ADVERTISEMENT

ಚೀನಿ ಸೂತ್ರ ಗ್ರಾಮೀಣಾಭಿವೃದ್ಧಿಗೆ ಪೂರಕ: ಡಾ. ಬಾಲಸುಬ್ರಹ್ಮಣ್ಯಂ ಅಭಿಮತ

ಗ್ರಾಮೀಣಾಭಿವೃದ್ಧಿ ವಿವಿ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 21:45 IST
Last Updated 10 ಏಪ್ರಿಲ್ 2021, 21:45 IST
ಶೇ 90.1 ಅಂಕ ಪಡೆದು ಪ್ರಥಮ ರ‍್ಯಾಂಕ್‌ ಗಳಿಸಿದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮನುಷಾ ಸಿ. ಅವರಿಗೆ ಸಹ ಕುಲಾಧಿಪತಿ ಕೆ.ಎಸ್‌.ಈಶ್ವರಪ್ಪ ಹಾಗೂ ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ ಅವರು ಸ್ವರ್ಣ ಪದಕ ಹಾಗೂ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು.
ಶೇ 90.1 ಅಂಕ ಪಡೆದು ಪ್ರಥಮ ರ‍್ಯಾಂಕ್‌ ಗಳಿಸಿದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮನುಷಾ ಸಿ. ಅವರಿಗೆ ಸಹ ಕುಲಾಧಿಪತಿ ಕೆ.ಎಸ್‌.ಈಶ್ವರಪ್ಪ ಹಾಗೂ ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ ಅವರು ಸ್ವರ್ಣ ಪದಕ ಹಾಗೂ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು.   

ಗದಗ: ‘ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಚೀನಾ ಮತ್ತು ಮಲೇಷಿಯಾ ದೇಶಗಳು ಮಾಡಿದ ಪ್ರಯೋಗಗಳನ್ನು ನಾವು ಗಮನಿಸಬೇಕು. ಅದರ, ಜತೆಗೆ ನಮ್ಮದೇ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ನವಭಾರತದ ಕನಸು ಅರಳಿಸಬೇಕು’ ಎಂದು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ. ಬಾಲಸುಬ್ರಹ್ಮಣ್ಯಂ ಹೇಳಿದರು.

ಶನಿವಾರ ನಡೆದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಅವರು ದೀಕ್ಷಾ ಭಾಷಣ ಮಾಡಿದರು.

‘ಚೀನಾದಲ್ಲಿನ ಗ್ರಾಮೀಣ ಪ್ರದೇಶಗಳು ನಮ್ಮಷ್ಟೇ ಸಮಸ್ಯೆಗಳಿಂದ ಬಳಲುತ್ತಿವೆ. ಗ್ರಾಮೀಣ ಭಾಗದಲ್ಲಿ ತಾಂಡವವಾಡುತ್ತಿರುವ ಬಡತನ ನಿರ್ಮೂಲನೆ, ಹಳ್ಳಿಗಳಲ್ಲೇ ಸಮೃದ್ಧ ಅವಕಾಶ ಸೃಷ್ಟಿ ಹಾಗೂ ಭಾರತ ಮತ್ತು ಚೀನಾದ ಡಿಎನ್‌ಎ ಸಂಸ್ಕೃತಿ ಎಂಬುದನ್ನು ಅರ್ಥಮಾಡಿಕೊಂಡಿರುವ ಅವರು ಸಾಂಸ್ಕೃತಿಕ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿದ್ದರಿಂದ ಅಭಿವೃದ್ಧಿ ಸಾಧಿಸಿದ್ದಾರೆ. ಈ ಮೂರು ಸೂತ್ರಗಳನ್ನು ನಾವು ಕೂಡ ಅಳವಡಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಹೊಸ ಬಗೆಯ ಆರ್ಥಿಕ ಕ್ರಾಂತಿ ಆಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ತಯಾರಾಗುವ ವಸ್ತುಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಬೇಕಿದೆ. ನಮ್ಮಲ್ಲಿ ಹೊಸ ಆಲೋಚನೆಗಳಿಗೆ ಬರವಿಲ್ಲ; ಅವಕಾಶಗಳಿಗೆ ಕೊರತೆ ಇದೆ. ಸರ್ಕಾರ ಪ್ರತಿ ಹಳ್ಳಿಗೂ ಮೂಲಸೌಕರ್ಯ ಒದಗಿಸುವತ್ತ ಗಂಭೀರವಾಗಿ ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ಪಂಚಾಯತ್‌ ನಮ್ಮ ಅಭಿವೃದ್ಧಿಯ ಚಿಹ್ನೆ ಆಗಬೇಕು. ಅಭಿವೃದ್ಧಿಯ ಬೀಜ ಪಂಚಾಯತ್‌ಗಳಲ್ಲಿ ಮೊಳೆತರೆ; ಆ ಮರವು ರಾಜ್ಯದ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಎಚ್‌.ಕೆ.ಪಾಟೀಲ ಹಾಗೂ ಡಾ.ಅಶೋಕ ಮಹಾದೇವ ದಳವಾಯಿ ಅವರಿಗೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಕೆ.ಎಸ್‌.ಈಶ್ವರಪ್ಪ ಅವರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. 2017–18 ಮತ್ತು 2018–20 ಬ್ಯಾಚ್‌ನಲ್ಲಿ ಪ್ರಥಮ ರ‍್ಯಾಂಕ್‌ ಪಡೆದ 12 ಮಂದಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರದಾನ ಮಾಡಿದರು. ದ್ವಿತೀಯ ರ‍್ಯಾಂಕ್‌ ಪಡೆದ 12 ಮಂದಿ ಹಾಗೂ ತೃತೀಯ ರ‍್ಯಾಂಕ್‌ ಪಡೆದ 12 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಯಲಯದ ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ, ಕುಲಸಚಿವ ಪ್ರೊ.ಬಸವರಾಜ ಎಲ್‌.ಲಕ್ಕಣ್ಣವರ, ವಿತ್ತಾಧಿಕಾರಿ ಪ್ರಶಾಂತ್‌ ಜೆ.ಸಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.