ಗದಗ: ‘ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬರು ಧರ್ಮ ಒಡೆಯುತ್ತಿದ್ದರೆ; ಇನ್ನೊಬ್ಬರು ದೇಶ ಒಡೆಯುತ್ತಿದ್ದಾರೆ. 77 ವರ್ಷಗಳ ನಂತರ ಕಾಂಗ್ರೆಸ್‌ನವರಿಗೆ ಸಂವಿಧಾನದ ಜಾಥಾ ನೆನಪಾಗಿದೆ’ ಎಂದು ಬಹುಜನ ಸಮಾಜ ಪಕ್ಷದ ಹಾವೇರಿ ಲೋಕಸಭಾ ಕ್ಷೇತ್ರದ ಸಂಯೋಜಕ ಬಸವರಾಜ ಯಲ್ಲಪ್ಪ ನವಲಗುಂದ ಆರೋಪ ಮಾಡಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಬಡವರಿಗೆ ಇಂದಿಗೂ ಸೂರು ಕೊಡಲು ಸಾಧ್ಯವಾಗಿಲ್ಲ. ಆದರೆ, ರಾಷ್ಟ್ರ ನಾಯಕಿ ಮಾಯಾವತಿ ಅವರು ಹಲವಾರು ವರ್ಷಗಳ ಹಿಂದೆಯೇ ಇದನ್ನು ಮಾಡಿ ತೋರಿಸಿದ್ದಾರೆ. ಮೋದಿ ಅವರು ಮತ್ತೆ 10 ಕೋಟಿ ಮನೆಗಳನ್ನು ಕೊಡುತ್ತೇವೆ ಎಂದು ಹೇಳಿರುವುದು ಹಾಸ್ಯಾಸ್ಪದ’ ಎಂದು ಲೇವಡಿ ಮಾಡಿದರು.
ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದ್ದು, ಈ ಬಾರಿ ಹಾವೇರಿ ಸೇರಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಹಾವೇರಿ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಶೀಘ್ರದಲ್ಲಿಯೇ ಹೆಸರು ಘೋಷಣೆಯಾಗಲಿದೆ ಎಂದು ತಿಳಿಸಿದರು.
ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕುಮಾರ ಭಾವಿಮನಿ, ಉಪಾಧ್ಯಕ್ಷ ಮಂಜುನಾಥ ಹುಬ್ಬಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಡದಪ್ಪ ಕೆಂಚಪ್ಪ ತಳಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.