ಲಕ್ಷ್ಮೇಶ್ವರದ ರೈತರಿಗೆ ಬೆಳೆಹಾನಿ ಮತ್ತು ಬೆಳೆವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ರೈತರು ಮನವಿ ಸಲ್ಲಿಸಿದರು
ಲಕ್ಷ್ಮೇಶ್ವರ: ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆವಿಮೆ, ಬೆಳೆಹಾನಿ ಪರಿಹಾರ ಹಾಗೂ ರೈತರ ಸಾಲ ಮನ್ನಾ ಮಾಡಬೇಕು. ರೈತರ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಕೃಷಿಕ ಸಮಾಜ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಟನೆ ಸದಸ್ಯರು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರದ ಶಿಗ್ಲಿ ಕ್ರಾಸ್ ಹತ್ತಿರ ಸಂಸದ ಬಸವರಾಜ ಬೊಮ್ಮಾಯಿ ಅವರು ಗದಗ ನಗರಕ್ಕೆ ತೆರಳುವ ಸಂದರ್ಭದಲ್ಲಿ ರೈತರು ಮನವಿ ಸಲ್ಲಿಸಿದರು.
ಎಸ್.ಪಿ. ಪಾಟೀಲ ಮಾತನಾಡಿ, ‘ಹೆಸರು ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಅಕಾಲಿಕ ಮಳೆಯಿಂದಾಗಿ ಕಳೆದ ನಾಲ್ಕು ವರ್ಷದಿಂದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಮಾತನಾಡಿ, ‘2019ರಿಂದ ಇಲ್ಲಿಯವರೆಗೆ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ಹೊಸ ಫಲಾನುಭವಿ ರೈತರಿಗೆ ಅವಕಾಶ ದೊರೆತಿಲ್ಲ. 2025ರಲ್ಲಿ ನೊಂದಾಯಿಸಿದ ರೈತರಿಗೆ ಈ ಯೋಜನೆ ದೊರೆಯುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.
ಪಟ್ಟಣದ ಮುಖಂಡರು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಇತಿಹಾಸ ಪ್ರಸಿದ್ಧ ಕಾಳಿಕ ದೇವಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ತಾಲ್ಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ, ಬಸವರಾಜ ಜಾಲಗಾರ, ಅಭಯ ಜೈನ್, ಚಂದ್ರು ಮಾಗಡಿ, ಪರಶುರಾಮ ಮೈಲಾರಿ, ಈರಪಣ್ಣ ಮರಳಿಹಳ್ಳಿ, ನಾಗಯ್ಯ ಮಠಪತಿ, ಮುತ್ತು ನಿರಲಗಿ, ಮಲ್ಲಿಕಾರ್ಜುನ ನೀರಾಲೋಟಿ. ಮುತ್ತಣ್ಣಶೆಟ್ರ ವಡಕಣ್ಣವರ, ಜಿ.ಪಿ. ಮಾಡಳ್ಳಿ, ವಿರುಪಾಕ್ಷಪ್ಪ ವಡಕಣ್ಣವರ, ರುದ್ರಪ್ಪ ಚಾಕಲಬ್ಬಿ, ಜಿ.ಆರ್. ಪಾಟೀಲ, ರಾಚಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.