
ಬಿ.ಆರ್.ಯಾವಗಲ್
ನರಗುಂದ (ಗದಗ ಜಿಲ್ಲೆ): ‘ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಪಕ್ಷದವರೇ ಆಗಿದ್ದರೂ, ನರಗುಂದ ತಾಲ್ಲೂಕಿನಲ್ಲಿ ಸರ್ಕಾರಿ ಕಾರ್ಯಕ್ರಮಗಳು ನಡೆದಾಗ ನಮ್ಮ ಗಮನಕ್ಕೆ ತರದೇ ನೇರವಾಗಿ ಭಾಗವಹಿಸುತ್ತಿರುವುದು ಬೇಸರ ತರಿಸಿದೆ. ಇದು ನಮ್ಮ ಸರ್ಕಾರ ಬಂದಾಗಿನಿಂದಲೂ ನಡೆಯುತ್ತಿದೆ. ಇದೇ ಧೋರಣೆ ಮುಂದುವರಿದರೆ ನರಗುಂದ ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ಬಹಿಷ್ಕಾರ ಹಾಕುವುದು ಅನಿವಾರ್ಯವಾಗಲಿದೆ’ ಎಂದು ಮಾಜಿ ಸಚಿವ ಬಿ.ಆರ್.ಯಾವಗಲ್ ಅವರು ಸಚಿವ ಎಚ್.ಕೆ.ಪಾಟೀಲ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
‘ಸ್ಥಳೀಯ ಶಾಸಕರ ಜತೆ, ಜಿಲ್ಲಾ ಉಸ್ತುವಾರಿ ಸಚಿವರು ಅಪವಿತ್ರ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ, ನರಗುಂದದಲ್ಲಿ ಕಾಂಗ್ರೆಸ್ ಮುಖಂಡರೇ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸ್ಥಳೀಯ ಶಾಸಕರು ಹೇಳಿದ ರೀತಿಯಲ್ಲಿ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದೊಂದು ರೀತಿಯಾಗಿ ಸಚಿವರೇ ನರಗುಂದದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲದಂತೆ ಮಾಡುವ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದರು.
‘ಐದು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಆದರೆ, ಕಾರ್ಯಕ್ರಮಕ್ಕೆ ಬರುವ ಪೂರ್ವದಲ್ಲಿ ನಮ್ಮ ಜತೆ ಚರ್ಚೆ ಕೂಡ ಮಾಡಿಲ್ಲ. ಕಾರ್ಯಕ್ರಮದ ಹಿಂದಿನ ದಿನ ಸಚಿವರ ಆಪ್ತ ಸಹಾಯಕರ ಮೂಲಕ ಮಾಹಿತಿ ಬರುತ್ತಿದೆ. ಪಕ್ಷದ ಸಚಿವರಾಗಿ ಪಕ್ಷದ ಮುಖಂಡರಿಗೆ ಹೇಳದಿರುವ ಪದ್ಧತಿ ಯಾವ ಜಿಲ್ಲೆಯಲ್ಲಿದೆ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಜಿಲ್ಲೆಯಲ್ಲಿ ಬಿಜೆಪಿ ಆಡಳಿತವೋ, ಕಾಂಗ್ರೆಸ್ ಆಡಳಿತವೋ ಎಂಬುದು ತಿಳಿಯದಾಗಿದೆ’ ಎಂದು ಕಿಡಿಕಾರಿದರು.
‘ಅ.31ರಂದು ನರಗುಂದ ನಗರದಲ್ಲಿ ಪುರಸಭೆ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ನಡೆದಿದೆ. ಅದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡತ್ವಕ್ಕೆ ಸಚಿವರು ಬೆಲೆ ನೀಡದಿರುವುದು ವಿಪರ್ಯಾಸ. ಇದೇ ಪ್ರವೃತ್ತಿ ಮುಂದುವರಿದರೆ ಪಕ್ಷ ಬಿಡಲು ಸಹಿತ ಹಿಂದೇಟು ಹಾಕುವುದಿಲ್ಲ’ ಎಂದು ತಿಳಿಸಿದರು.
