ADVERTISEMENT

ನರಗುಂದ | ಸಿಗದ ಬೆಳೆ ಪರಿಹಾರ: ನಿಲ್ಲದ ರೈತರ ಗೋಳು

ನಿರಂತರ ಮಳೆ, ಬೆಳೆ ಹಾನಿ: ಬೆಳೆವಿಮೆಯಲ್ಲಿ ಏಜೆಂಟರ ಗೋಲ್‌ಮಾಲ್‌– ಕಂಗಾಲಾದ ರೈತರು

ಬಸವರಾಜ ಹಲಕುರ್ಕಿ
Published 18 ಆಗಸ್ಟ್ 2025, 5:02 IST
Last Updated 18 ಆಗಸ್ಟ್ 2025, 5:02 IST
<div class="paragraphs"><p>ನರಗುಂದ ತಾಲ್ಲೂಕಿನಲ್ಲಿ ಜಲಾವೃತವಾದ ಗೋವಿನಜೋಳದ ಬೆಳೆ</p></div>

ನರಗುಂದ ತಾಲ್ಲೂಕಿನಲ್ಲಿ ಜಲಾವೃತವಾದ ಗೋವಿನಜೋಳದ ಬೆಳೆ

   

ನರಗುಂದ: ತಾಲ್ಲೂಕು ಅರೆನೀರಾವರಿ ಪ್ರದೇಶವಾಗಿದ್ದು ನರಗುಂದ, ಕೊಣ್ಣೂರ ಎರಡು ಹೋಬಳಿಗಳನ್ನು ಒಳಗೊಂಡಿದೆ, 32 ಗ್ರಾಮಗಳಿವೆ. ಇಲ್ಲಿನ ಜನರಿಗೆ ಕೃಷಿಯೇ ಮುಖ್ಯ ಉದ್ಯೋಗ. ಆದರೆ, ಎರಡು ವಾರದಿಂದ ಸುರಿದ ಮಳೆ ರೈತರನ್ನು ಸಂಪೂರ್ಣ ಕಂಗೆಡಿಸಿದೆ. ತಾಲ್ಲೂಕಿನ ರೈತರು ಪ್ರತಿವರ್ಷ ಅನಾವೃಷ್ಟಿ, ಅತಿವೃಷ್ಟಿ ಅಥವಾ ಪ್ರವಾಹ ಹೀಗೆ ಒಂದಿಲ್ಲೊಂದು ತೊಂದರೆಗೆ ಸಿಲುಕುತ್ತಲೇ ಇದ್ದಾರೆ. 

ಪೂರ್ವ ಮುಂಗಾರು ಉತ್ತಮವಾಗಿ ಆಗಿದ್ದರಿಂದ ರೈತರು ಹೆಸರು, ಮೆಕ್ಕೆಜೋಳ ಬಿತ್ತನೆ ಮಾಡಿದರು. ಬಿತ್ತನೆ ನಂತರ ಸಕಾಲಕ್ಕೆ ಮಳೆ ಬಾರದೇ ಅನಾವೃಷ್ಟಿ ತಲೆದೋರಿತು. ಇದರಿಂದ ಅಲ್ಪ ಪ್ರಮಾಣದಲ್ಲಿ ಬೆಳೆ ಬೆಳೆದು ಶೇ 50ರಿಂದ 60ರಷ್ಟು ಫಸಲು ಬರುವ ಭರವಸೆ ಇತ್ತು. ನಂತರ ನಿರಂತರ ಸುರಿದ ಮಳೆ, ತುಂಬಿ ಹರಿದ ಬೆಣ್ಣೆಹಳ್ಳದ ಪ್ರವಾಹಕ್ಕೆ ಹಳ್ಳಗಳ ಸಮೀಪದ ಜಮೀನುಗಳು ಜಲಾವೃತಗೊಂಡು ಬೆಳೆ ಹಾನಿ ಸಂಭವಿಸಿತು. ಉಳಿದ ಜಮೀನುಗಳ ಬೆಳೆಗಳು ಚೇತರಿಸಿಕೊಂಡಿದ್ದವು. ಆದರೆ, ಆಗಸ್ಟ್ ಮೊದಲ ವಾರ ಹೆಸರು ಬೆಳೆ ಕಟಾವು ಮಾಡಬೇಕು ಎನ್ನುವ ವೇಳೆಗೆ ಮತ್ತೆ ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.  

