ADVERTISEMENT

ಅಲ್ಪಸಂಖ್ಯಾತರ ಏಳಿಗೆಗೆ ಕಾಂಗ್ರೆಸ್‌ ಮಾರಕ: ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಜನ ಸಂಕಲ್ಪ ಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 16:14 IST
Last Updated 8 ನವೆಂಬರ್ 2022, 16:14 IST
ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ನಡೆದ ಜನ ಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ ಇದ್ದಾರೆ
ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ನಡೆದ ಜನ ಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ ಇದ್ದಾರೆ   

ಶಿರಹಟ್ಟಿ (ಗದಗ)/ಬ್ಯಾಡಗಿ (ಹಾವೇರಿ): ‘ಕಾಂಗ್ರೆಸ್‌ ಅಲ್ಪಸಂಖ್ಯಾತರಿಗೂ ಅನ್ಯಾಯ ಮಾಡಿದೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಏಳಿಗೆಗೆ ಮಾರಕವಾಗಿರುವುದೇ ಕಾಂಗ್ರೆಸ್‌ ಪಕ್ಷ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.

ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ನಡೆದ ‘ಜನ–ಸಂಕಲ್ಪ’ ಯಾತ್ರೆಯಲ್ಲಿ ಅವರು ಮಾತನಾಡಿ, . ವಕ್ಫ್‌ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಲಪಟಾಯಿಸಿದ್ದು, ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಬರುವ ದಿನಗಳಲ್ಲಿ ಪೂರಕ ತನಿಖೆ ನಡೆಸ ಲಾಗುವುದು. ಯಾರ‍್ಯಾರು ಮುಸಲ್ಮಾನರ ಆಸ್ತಿಯನ್ನು ಲಪಟಾಯಿಸಿದ್ದಾರೋ ಅವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ರಾಹುಲ್‌ ಗಾಂಧಿ ಒಬ್ಬ ವಿಫಲ ನಾಯಕ’: ಬಳಿಕ ಬ್ಯಾಡಗಿಯಲ್ಲಿ ನಡೆದ ‘ಜನಸಂಕಲ್ಪ ಯಾತ್ರೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ‘ರಾಹುಲ್‌ ಗಾಂಧಿ ಒಬ್ಬ ವಿಫಲ ನಾಯಕ. ಅವರು ಯಾವ ರಾಜ್ಯಕ್ಕೆ ಹೋಗುತ್ತಾರೋ, ಅಲ್ಲಿ ಕಾಂಗ್ರೆಸ್ ನೆಲಕಚ್ಚುತ್ತದೆ. ಕರ್ನಾಟಕದಲ್ಲಿ ಪಾದಯಾತ್ರೆ ಮಾಡಿ ಹೋಗಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ ಹುಲ್ಲು ಹುಟ್ಟುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ’ ಎಂದು ವ್ಯಂಗ್ಯವಾಡಿದರು.

ADVERTISEMENT

224 ಕ್ಷೇತ್ರಗಳಲ್ಲೂ ರಥಯಾತ್ರೆ: ಸಿಎಂ
‘ಜನಸಂಕಲ್ಪ ಯಾತ್ರೆಯನ್ನು ನವೆಂಬರ್‌ನಲ್ಲಿ ಪೂರ್ಣಗೊಳಿಸಿ, ಡಿಸೆಂಬರ್‌ನಲ್ಲಿ ದಕ್ಷಿಣದಿಂದ ಬಿ.ಎಸ್‌.ಯಡಿಯೂರಪ್ಪ ಹಾಗೂ ಉತ್ತರದಿಂದ ನನ್ನ ನೇತೃತ್ವದಲ್ಲಿ ರಾಜ್ಯದ 224 ಕ್ಷೇತ್ರಗಳನ್ನೂ ರಥಯಾತ್ರೆ ಮೂಲಕ ತಲುಪಲಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಯಾತ್ರೆಯ ಉದ್ದೇಶವಾಗಿದೆ’ ಎಂದರು.

ಕಾಂಗ್ರೆಸ್‌ ಜಂಘಾಬಲ ಉಡುಗಿದೆ: ಯಡಿಯೂರಪ್ಪ
‘ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಸೇರುವ ಜನಸ್ತೋಮವನ್ನು ನೋಡಿ ಕಾಂಗ್ರೆಸ್‌ನ ಜಂಘಾಬಲ ಉಡುಗಿ ಹೋಗಿದೆ. ಹಣ, ಹೆಂಡ, ತೋಳ್ಬಲ ಪ್ರದರ್ಶಿಸಿದ ಮತ್ತು ಜಾತಿಯ ವಿಷಬೀಜ ಬಿತ್ತಿದ ಕಾಂಗ್ರೆಸ್‌ ಅನ್ನು ಜನರು ಸಂಪೂರ್ಣ ತಿರಸ್ಕರಿಸಿದ್ದಾರೆ. ಮತ್ತೆ ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿರುವ ಸಿದ್ದರಾಮಯ್ಯನವರ ಕನಸು ಎಂದಿಗೂ ನನಸಾಗುವುದಿಲ್ಲ’ ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಟೀಕಿಸಿದರು.

‘ಲಂಬಾಣಿ ತಾಂಡಾಗಳ ಪ್ರತಿ ಮನೆಗೂ ಹಕ್ಕುಪತ್ರ ವಿತರಣೆ’
‘ಲಂಬಾಣಿ ಸಮುದಾಯದವರ ಹಲವು ವರ್ಷಗಳ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಒಂದು ತಿಂಗಳಲ್ಲಿ ಮಾಡಲಾಗುವುದು. ತಾಂಡಾದ ಪ್ರತಿಯೊಂದು ಮನೆಗೂ ಹಕ್ಕುಪತ್ರಗಳನ್ನು ವಿತರಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ರೈತರಿಗಾಗಿ ಯಶಸ್ವಿನಿ ಯೋಜನೆ ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ₹500 ಕೋಟಿ ಮೀಸಲಿಡಲಾಗಿದೆ. ನ.14ರಿಂದ ಈ ಯೋಜನೆಯ ಲಾಭ ಸಿಗಲಿದೆ’ ಎಂದರು.

ಕುರಿಗಾಹಿಗಳಿಗೆ ಸಿಹಿಸುದ್ದಿ
‘ರಾಜ್ಯದ ಪ್ರತಿ ಕುರಿಗಾಹಿಗೆ 20 ಕುರಿಗಳು ಮತ್ತು ಒಂದು ಮೇಕೆ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ₹354 ಕೋಟಿ ಮೀಸಲಿಟ್ಟಿದ್ದೇವೆ. ಆದರೆ ಸಿದ್ದರಾಮಯ್ಯ ಈ ಯೋಜನೆ ಜಾರಿಗೊಳಿಸುವುದು ಅಸಾಧ್ಯ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಆಡಳಿತ ಅವಧಿಯಲ್ಲಿ ಈ ಯೋಜನೆ ಜಾರಿಗೊಳಿಸಲು ಏಕೆ ಸಾಧ್ಯವಾಗಲಿಲ್ಲ?’ ಎಂದು ಬೊಮ್ಮಾಯಿ ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.