ADVERTISEMENT

ನರಗುಂದ: ಕೊಣ್ಣೂರು ಚರಮೂರ್ತೇಶ್ವರ ಮಠದ ಪಟ್ಟಾಧಿಕಾರ ಮಹೋತ್ಸವ

ಐದನೇ ಪೀಠಾಧಿಪತಿಯಾಗಿ ಶಿವಾನಂದದೇವರು

ಬಸವರಾಜ ಹಲಕುರ್ಕಿ
Published 9 ಮೇ 2025, 6:24 IST
Last Updated 9 ಮೇ 2025, 6:24 IST
ಶಿವಾನಂದ ದೇವರು
ಶಿವಾನಂದ ದೇವರು   

ನರಗುಂದ: ಕಣ್ವ ಮಹರ್ಷಿಗಳ ನಾಡು ಎಂದೇ ಖ್ಯಾತಿಯಾದ, ಜನಪದ ಕಲೆಗಳ ತವರೂರು ತಾಲ್ಲೂಕಿನ ಕೊಣ್ಣೂರಿನ ಚರಮೂರ್ತೇಶ್ವರ ಮಠದ ಐದನೇ ಪೀಠಾಧಿಪತಿಯಾಗಿ ಶಿವಾನಂದದೇವರು ಮೇ 9ರಂದು ಪಟ್ಟಾಧಿಕಾರ ಹೊಂದಲಿದ್ದು ಇದರ ಅಂಗವಾಗಿ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಮಲಪ್ರಭಾ ಹೊಳೆ ದಂಡೆ ಮೇಲಿರುವ ಕೊಣ್ಣೂರ ವಿಶಿಷ್ಟ ಗ್ರಾಮದಲ್ಲಿ ಚರಮೂರ್ತೇಶ್ವರ ಮಠವೆಂದೇ ಪ್ರಸಿದ್ಧಿ ಪಡೆದ ವಿರಕ್ತಮಠದ ಐದನೇ ಪೀಠಾಧಿಪತಿಗಳಾಗಲಿರುವ ಶಿವಾನಂದದೇವರ ಪಟ್ಟಾಧಿಕಾರ ಮಹೋತ್ಸವ ಪಂಚಪೀಠಾಧೀಶ್ವರರ ಹಾಗೂ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ.

ಶತಮಾನಗಳ ಇತಿಹಾಸ ಹೊಂದಿರುವ ವಿರಕ್ತಮಠವು ಆರಂಭದ ಪೀಠಾಧಿಪತಿಗಳಾಗಿ ಚರಮೂರ್ತೇಶ್ವರರು ಅಧಿಕಾರ ವಹಿಸಿಕೊಂಡಿದ್ದರಿಂದ, ಅವರ ಸಮಾಜಮುಖಿ ಸೇವೆಗಳ ಪರಿಣಾಮ ಈ ಮಠಕ್ಕೆ ಚರಮೂರ್ತೇಶ್ವರ ಮಠವೆಂದೇ ಜನಜನಿತವಾಯಿತು.

ADVERTISEMENT

ಮೊದಲ ಪೀಠಾಧಿಪತಿಯಾಗಿ ಚರಮೂರ್ತೇಶ್ವರ ಶ್ರೀಗಳು ಪವಾಡಪುರುಷರಾಗಿ ಭಕ್ತರನ್ನು ಉದ್ಧರಿಸಿದರು. 2ನೇ ಪೀಠಾಧಿಪತಿಯಾಗಿ ಬಸಯ್ಯ ಶಿವಯೋಗಿಗಳು, 3ನೇ ಪೀಠಾಧಿಪತಿಯಾಗಿ ಚನ್ನವೀರೇಶ್ವರ ಶಿವಾಚಾರ್ಯರು ಮಠದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 4ನೇ ಪೀಠಾಧಿಪತಿಯಾಗಿ ಶಿವಕುಮಾರ ಶಿವಾಚಾರ್ಯರು ಅಧಿಕಾರ ವಹಿಸಿಕೊಂಡ ನಂತರ ಮಠ ಸಮಾಜಮುಖಿಯಾಯಿತು.

