ADVERTISEMENT

ಸಾಕ್ಷ್ಯ ನೀಡಲು ವಿಫಲ: ಪರಿಹಾರ ಕೋರಿದ್ದ ಗ್ರಾಹಕರ ಅರ್ಜಿ ವಜಾ ಮಾಡಿದ ಆಯೋಗ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 5:07 IST
Last Updated 26 ಜುಲೈ 2025, 5:07 IST
ಕೋರ್ಟ್ ತೀರ್ಪು
ಕೋರ್ಟ್ ತೀರ್ಪು   

ಗದಗ: ಎಲೆಕ್ಟ್ರಿಕ್‌ ವಾಹನ ದೋಷಪೂರಿತವಾಗಿರುವ ಕಾರಣ ಬೈಕ್‌ ಖರೀದಿ ಮೊತ್ತವನ್ನು ಶೇ 18 ಬಡ್ಡಿಯೊಂದಿಗೆ ವಾಪಸ್‌ ಕೊಡಿಸಬೇಕು ಅಥವಾ ಹೊಸ ಬೈಕ್‌ ಕೊಡಿಸಬೇಕು ಹಾಗೂ ಮಾನಸಿಕ ನೋವಿಗಾಗಿ ₹3 ಲಕ್ಷ ಪರಿಹಾರ ನೀಡುವಂತೆ ಆದೇಶಿಸಬೇಕು ಎಂಬ ದೂರುದಾರರ ಅರ್ಜಿಯನ್ನು ಇಲ್ಲಿನ ಜಿಲ್ಲಾ ಗ್ರಾಹಕ ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದ ವಿವರ:

ಗದಗ ನಗರದ ಶಿವಕಾಶಯ್ಯ.ಜಿ.ಗಡಗಿಮಠ ಅವರು 2022ರಲ್ಲಿ ಪ್ಯೂರ್‌ಎನರ್ಜಿ ಕಂಪನಿಯ ಎಲೆಕ್ಟ್ರಿಕ್‌ ಬೈಕ್‌ ಖರೀದಿಸಿದ್ದರು. ಪ್ರಾರಂಭದಿಂದಲೂ ಎಂಜಿನ್‌ ಚಾಲನೆ ಸಮಸ್ಯೆ ಇತ್ತು. ಜತೆಗೆ 2023ರಲ್ಲಿ ಧಾರವಾಡದಲ್ಲಿದ್ದ ಕಂಪನಿಯ ಸರ್ವಿಸ್‌ ಸೆಂಟರ್‌ ಕೂಡ ಬಂದ್‌ ಆಗಿದೆ ಎಂಬ ಕಾರಣಕ್ಕೆ ಅವರು ಗದಗ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ 2024ರ ಆಗಸ್ಟ್‌ 6ರಂದು ದೂರು ದಾಖಲಿಸಿ, ಪರಿಹಾರ ಕೊಡಿಸುವಂತೆ ಕೋರಿದ್ದರು.

ಪ್ಯೂರ್‌ಎನರ್ಜಿ ಕಂಪನಿ ಪರವಾಗಿ ವಕೀಲ ವಾದ ಮಂಡಿಸಿದ್ದ ಬಸವರಾಜ್‌ ಅವರು, ದೂರುದಾರರು ಬಳಕೆದಾರರ ಕೈಪಿಡಿಯಲ್ಲಿನ ಮಾರ್ಗಸೂಚಿ ಅನುಸರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.

ADVERTISEMENT

ಈ ವೇಳೆ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಗದಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಪೀಠವು, ಎಲೆಕ್ಟ್ರಿಕ್‌ ಬೈಕ್‌ನ ಬ್ಯಾಟರಿ ದೋಷಪೂರಿತ ಎಂಬುದರ ದಾಖಲೆಗಳನ್ನು ಒದಗಿಸುವಲ್ಲಿ ದೂರುದಾರರು ವಿಫರಾಗಿರುವುದಾಗಿ ಅಭಿಪ್ರಾಯಪಟ್ಟಿತು.

ದೂರುದಾರರು ಬೈಕ್‌ ಸರ್ವಿಸ್‌ನ ವಿವರ ಹಾಗೂ ಕಂಪನಿಯ ಬ್ಯಾಟರಿ ದೋಷಪೂರಿತ ಎಂಬುದರ ವಿವರಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದರಿಂದ ಅರ್ಜಿ ವಜಾಗೊಳಿಸಿರುವುದಾಗಿ ಅಧ್ಯಕ್ಷ ಎ.ಜಿ.ಮಾಲ್ದಾರ್‌ ಹಾಗೂ ಸದಸ್ಯೆ ಯಶೋದಾ ಭಾಸ್ಕರ್‌ ಪಾಟೀಲ ಅವರನ್ನು ಒಳಗೊಂಡ ಗದಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಪೀಠ ಜುಲೈ 17ರಂದು ಆದೇಶಿಸಿದೆ.

ಪರಿಹಾರ ಕೋರಿದ್ದ ಗ್ರಾಹಕರ ಅರ್ಜಿ ವಜಾ ಮಾಡಿದ ಆಯೋಗದೂರುದಾರರು ಬೈಕ್‌ ಸರ್ವಿಸ್‌ನ ವಿವರ ಹಾಗೂ ಕಂಪನಿಯ ಬ್ಯಾಟರಿ ದೋಷಪೂರಿತ ಎಂಬುದರ ವಿವರ ಒದಗಿಸುವಲ್ಲಿ ವಿಫಲವಾಗಿದ್ದರಿಂದ ಅರ್ಜಿ ವಜಾಗೊಳಿಸಲಾಗಿದೆ
ಎ.ಜಿ.ಮಾಲ್ದಾರ್, ಗ್ರಾಹಕರ ಆಯೋಗದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.