಂಸ್ಕರಣೆಗೆ ಅಗತ್ಯ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿಲ್ಲ. ತ್ಯಾಜ್ಯ ನೀರನ್ನು ಹೊಲದ ಬದುವಿಗೆ, ಮಳೆ ನೀರು ಹರಿದು ಹೋಗುವ ಮಾರ್ಗಕ್ಕೆ ಬಿಡಲಾಗುತ್ತಿದೆ. ಇದರಿಂದ ಕೃಷಿ ಇಳುವರಿ ಕಡಿಮೆಯಾಗಲು ಕಾರಣವಾಗಿದೆ ಎನ್ನುವ ಆರೋಪವಿದೆ.
ಘಟಕಗಳಲ್ಲಿ ತಯಾರಾಗುವ ಕಾಂಕ್ರೀಟ್‌ನ್ನು ತೆಗೆದುಕೊಂಡು ಹೋಗುವ ವಾಹನಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಪೂರ್ಣವಾಗಿ ವಿಲೇವಾರಿ ಮಾಡುವುದಿಲ್ಲ. ವಾಹನದಲ್ಲಿ ಹೆಚ್ಚುವರಿಯಾಗಿ ಉಳಿಯುವ ಕಾಂಕ್ರೀಟ್‌ನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಹಾಕುತ್ತಿದ್ದಾರೆ. ನರೇಗಲ್-ನಿಡಗುಂದಿ ಮಾರ್ಗದ ನಡುವೆ ನೂರಾರು ಕಡೆಗಳಲ್ಲಿ, ನರೇಗಲ್‌ನ ಕೆಎಸ್‌ಎಸ್ ಕಾಲೇಜಿನ ಸಮೀಪದಲ್ಲಿರುವ ಮಳ್ಳಿಯವರ ತಗ್ಗಿನಲ್ಲಿ, ನರೇಗಲ್-ಜಕ್ಕಲಿ-ರೋಣ ಮಾರ್ಗದ ನೂರಾರು ಕಡೆಗಳಲ್ಲಿ, ನರೇಗಲ್-ಕೋಟುಮಚಗಿ-ಗದಗ ಮಾರ್ಗದ ರಸ್ತೆ ಬದಿಯಲ್ಲಿ, ಅದೇ ರೀತಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ಪಕ್ಕದಲ್ಲಿ, ಕಾಮಗಾರಿ ನಡೆಯುವ ಹೊಲದ ಬದುವಿನಲ್ಲಿ, ಅಲ್ಲಿಯೇ ಪಕ್ಕದಲ್ಲಿರುವ ಸರುವಿನಲ್ಲಿ ಅಪಾರ ಪ್ರಮಾಣದಲ್ಲಿ ಹಾಕುತ್ತಿದ್ದಾರೆ. ಹಾಗಾಗಿ ಸದ್ಯ ಎಲ್ಲೆಂದರಲ್ಲಿ ಕಾಂಕ್ರೀಟ್ ಗುಡ್ಡೆಗಳು ಕಾಣುತ್ತವೆ. ಕೆಲವು ಕಡೆಗಳಲ್ಲಿ ಮಣ್ಣಿನಲ್ಲಿ ಹುದುಗಿವೆ. ಹೀಗೆ ತೊಂದರೆ ಕೊಡುತ್ತಿರುವ ಕಾಂಕ್ರೀಟ್ ಘಟಕಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಕೃಷಿಕರಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಆರ್‌ಎಂಸಿ ಘಟಕದವರು ವೇಸ್ಟ್‌ಯಾರ್ಡ್ ಮಾಡಿಕೊಳ್ಳಬೇಕು. ಅದನ್ನು ಪರಿಶೀಲನೆ ಮಾಡಬೇಕಾದ ಇಲಾಖೆಯ ಗಮನಕ್ಕೂ ತರಲಾಗುವುದು. ಘಟಕಗಳು ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ನಂತರ ಅಲ್ಲಿನ ವೇಸ್ಟ್‌ಯಾರ್ಡ್ ಬಗ್ಗೆ ಮಾಹಿತಿ ಪಡೆಯಲಾಗುವುದುಕಿರಣಕುಮಾರ ಜಿ. ಕುಲಕರ್ಣಿ ಗಜೇಂದ್ರಗಡ ತಹಶೀಲ್ದಾರ್
ಆರ್‌ಎಂಸಿ ಘಟಕಗಳಿಂದ ಉತ್ಪಾದಿತ ಕಾಂಕ್ರೀಟ್‌ನ್ನು ಎಲ್ಲೆಂದರಲ್ಲಿ ಹಾಕಲು ಅವಕಾಶವಿಲ್ಲ. ಯಾವ ಭಾಗದಲ್ಲಿ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಪಡೆದು ನೋಟಿಸ್ ನೀಡಲಾಗುವುದುಜಗದೀಶ ಐ.ಎಚ್. ಪರಿಸರ ಅಧಿಕಾರಿ ಗದಗ
ಕೊಪ್ಪಳದಲ್ಲಿ ₹2.19 ಲಕ್ಷ ದಂಡ; ನಮ್ಮಲ್ಲಿ ವಿನಾಯಿತಿ?
