ADVERTISEMENT

ಮದ್ಯ ಖರೀದಿಗೆ ಬಂದು ಮೂರ್ಖರಾದರು..!

ಏ.1ರಿಂದ ಎಂಎಸ್‌ಐಎಲ್‌ ಮಳಿಗೆ ತೆರೆಯಲಿದೆ ಎಂದು ಸಾಮಾಜಿಕ ತಾಣದಲ್ಲಿ ಹರಿದಾಡಿದ ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:43 IST
Last Updated 1 ಏಪ್ರಿಲ್ 2020, 13:43 IST
ಗದುಗಿನ ಮುಳಗುಂದ ರಸ್ತೆಯಲ್ಲಿರುವ ಎಂಎಸ್‌ಐಎಲ್‌ ಮಳಿಗೆಯ ಮುಂದೆ ಬುಧವಾರ ಬೆಳಿಗ್ಗೆ ಮದ್ಯ ಖರೀದಿಗಾಗಿ ಸಾಲುಟ್ಟಿ ನಿಂತಿದ್ದ ಜನರು
ಗದುಗಿನ ಮುಳಗುಂದ ರಸ್ತೆಯಲ್ಲಿರುವ ಎಂಎಸ್‌ಐಎಲ್‌ ಮಳಿಗೆಯ ಮುಂದೆ ಬುಧವಾರ ಬೆಳಿಗ್ಗೆ ಮದ್ಯ ಖರೀದಿಗಾಗಿ ಸಾಲುಟ್ಟಿ ನಿಂತಿದ್ದ ಜನರು   

ಗದಗ: ಮಂಗಳವಾರ ರಾತ್ರಿ ಲಭಿಸಿದ ‘ಖಚಿತ ಮಾಹಿತಿ’ ನಂಬಿಕೊಂಡು ಇಲ್ಲಿನ ಮುಳಗುಂದ ರಸ್ತೆಯಲ್ಲಿರುವ ಎಂಎಸ್‌ಐಎಲ್‌ ಮಳಿಗೆಯ ಮುಂದೆ ಬುಧವಾರ ನಸುಕಿನಲ್ಲೇ ಮದ್ಯ ಖರೀದಿಗೆ ಮುಗಿಬಿದ್ದವರು ನಿಜಕ್ಕೂ ಮೂರ್ಖರಾದರು. ಅಷ್ಟೇ ಅಲ್ಲ, ಸ್ವಲ್ಪದರಲ್ಲೇ ಪೊಲೀಸರ ಬೆತ್ತದೇಟನ್ನು ತಪ್ಪಿಸಿಕೊಂಡರು.

ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಕರ್ಪ್ಯೂ ಮಾರ್ಚ್‌ 31ರ ಮಧ್ಯರಾತ್ರಿಯೇ ಜಿಲ್ಲೆಯಲ್ಲಿ ಕೊನೆಗೊಂಡಿದ್ದು, ಏ.1ರಿಂದ ಎಂಎಸ್‌ಐಎಲ್‌ ಮಳಿಗೆ ತೆರೆಯಲಿದೆ ಎಂಬ ಸುಳ್ಳು ಸುದ್ದಿ, ಮಂಗಳವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಬುಧವಾರ ಏಪ್ರಿಲ್‌ ಫೂಲ್‌ ಇದ್ದರೂ, ಈ ಸುದ್ದಿಯನ್ನು ಬಲವಾಗಿ ನಂಬಿಕೊಂಡು ಮದ್ಯಪ್ರಿಯರು ಎಂಎಸ್‌ಐಎಲ್‌ ಮಳಿಗೆಯ ಮುಂದೆ ಜಮಾಯಿಸಿದ್ದರು. ‘ಎಣ್ಣೆ’ ಖರೀದಿ ಉತ್ಸಾಹದಲ್ಲಿ ಮುಖಕ್ಕೆ ಮಾಸ್ಕ್‌ ಧರಿಸಿಕೊಂಡು, ‘ಸಾಮಾಜಿಕ ಅಂತರ’ವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸರತಿ ಸಾಲಿನಲ್ಲಿ ನಿಂತಿದ್ದರು.

ಕೆಲವರು ಬೈಕ್‌, ಸೈಕಲ್‌ಗಳಲ್ಲಿ ನಗರಕ್ಕೆ ಬಂದರೆ, ಇನ್ನು ಕೆಲವರು ನಾಲ್ಕೈದು ಕಿ.ಮೀ ಕಾಲ್ನಡಿಗೆಯಲ್ಲಿ ಬಂದಿದ್ದರು. ಇನ್ನೇನು ಮಳಿಗೆ ಬಾಗಿಲು ತೆರೆಯಬಹುದು, ಮದ್ಯ ಸಿಗಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಇವರಿಗೆ, ಗದಗ ಗ್ರಾಮೀಣ ಠಾಣೆ ಪೊಲೀಸರು ಲಾಠಿ ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದಾಗಲೇ, ತಾವು ಮೂರ್ಖರಾಗಿರುವ ಸಂಗತಿ ತಿಳಿದದ್ದು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಮದ್ಯಪ್ರಿಯರ ಉತ್ಸಾಹ ಜರ್ರನೆ ಇಳಿಯಿತು. ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದರು.

ADVERTISEMENT

ಏ.1ರಿಂದ ಎಂಎಸ್‌ಐಎಲ್‌ ತೆರೆಯಲಿದೆ ಎಂಬ ಸುಳ್ಳು ಸುದ್ದಿ ನಂಬಿಕೊಂಡು ಗ್ರಾಮೀಣ ಪ್ರದೇಶಗಳಿಂದಲೂ ಸಾಕಷ್ಟು ಮದ್ಯಪ್ರಿಯರು, ಬುಧವಾರ ಬೆಳಿಗ್ಗೆ ತಾಲ್ಲೂಕು ಕೇಂದ್ರಗಳಿಗೆ ಬಂದಿದ್ದರು. ‘ಎಲ್ಲರೂ ಒಟ್ಟಿಗೆ ಹೋದರೆ ಸಮಸ್ಯೆಯಾಗುತ್ತದೆ ಎಂದು, ಕೆಲವು ಗ್ರಾಮಗಳಲ್ಲಿ, ಒಬ್ಬರನ್ನು ಆಯ್ಕೆ ಮಾಡಿ, ಅವರ ಕೈಯಲ್ಲಿ ಹಣ ಮತ್ತು ತಮಗೆ ಬೇಕಿರುವ ಮದ್ಯದ ಬೇಡಿಕೆ ಪಟ್ಟಿ ಕೊಟ್ಟು ಕಳುಹಿಸಿದ್ದರು. ಆದರೆ, ಇದು ಏಪ್ರಿಲ್‌ ಫೂಲ್‌ ಅನ್ನುವುದು ನಂತರ ತಿಳಿಯಿತು’ ಎಂದು ಹೆಸರು ಹೇಳಲು ಇಚ್ಛಿಸದ ಮದ್ಯಪ್ರಿಯರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.