ADVERTISEMENT

ಜನತಾ ಕರ್ಫ್ಯೂ ನಂತರ ಜನತೆ ಮಾರುಕಟ್ಟೆಗೆ ಲಗ್ಗೆ

ಪ್ರತಿಬಂಧಕಾಜ್ಞೆ ನಡುವೆಯೂ ಗುಂಪುಗೂಡಿದ ಸಾರ್ವಜನಿಕರು; ಪೊಲೀಸರಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 13:57 IST
Last Updated 23 ಮಾರ್ಚ್ 2020, 13:57 IST
ಗದುಗಿನ ಮಾರುಕಟ್ಟೆಗೆ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು
ಗದುಗಿನ ಮಾರುಕಟ್ಟೆಗೆ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು   

ಗದಗ: ಭಾನುವಾರದ ಜನತಾ ಕರ್ಫ್ಯೂಗೆ ಸಂಪೂರ್ಣ ಸ್ತಬ್ಧವಾಗಿದ್ದ ಜಿಲ್ಲೆಯು ಸೋಮವಾರ ಬೆಳಿಗ್ಗೆ ಯಥಾಸ್ಥಿತಿಗೆ ಮರಳಿತು. ಗದಗ–ಬೆಟಗೇರಿ ಅವಳಿ ನಗರದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಮುಗಿಬಿದ್ದ ದೃಶ್ಯ ಕಂಡು ಬಂದಿತು.

ಹಣ್ಣು, ತರಕಾರಿ, ದಿನಸಿ ಸಾಮಗ್ರಿಗಳ ಖರೀದಿ ಜೋರಾಗಿತ್ತು. ನಗರದೊಳಗಿನವರು ಮಾತ್ರವಲ್ಲ, ಗ್ರಾಮಾಂತರ ಪ‍್ರದೇಶಗಳಿಂದಲೂ ಜನರು ದ್ವಿಚಕ್ರ ವಾಹನ, ಕಾರು ಮತ್ತು ಲಘು ವಾಣಿಜ್ಯ ವಾಹನಗಳಲ್ಲಿ ಮಾರುಕಟ್ಟೆಗೆ ಧಾವಿಸಿದ್ದರಿಂದ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿತ್ತು. ಪೊಲೀಸರು ಜನರು ಗುಂಪುಗೂಡುವುದನ್ನು ಬೇರ್ಪಡಿಸಲು ಹರಸಾಹಸ ಪಡುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಕೊರೊನಾ ಸೋಂಕು ಹರಡಂತೆ ತಡೆಯಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಮಾರ್ಚ್‌ 31ರ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಸೋಮವಾರ ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ADVERTISEMENT

ನಗರದ ಪ್ರಮುಖ ವೃತ್ತಗಳಲ್ಲಿ, ಸಿಗ್ನಲ್‌ಗಳಲ್ಲಿ ಕಾರು ಮತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರಿಗೆ, ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು. ಮಾಸ್ಕ್‌ ಇಲ್ಲದವರಿಗೆ ಹ್ಯಾಂಡ್‌ ಕರ್ಚಿಪ್‌ ಹಾಕಿಕೊಳ್ಳುವಂತೆ ಸೂಚಿಸುತ್ತಿದ್ದರು. ಸಾರ್ವಜನಿಕರು ಪೊಲೀಸರ ಸೂಚನೆ ಪಾಲಿಸಿ ಪ್ರತಿಯಾಗಿ ಧನ್ಯವಾದ ಸಲ್ಲಿಸುತ್ತಿದ್ದರು.

ಕೊರೊನಾ ಸೋಂಕು ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಬಿಗಿಗೊಳಿಸಿದ ಬೆನ್ನಲ್ಲೇ, ಮಾಸ್ಕ್‌ ಮತ್ತು ಹ್ಯಾಂಡ್‌ ಸ್ಯಾನಿಟೈಸರ್‌ ಬೇಡಿಕೆ ಹೆಚ್ಚಿದೆ. ನಗರದ ಟಾಂಗಾಕೂಟ, ಮಾರುಕಟ್ಟೆ ರಸ್ತೆ ಸೇರಿ ನಗರದ ವಿವಿಧೆಡೆ ಮಾಸ್ಕ್‌ಗಳ ಮಾರಾಟ ಜೋರಾಗಿತ್ತು. ಗುಣಮಟ್ಟಕ್ಕೆ ತಕ್ಕಂತೆ ₹40ರಿಂದ ₹200 ಮಾಸ್ಕ್‌ ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.