ADVERTISEMENT

ಲಾಕ್‌ಡೌನ್‌ ಸಂಪೂರ್ಣ; ಜಿಲ್ಲೆ ಸ್ತಬ್ಧ

ರಸ್ತೆಗಿಳಿಯದೆ, ಮನೆಯಲ್ಲಿದ್ದುಕೊಂಡು ಬೆಂಬಲ ಸೂಚಿಸಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 24 ಮೇ 2020, 10:44 IST
Last Updated 24 ಮೇ 2020, 10:44 IST
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾನುವಾರ ಗದುಗಿನ ಸ್ಟೇಷನ್‌ ರಸ್ತೆ ಜನ ಸಂಚಾರ ಇಲ್ಲದೆ ಬಿಕೊ ಎನ್ನುತ್ತಿತ್ತು
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾನುವಾರ ಗದುಗಿನ ಸ್ಟೇಷನ್‌ ರಸ್ತೆ ಜನ ಸಂಚಾರ ಇಲ್ಲದೆ ಬಿಕೊ ಎನ್ನುತ್ತಿತ್ತು   

ಗದಗ: ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನರು ರಸ್ತೆಗಿಳಿಯದೆ ಮನೆಯೊಳಗಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದರು.

ಲಾಕ್‌ಡೌನ್‌ನಿಂದಾಗಿ ಗದಗ–ಬೆಟಗೇರಿ ಅವಳಿ ನಗರವೂ ಸೇರಿ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು. ವಾಹನಗಳು ರಸ್ತೆಗಿಳಿಯಲಿಲ್ಲ. ಬೆಳಿಗ್ಗೆ ಪತ್ರಿಕೆ, ಹಾಲು, ತರಕಾರಿ ಖರೀದಿಸಲು, ವಾಯುವಿಹಾರಕ್ಕಾಗಿ ಬೆರಳೆಣಿಕೆಯ ಜನರು ರಸ್ತೆಗಿಳಿದಿದ್ದರು. ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಖಡಕ್‌ ಎಚ್ಚರಿಕೆ ನೀಡಿ ವಾಪಸ್‌ ಮನೆಗಳಿಗೆ ಕಳುಹಿಸಿದರು. ಆಸ್ಪತ್ರೆ, ಔಷಧ ಅಂಗಡಿ, ಅಗತ್ಯ ವಸ್ತು, ಸೇವೆಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳು ಸಂಪೂರ್ಣ ಬಂದ್‌ ಆಗಿದ್ದವು.

ಭಾನುವಾರ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿತ್ತು. ಶನಿವಾರವೇ ಮದ್ಯದಂಗಡಿಗಳಲ್ಲಿ ಪಾರ್ಸಲ್‌ ಪಡೆಯಲು ಗ್ರಾಹಕರ ದಟ್ಟಣೆ ಇತ್ತು. ಸೋಮವಾರ ಜಿಲ್ಲೆಯಾದ್ಯಂತ ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಿಸುತ್ತಿದ್ದು, ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಸ್ಲಿಮರು ಶನಿವಾರವೇ ಹಬ್ಬದ ಖರೀದಿ ನಡೆಸಿದ್ದರು.

ADVERTISEMENT

ಮೇ 17ರ ನಂತರ ಲಾಕ್‌ಡೌನ್‌ ಸಡಿಲಿಸಿದ ನಂತರ ಇಡೀ ಜಿಲ್ಲೆಯಾದ್ಯಂತ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ ಎನ್ನುವಷ್ಟರ ಮಟ್ಟಿಗೆ ಜನರು ಮತ್ತು ವಾಹನಗಳ ಒಡಾಟ ಹೆಚ್ಚಿತ್ತು. ಜನರು ಕೊರೊನಾ ಸೋಂಕು ಮರೆತವರಂತೆ ಮಾಸ್ಕ್‌ ಧರಿಸದೆ, ಅಂತರ ಪಾಲಿಸದೆ ಮಾರುಕಟ್ಟೆಗೆ ಮುಗಿ ಬೀಳುತ್ತಿದ್ದರು. ಜನದಟ್ಟಣೆ ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಗಿತ್ತು. ಆದರೆ, ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗದುಗಿನ ಸ್ಟೇಷನ್ ರಸ್ತೆ, ರೋಟರಿ ವೃತ್ತ, ಭೂಮರೆಡ್ಡಿ ವೃತ್ತ, ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತ, ಮುಳಗುಂದ ನಾಕಾ, ಹುಯಿಲಗೋಳ ನಾರಾಯಣರಾವ್‌ ವೃತ್ತ, ಟಾಂಗಾ ಕೂಟ, ಪಿಬಿ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದೆ ಬಿಕೊ ಎನ್ನುತ್ತಿತ್ತು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಟಂಟಂಗಳು, ಆಟೊ, ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

ಭಾನುವಾರ ಕೋಳಿ, ಕುರಿ ಮಾಂಸ ಮತ್ತು ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ ಸೋಮವಾರ (ಮೇ 15) ಈದ್‌ ಉಲ್‌ ಫಿತ್ರ್ ಹಬ್ಬ ಇರುವುದರಿಂದ ಮಾಂಸ ಮಾರಾಟದ ಅಂಗಡಿಗಳ ಎದುರು ಜನದಟ್ಟಣೆ ಕಂಡುಬಂತು. ಬಡಾವಣೆಗಳ ಒಳಗಿನ ಚಿಕ್ಕ ದಿನಸಿ ಅಂಗಡಿಗಳು ಬೆಳಿಗ್ಗೆ ಸ್ವಲ್ಪ ಹೊತ್ತು ತೆರೆದಿದ್ದವು. 10 ಗಂಟೆಯ ನಂತರ ಇಡೀ ನಗರವೇ ಸ್ತಬ‌್ಧವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.