ನರೇಗಲ್-ಗಜೇಂದ್ರಗಡ ಮಾರ್ಗದ ನಡುವೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಸಂಕನೂರ ಗ್ರಾಮದ ಸರಹದ್ದಿನಲ್ಲಿ ಪರವಾನಗಿ ಪಡೆಯದೇ ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ರೆಡಿ ಮಿಕ್ಸ್ ಕಾಂಕ್ರೀಟ್ (ಆರ್‌ಎಂಸಿ) ಘಟಕಕ್ಕೆ ಅಲ್ಲಿನ ಅಧಿಕಾರಿಗಳು 2024ರ ಅಕ್ಟೋಬರ್ 25ರಂದು ₹219543 ದಂಡ ವಿಧಿಸಿದ್ದಾರೆ. ಆದರೆ ರೋಣ-ಗಜೇಂದ್ರಗಡ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನೇಕ ಘಟಕಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಇಂದಿಗೂ ದಂಡ ಹಾಕಿರುವ ಘಟನೆಗಳು ನಮ್ಮಲ್ಲಿ ನಡೆದಿಲ್ಲ. ವಿನಾಯಿತಿ ನೀಡಲಾಗಿದೆ. ಹಾಗಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನುತ್ತಾರೆ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವಿನಾಯಕ ಜರತಾರಿ.
ಪರಿಸರ ಇಲಾಖೆ ನಿರ್ಲಕ್ಷ್ಯ; ಎಲ್ಲೆಂದರಲ್ಲಿ ಕಾಂಕ್ರೀಟ್ ತ್ಯಾಜ್ಯ
ಸಣ್ಣದೊಂದು ಕೋಳಿ ಫಾರ್ಮ್ ಆರಂಭಿಸಬೇಕಾದರೆ ಹತ್ತಾರು ಬಾರಿ ಪರಿಶೀಲನೆ ನಡೆಸಿ ಅನುಮತಿ ನೀಡುವ ಪರಿಸರ ಅಧಿಕಾರಿಗಳು ದೊಡ್ಡ ಕಂಪನಿಗಳಲ್ಲಿ ನಡೆಯುವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಲಕ್ಷ್ಯತನದಿಂದಾಗಿ ಘಟಕಗಳಲ್ಲಿ ಉತ್ಪಾದನೆಯಾಗುವ ಕಾಂಕ್ರೀಟ್ ತ್ಯಾಜ್ಯ ವಿಲೇವಾರಿ ಹೆಚ್ಚುವರಿ ಕಾಂಕ್ರೀಟ್ ಶೇಖರಣೆಯ ಕಾರ್ಯ ಎಲ್ಲಿಯೂ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ರೈತರಿಗೆ ತುಂಬ ತೊಂದರೆ ಆಗುತ್ತಿದೆ. ಈ ಕುರಿತು ಗದಗ ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ.ಎಚ್.ಅವರನ್ನು ಸಂಪರ್ಕ ಮಾಡಿದಾಗ ‘ವಿಂಡ್ ಕಂಪನಿ ಕಾಂಕ್ರೀಟ್ ಘಟಕಕ್ಕೆ ಸೋಲಾರ ಘಟಕಗಳಿವೆ ವಿನಾಯಿತಿಯಿದೆ. ತ್ಯಾಜ್ಯ ನಿರ್ವಹಣೆಯನ್ನು ಅವರೇ ಮಾಡಿಕೊಳ್ಳಬೇಕು’ ಎಂದು ಮಾಹಿತಿ ನೀಡಿದರು.
