ADVERTISEMENT

ಮತ್ತಿಬ್ಬರಿಗೆ ಸೋಂಕು; ಸಕ್ರಿಯ ಪ್ರಕರಣ 18ಕ್ಕೆ ಏರಿಕೆ

ಒಂದು ವಾರದ ನಂತರ ಪಾಸಿಟಿವ್‌ ಪ್ರಕರಣ ವರದಿ; ಮತ್ತೆ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:09 IST
Last Updated 5 ಜೂನ್ 2020, 11:09 IST
ಮುಂಬೈನಿಂದ ರೈಲಿನ ಮೂಲಕ ಗುರುವಾರ ಗದಗ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು
ಮುಂಬೈನಿಂದ ರೈಲಿನ ಮೂಲಕ ಗುರುವಾರ ಗದಗ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು   

ಗದಗ: ಒಂದು ವಾರದಿಂದ ಒಂದೇ ಒಂದು ಪಾಸಿಟಿವ್‌ ಪ್ರಕರಣಗಳು ವರದಿಯಾಗದಿದ್ದ ಜಿಲ್ಲೆಯಲ್ಲಿ ಗುರುವಾರ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಇಬ್ಬರಲ್ಲಿ, ಸೋಂಕು ದೃಢಪಟ್ಟು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 44 ವರ್ಷದ ಪುರುಷ (ಪಿ–4082) ಮರಣ ಹೊಂದಿರುತ್ತಾರೆ. ಬೆಂಗಳೂರಿನಿಂದ ಜಿಲ್ಲೆಗೆ ಮರಳಿದ 54 ವರ್ಷದ ಪುರುಷನಲ್ಲಿ (ಪಿ–4079) ಸೋಂಕು ದೃಢಪಟ್ಟಿದೆ.

ನಗರದ ಹುಡ್ಕೊ ಕಾಲೊನಿ ನಿವಾಸಿಯಾದ ಇವರು, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೇ 27ರಂದು ಗದುಗಿನಿಂದ ಖಾಸಗಿ ವಾಹನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಎಚ್‌ಸಿಎಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲಿ ಅವರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿ ಅವರಿಗೆ ಸೊಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ADVERTISEMENT

ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮಕ್ಕೆ ಸೇರಿದವರು. ಈಗಾಗಲೇ ಜಿಲ್ಲಾಡಳಿತ ಗ್ರಾಮವನ್ನು ಕಂಟೈನ್ಮೆಂಟ್‌ ಪ್ರದೇಶವಾಗಿ ಘೋಷಿಸಿ, ಕಟ್ಟೆಚ್ಚರ ವಹಿಸಿದೆ. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಗುರುವಾರ ಲಕ್ಕುಂಡಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದರು. ಯಾವುದೇ ಕಾರಣಕ್ಕೂ ಜನರು ಮನೆ ಬಿಟ್ಟು ಹೊರಗೆ ಬರಬಾರದು. ಜನರಿಗೆ ಅವಶ್ಯಕ ಸಾಮಗ್ರಿಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಿಇಒ ಡಾ. ಆನಂದ ಕೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಎನ್‌ ಇದ್ದರು.

ಮುಂಬೈ ರೈಲಿನಲ್ಲಿ 65 ಮಂದಿ: ಗುರುವಾರ ಮುಂಬೈನಿಂದ ರೈಲಿನ ಮೂಲಕ 65 ಪ್ರಯಾಣಿಕರು ಜಿಲ್ಲೆಗೆ ಬಂದಿಳಿದರು. ಮೂರು ದಿನಗಳಲ್ಲಿ ಒಟ್ಟು 278 ಪ್ರಯಾಣಿಕರು ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದಾರೆ. ಜಿಲ್ಲಾಡಳಿತವು ಈ ಎಲ್ಲ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.