ಅಪೂರ್ಣ ಕಟ್ಟಡ ಉದ್ಘಾಟನೆ ಯಾಕೆ?:
‘ಪುರಸಭೆ ಕಟ್ಟಡ ನಿರ್ಮಿಸಲು ನನ್ನ ಅವಧಿಯಲ್ಲಿ ಹೆಚ್ಚಿನ ಪ್ರಯತ್ನ ಮಾಡಲಾಗಿದೆ. ಆದರೆ, ಶಾಸಕ ಸಿ.ಸಿ.ಪಾಟೀಲ ನಾನೇ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಅವರು ಅವಲೋಕನ ಮಾಡಿಕೊಳ್ಳಬೇಕು’ ಎಂದರು.
‘ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. ಅಪೂರ್ಣ ಕಟ್ಟಡವನ್ನು ಉದ್ಘಾಟಿಸಲು ಸಚಿವರಿಗೆ ಹೇಗೆ ಮನಸ್ಸಾಯಿತು? ಅದನ್ನು ಉದ್ಘಾಟನೆ ಮಾಡಿಸಿದ ಶಾಸಕರಿಗೆ ಎಷ್ಟು ಸರಿ ಎನಿಸಿತು’ ಎಂದು ಟೀಕಿಸಿದರು.
ಮುಖಂಡರಾದ ಗುರುಪಾದಪ್ಪ ಕುರಹಟ್ಟಿ, ಪ್ರವೀಣ ಯಾವಗಲ್, ಟಿ.ಬಿ.ಶಿರಿಯಪ್ಪಗೌಡ್ರ, ಅಪ್ಪಣ್ಣ ನಾಯ್ಕರ, ಎಂ.ಎಸ್.ಪಾಟೀಲ, ಅಮರೇಶ ಕೋಟಿ, ಸಿ.ಬಿ.ಪಾಟೀಲ, ಮಲ್ಲೇಶ ಅಬ್ಬಿಗೇರಿ, ನಾಗನೂರ, ಹನಮಂತ ರಾಮಣ್ಣವರ, ಪ್ರಕಾಶ ಹಡಗಲಿ, ವಿಷ್ಣು ಸಾಠೆ ಇದ್ದರು.
ಹೊಂದಾಣಿಕೆ ಮುಂದುವರಿದರೆ ರಾಜ್ಯಾಧ್ಯಕ್ಷರಿಗೆ ದೂರು: ಯಾವಗಲ್ ಎಚ್ಚರಿಕೆ
‘ಇದೇರೀತಿ ರಾಜಕೀಯ ಹೊಂದಾಣಿಕೆ ಮುಂದುವರಿದರೆ ಈ ಬಗ್ಗೆ ಪಕ್ಷದ ರಾಜ್ಯ ಅಧ್ಯಕ್ಷರಿಗೆ ತಿಳಿಸಲಾಗುವುದು’ ಎಂದು ಮಾಜಿ ಸಚಿವ ಬಿ.ಆರ್.ಯಾವಗಲ್ ಎಚ್ಚರಿಕೆ ನೀಡಿದರು.
‘ನಮ್ಮ ಸಹನೆಯ ಕಟ್ಟೆ ಒಡೆದಿದೆ. ಸ್ಥಳೀಯ ಬಿಜೆಪಿ ಶಾಸಕರ ಆಣತಿಯಂತೆ ಜಿಲ್ಲಾ ಸಚಿವರು ವರ್ತಿಸುತ್ತಿದ್ದು, ಇದರ ಕುರಿತು ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸುವ ಯೋಚನೆ ಹೊಂದಿದ್ದೇವೆ. ನರಗುಂದ ಶಾಸಕರು ಮತ್ತು ನಾನು ಆತ್ಮೀಯ ಸ್ನೇಹಿತರು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗವಾಗಿ ಹೇಳುತ್ತಿರುವುದರಿಂದ ಪಕ್ಷ ಸಂಘಟನೆ ಮಾಡಲು ಹಿನ್ನೆಡೆಯಾಗಿದೆ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.