ADVERTISEMENT

ಗದಗ: ಗುಜರಾತ್‌ನಿಂದ ಬಂದ ನಾಲ್ವರಿಗೆ ಕೋವಿಡ್‌-19 ದೃಢ

ಎರಡು ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 11:23 IST
Last Updated 14 ಮೇ 2020, 11:23 IST
ಕಂಟೈನ್‌ಮೆಂಟ್‌ ಪ್ರದೇಶವಾದ ಗದುಗಿನ ಗಂಜಿ ಬಸವೇಶ್ವರ ಓಣಿಗೆ ಜನರ ಪ್ರವೇಶ ನಿರ್ಬಂಧಿಸಿ, ತಾತ್ಕಾಲಿಕ ಬೇಲಿ ಹಾಕಿರುವುದು
ಕಂಟೈನ್‌ಮೆಂಟ್‌ ಪ್ರದೇಶವಾದ ಗದುಗಿನ ಗಂಜಿ ಬಸವೇಶ್ವರ ಓಣಿಗೆ ಜನರ ಪ್ರವೇಶ ನಿರ್ಬಂಧಿಸಿ, ತಾತ್ಕಾಲಿಕ ಬೇಲಿ ಹಾಕಿರುವುದು   

ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಗುಜರಾತ್‌ನ ಅಹಮದಾಬಾದ್‌ನಿಂದ ಜಿಲ್ಲೆಗೆ ಬಂದಿದ್ದ ನಾಲ್ವರಲ್ಲಿ ಗುರುವಾರ ಸೋಂಕು ದೃಢಪಟ್ಟಿದೆ. ಬುಧವಾರ ಗುಜರಾತ್‌ನಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಇದರೊಂದಿಗೆ ಗುಜರಾತ್‌ನಿಂದ ಬಂದ ಐವರಲ್ಲಿ ಸೋಂಕು ಪತ್ತೆಯಾಗಿದೆ.

ಲಾಕ್‌ಡೌನ್‌ ಸಡಿಲಿಕೆಯ ಬೆನ್ನಲ್ಲೇ, ಬೆಟಗೇರಿಯ 9 ಜನರು ಮೇ 12ರಂದು ಗುಜರಾತ್‌ನ ಅಹಮದಾಬಾದ್‌ನಿಂದ ಗದುಗಿಗೆ ಬಂದಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಜಿಲ್ಲೆಯ ಗಡಿಯಲ್ಲೇ ತಡೆದು, ಪರಿಶೀಲನೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಎಲ್ಲರ ಗಂಟಲು ದ್ರವದ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ಈ 9 ಮಂದಿಯಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿದೆ.

62 ವರ್ಷದ ಪುರುಷ (ಪಿ- 979) 47 ವರ್ಷದ ಪುರುಷ (ಪಿ-971) 44 ವಯಸ್ಸಿನ ಪುರುಷ (ಪಿ- 972) ಹಾಗೂ 28 ವಯಸ್ಸಿನ ಯುವಕನಲ್ಲಿ (ಪಿ-973) ಗುರುವಾರ ಸೋಂಕು ದೃಢಪಟ್ಟಿದೆ. ಇವರನ್ನು ಜಿಲ್ಲಾ ಕೇಂದ್ರದ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಮೇ 12ರಂದು ಒಂದೇ ದಿನದಲ್ಲಿ ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಗುಜರಾತ್‌ನಿಂದ ಜಿಲ್ಲೆಗೆ ಬಂದ 16 ಮಂದಿಯಲ್ಲಿ 36 ವಯಸ್ಸಿನ ಪುರುಷನಿಗೆ(ಪಿ-905) ಸೋಂಕು ದೃಢಪಟ್ಟಿತ್ತು. ಇದರ ಜತೆಗೆ ಗದುಗಿನ ಗಂಜಿ ಬಸವೇಶ್ವರ ಓಣಿ ನಿವಾಸಿಗಳಾದ 61 ಮತ್ತು 62 ವರ್ಷದ ಇಬ್ಬರು ಪುರುಷರಲ್ಲಿ (ಪಿ-912 ಮತ್ತು ಪಿ-913) ಸೋಂಕು ದೃಢಪಟ್ಟಿತ್ತು. ಇದೀಗ ಗುರುವಾರದ ನಾಲ್ಕು ಪ್ರಕರಣಗಳು ಸೇರಿ, ಜಿಲ್ಲೆಯಲ್ಲಿ ಒಟ್ಟು 7 ಕೊರೊನಾ ಸಕ್ರಿಯ ಪ್ರಕರಣಗಳಿವೆ.

ಗುಜರಾತ್‌ನಿಂದ ಎರಡು ತಂಡಗಳಲ್ಲಿ ಗದುಗಿಗೆ ಬಂದ 25 ಮಂದಿಯಲ್ಲಿ ಇದುವರೆಗೆ ಐವರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದ 20 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿ, ವರದಿಗಾಗಿ ಕಾಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.