ಆರ್‌ಎಂಸಿ ಘಟಕಗಳ ಸ್ಥಾಪನೆಗಿರುವ ನಿಯಮಗಳು
ರಾಜ್ಯ ಭೂ ಕಂದಾಯ ಕಾಯ್ದೆ-1964 ಕಲಂ 95ರ ಅಡಿ ಕೃಷಿ ಭೂಮಿ ಕಡ್ಡಾಯವಾಗಿ ಭೂ ಪರಿವರ್ತನೆಯಾಗಬೇಕು. ನಂತರ ಘಟಕಗಳನ್ನು ಸ್ಥಾಪಿಸಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸ್ಥಾಪನಾ ಅನುಮತಿ ಹಾಗೂ ಕಾರ್ಯಾರಂಭ ಅನುಮತಿ ಪಡೆಯಬೇಕು. ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಹೆಸ್ಕಾಂನಿಂದ ಸ್ಥಳೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಬೇಕು. (ವೇಸ್ಟ್ ಮ್ಯಾನೇಜ್‌ಮೆಂಟ್) ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು ಎಂಬುದೂ ಸೇರಿದಂತೆ ಅನೇಕ ನಿಯಮಗಳಿವೆ. ಆದರೆ ನಮ್ಮಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೂ ಪಾಲನೆಯಾಗುತ್ತಿಲ್ಲ ಎಂದು ವಕೀಲ ರವಿಕಾಂತ ಅಂಗಡಿ ಮಾಹಿತಿ ನೀಡಿದರು.
ಯಾರು ಏನಂತಾರೆ?
ಆರ್‌ಎಂಸಿ ಘಟಕಗಳ ಕಾಂಕ್ರೀಟ್ ತ್ಯಾಜ್ಯವು ಹೊಲದ ಮಣ್ಣಿನಲ್ಲಿ ಸೇರಿಕೊಂಡು ಕೃಷಿಗೆ ತೊಂದರೆ ಕೊಡುತ್ತಿದೆ. ಅನೇಕ ಕಡೆ ಗಟ್ಟಿಯಾಗಿರುವ ಕಾಂಕ್ರೀಟ್‌ನಿಂದ ಮಳೆ ನೀರುವ ಇಂಗದಂತಾಗಿದೆ
–ಸೋಮಪ್ಪ ಹನಮಸಾಗರ ರೈತ
ರೋಣ-ಗಜೇಂದ್ರಗಡ ಹಾಗೂ ನರೇಗಲ್ ಹೋಬಳಿ ವ್ಯಾಪ್ತಿಯಲ್ಲಿ ಅನಧಿಕೃತ ಆರ್‌ಎಂಸಿ ಘಟಕಗಳ ಹಾವಳಿ ಮಿತಿ ಮೀರಿದೆ. ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳದೆ ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ಇದರ ವಿರುದ್ಧ ಸದ್ಯದಲ್ಲೇ ಹೋರಾಟ ಕೈಗೊಳ್ಳಲಿದ್ದೇವೆ
–ವಿನಾಯಕ ಮು. ಜರತಾರಿ
ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಬಳಕೆ ಮಾಡುವಾಗ ಪಾಲನೆ ಮಾಡಬೇಕಾದ ನಿಯಮಗಳನ್ನು ರೆಡಿ ಮಿಕ್ಸ್ ಕಾಂಕ್ರೀಟ್ ಘಟಕದವರು ಪಾಲನೆ ಮಾಡುತ್ತಿಲ್ಲ. ಇವರಿಗೆ ಸಹಕಾರ ನೀಡುವಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ
–ರವಿಕಾಂತ ಅಂಗಡಿ ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.