ವೈದಿಕ, ಜ್ಯೋತಿಷ್ಯ ಪಂಡಿತರಾಗಿ ವಿವಿಧ ಕಾರ್ಯಗಳ ಮೂಲಕ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದರು. ಎರಡು ದಶಕಗಳಿಂದ ಕೊಣ್ಣೂರ, ಕೆರೂರ ಭಾಗದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಅವರಿಗೆ 60 ವರ್ಷ ಆಗಿದ್ದದರಿಂದ ಜೊತೆಗೆ ಕೆರೂರ ವಿರಕ್ತಮಠದ ಜವಾಬ್ದಾರಿ ಪರಿಣಾಮ ಕೊಣ್ಣೂರಿನ ತಮ್ಮ ವಿರಕ್ತಮಠದ ಪೀಠಾಧಿಪತಿ ಸ್ಥಾನಕ್ಕೆ ಶಿವಾನಂದದೇವರನ್ನು 5ನೇ ಪೀಠಾಧಿಪತಿಗಳಾಗಿ ನೇಮಕಗೊಂಡಿದ್ದು ಅವರ ಪಟ್ಟಾಧಿಕಾರ ಶುಕ್ರವಾರ ನಡೆಯಲಿದೆ.

ಶಿವಾನಂದದೇವರು: ಕೂಡಲಸಂಗಮದಿಂದ ಅನತಿ ದೂರದಲ್ಲಿರುವ ಮ್ಯಾಗೇರಿಯ ಮಹಾಂತಯ್ಯ ಮತ್ತು ದ್ರಾಕ್ಷಾಯಿಣಿ ಹಿರೇಮಠರ ಪುತ್ರನಾಗಿ ಜನಿಸಿದ ಶಿವಾನಂದ ದೇವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯಲ್ಲಿ ‘ಶ್ರೀಕರ ಭಾಷ್ಯದ ಒಂದು ಸಮನ್ವಯ ಅಧ್ಯಯನ’ ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಸಮಾಜಮುಖಿ ಸೇವೆ ಮಾಡಲು ವೈದಿಕ, ಜ್ಯೋತಿಷ್ಯ, ಸಂಗೀತ ವಿಷಯಗಳಲ್ಲಿಯೂ ಪ್ರಾವೀಣ್ಯತೆ ಸಾಧಿಸಿದ್ದಾರೆ.

ಕೊಣ್ಣೂರು ಚರಮೂರ್ತೇಶ್ವರ ಮಠದ ಶಿವಕುಮಾರ ಶಿವಾಚಾರ್ಯರ ಗುರು ಕಾರುಣ್ಯ ಇವರಿಗೆ ಲಭಿಸಿತು. ಆ ಕಾರುಣ್ಯವೇ ಚರಮೂತೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿದ್ದು, ಇವರ ಚರಪಟ್ಟಾಧಿಕಾರ ಮಹೋತ್ಸವ ಮೇ 9ರಂದು ನಡೆಯಲಿದೆ. ಇದರ ಸಾನ್ನಿಧ್ಯವನ್ನು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು, ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯರು, ನೇತೃತ್ವವನ್ನು ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಅನುಗ್ರಹ ಮತ್ತು ಸಮಾಜ ಸೇವಾ ದೀಕ್ಷೆಯನ್ನು ಬಸವಜಯಚಂದ್ರ ಸ್ವಾಮೀಜಿ ನೀಡುವರು.

ನಂತರ ಪಟ್ಟಾಧಿಕಾರ ಹೊಂದಿದ ಶ್ರೀಗಳ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೈಭವದೊಂದಿಗೆ ಮತ್ತು ಮಹಿಳೆಯರ ಕುಂಭ ಮೇಳದೊಂದಿಗೆ ನೆರವೇರುವುದು. ಈ ಸಂದರ್ಭದಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಉಪದೇಶಾಮೃತ ನೀಡುವರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.