ADVERTISEMENT

ಮತ್ತಿಬ್ಬರು ಗುಣಮುಖ: ಗದಗದಲ್ಲಿ 6ಕ್ಕೆ ಇಳಿದ ಸಕ್ರಿಯ ಪ್ರಕರಣ

ಮುಂಬೈನಿಂದ ಜಿಲ್ಲೆಗೆ ರೈಲಿನ ಮೂಲಕ 747 ಪ್ರಯಾಣಿಕರ ಆಗಮನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 15:36 IST
Last Updated 16 ಜೂನ್ 2020, 15:36 IST
ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ ಇಬ್ಬರನ್ನು ಬುಧವಾರ ಗದುಗಿನ ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು 
ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ ಇಬ್ಬರನ್ನು ಬುಧವಾರ ಗದುಗಿನ ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು    

ಗದಗ: ಕೊರೊನಾ ಸೋಂಕು ದೃಢಪಟ್ಟು ಇಲ್ಲಿನ ಕೋವಿಡ್‌–19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಂಗಳವಾರ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಆರಕ್ಕೆ ಇಳಿಕೆಯಾಗಿದೆ.

ಜೂನ್ 7ರಂದು ಮುಂಬೈನಿಂದ ರೈಲಿನಲ್ಲಿ ಗದುಗಿಗೆ ಬಂದಿದ್ದ 59 ವರ್ಷದ ಪುರುಷ (ಪಿ–5383) ಹಾಗೂ 49 ವರ್ಷದ ಮಹಿಳೆಯಲ್ಲಿ (ಪಿ–5384) ಸೋಂಕು ಕಾಣಿಸಿಕೊಂಡಿತ್ತು. ರೈಲು ನಿಲ್ದಾಣದಲ್ಲಿ ಇಳಿದ ತಕ್ಷಣವೇ ಇವರಿಬ್ಬರನ್ನು ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸೋಂಕು ದೃಢಪಟ್ಟ ನಂತರ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ಮುಂದುವರಿಸಲಾಗಿತ್ತು. ಇದೀಗ ಇಬ್ಬರೂ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

‘ಮುಂದಿನ 14 ದಿನಗಳ ಕಾಲ ಇವರು ಮನೆಯಲ್ಲೇ ಇರಬೇಕು, ಆರೋಗ್ಯ ಕಾರ್ಯಕರ್ತರು ಇಬ್ಬರ ಮೇಲೂ ನಿರಂತರ ನಿಗಾ ವಹಿಸಲಿದ್ದಾರೆ’ ಎಂದು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಪಿ.ಎಸ್‌. ಭೂಸರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 49 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 41 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಕಳೆದೊಂದು ವಾರದಲ್ಲಿ ಹೊಸ ಕೋವಿಡ್‌–19 ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಜತೆಗೆ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಿರುವುದು ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲೆಯ ಜನತೆಗೆ ದೊಡ್ಡ ಮಟ್ಟದಲ್ಲಿ ಸಮಾಧಾನ ತಂದಿದೆ.

ಒಟ್ಟು 49 ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೊದಲ ಬಾರಿಗೆ ಏ. 6ರಂದು 80 ವರ್ಷದ ವೃದ್ಧೆಗೆ (ಪಿ–166) ಸೋಂಕು ದೃಢಪಟ್ಟಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಏ. 8ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಸೋಂಕು ದೃಢಪಟ್ಟು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ 44 ವರ್ಷದ ಪುರುಷ (ಪಿ–4082) ಜೂನ್ 3ರಂದು ಮೃತಪಟ್ಟಿದ್ದರು.

ಮುಂಬೈನಿಂದ ಜಿಲ್ಲೆಗೆ ರೈಲಿನಲ್ಲಿ ಬರುತ್ತಿರುವ ಪ್ರಯಾಣಿಕರಲ್ಲಿ ಬೆಳಗಾವಿ, ಹಾವೇರಿ, ಧಾರವಾಡ, ಬಳ್ಳಾರಿ ಜಿಲ್ಲೆಯವರೂ ಸೇರಿದ್ದು, ಅವರನ್ನು ಸ್ವಂತ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಉಳಿದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಜೂನ್‌ 15ರವರೆಗೆ ಒಟ್ಟು747 ಜನರು ರೈಲಿನ ಮೂಲಕ ಗದುಗಿಗೆ ಬಂದಿಳಿದಿದ್ದಾರೆ. ಇವರಲ್ಲಿ 314 ಜನರು ಜಿಲ್ಲೆಯವರು. ಉಳಿದ 433 ಜನರು ಹೊರ ಜಿಲ್ಲೆಯವರು. ಮುಂಬೈನಿಂದ ಬಂದ 8 ಜನರಿಗೆ ಇದುವರೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅಗಸ ಮತ್ತು ಕ್ಷೌರಿಕರಿಗೆ ಪರಿಹಾರ: ‘ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ₹5 ಸಾವಿರ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಆದೇಶ ಹೊರಡಿಸಿದ್ದು, ಅರ್ಹರಿಗೆ ಪರಿಹಾರ ಲಭಿಸುವಂತೆ ಮಾಡಲು ಕ್ರಮ ವಹಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ. ಹೇಳಿದರು.

ಮಂಗಳವಾರ ಇಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಫಲಾನುಭವಿಗಳು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು. ಸೌಲಭ್ಯವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೀಮಿತಗೊಳಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ 338 ಕ್ಷೌರಿಕ ಹಾಗೂ 89 ದೋಭಿ ವೃತ್ತಿಯಲ್ಲಿ ತೊಡಗಿರುವವರ ಒಟ್ಟು 427 ಅರ್ಜಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಬಂದಿವೆ. ಅರ್ಜಿದಾರರು ಉದ್ಯೋಗ ಪ್ರಮಾಣ ಪತ್ರವನ್ನೂ ಅಪ್‌ಲೋಡ್‌ ಮಾಡಬೇಕಾಗುತ್ತದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ತಿಳಿಸಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ, ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಲ್ಲಪ್ಪ ಹಡಪದ, ಎ.ವಿ. ಪ್ರಭು, ಪಂಚಾಕ್ಷರಿ ಹಡಪದ ಸಮಾಜದ ಸದಸ್ಯರು, ಸಂದೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.