ADVERTISEMENT

ಬೆಳೆ ವಿಮೆ ಯಾರ ಲಾಭಕ್ಕೆ?: ರೈತರು ಪ್ರತಿ ವರ್ಷ ಕೇಂದ್ರ ಸರ್ಕಾರದ ಫಸಲ್‌ ಬಿಮಾ ಯೋಜನೆಯಡಿ ವಿಮಾ ಕಂತು ಪಾವತಿ ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ವಿಮೆ ಹಣ ಮಾತ್ರ ಸಮರ್ಪಕವಾಗಿ ಬರದೇ ಇರುವುದು ರೈತರಲ್ಲಿ ತೀವ್ರ ಆಕ್ರೋಶ ಉಂಟು ಮಾಡುತ್ತಿದೆ.

ಮೂರು ವರ್ಷಗಳ ಹಿಂದೆ ಬಂದಷ್ಟು ವಿಮಾ ಹಣ ಈಗ ಬರುತ್ತಿಲ್ಲ. ಇದು ಯಾವ ರೀತಿ ಬೆಳೆಹಾನಿ ಸಮೀಕ್ಷೆ? ಅಳತೆಯ ಮಾನದಂಡವೇನು? ಎಂಬುದು ಯಾರಿಗೂ ತಿಳಿಯದಂತಾಗಿದೆ. ಹೊಲದಲ್ಲಿ ಇರುವ ಬೆಳೆ ಹಾನಿಯಾಗಿದ್ದರೆ ಹಾಗೂ ಜಿಪಿಎಸ್ ದಾಖಲಾತಿ ಇದ್ದ ಬೆಳೆಗೆ ಮಾತ್ರ ವಿಮಾ ಪಾವತಿಯಾಗಬೇಕು. ಆದರೆ, ಆ ರೀತಿಯ ನಿಯಮಗಳನ್ನು ವಿಮೆ ಕಂತು ತುಂಬಿಸಿಕೊಂಡ ಕಂಪನಿಗಳು ಪಾಲನೆ ಮಾಡದೇ ಯಾವುದೋ ಒಂದು ನಿಯಮ ಬಳಸಿ ಬೇಕಾಬಿಟ್ಟಿಯಾಗಿ ಬೆರಳೆಣೆಕೆಯಷ್ಟು ಮಂದಿಗೆ ಮಾತ್ರ ವಿಮೆ ಹಣ ಜಮಾ ಆಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಏಜೆಂಟರ ಹಾವಳಿ: ನರಗುಂದ ತಾಲ್ಲೂಕಿನಲ್ಲಿ ನೇರವಾಗಿ ಆನ್‌ಲೈನ್‌ ಮೂಲಕ ವಿಮೆ ಕಂತು ಪಾವತಿ ಮಾಡಲಾಗುತ್ತಿತ್ತು. ಆದರೆ, ಕಳೆದ ಹಿಂಗಾರು ಸಂದರ್ಭದಲ್ಲಿ ಕಡಲೆ ಬೆಳೆಗೆ ವಿಮೆ ಹಣವನ್ನು ಕೆಲವು ಏಜೆಂಟ್‌ಗಳ ಮೂಲಕ ಶೇ 50:50ರ ಅನುಪಾತದಲ್ಲಿ ಪಾವತಿ ಮಾಡಲಾಗಿದೆ. ಅಂತಹ ರೈತರಿಗೆ ಈಚೆಗೆ ವಿಮೆ ಹಣ ಬಂದಿದೆ. ನಮಗೆ ಬಂದಿಲ್ಲ ಎಂದು ಸಂಕದಾಳದ ರೈತರು ಆರೋಪಿಸಿದ್ದಾರೆ.

ಬಾರದ ವಿಮೆ; ಆತಂಕದಲ್ಲಿ ರೈತರು: ನಾಲ್ಕೈದು ವರ್ಷಗಳಿಂದ ಮುಂಗಾರು, ಹಿಂಗಾರು ಹಂಗಾಮಿನ ಬೆಳೆಗಳಿಗೆ ನಿರಂತರ ವಿಮಾ ಕಂತು ಪಾವತಿಸಲಾಗುತ್ತಿದೆ. ಆದರೆ, ಬೆಳೆ ಹಾನಿಯಾದರೂ ವಿಮೆ ಹಣ ಬರುತ್ತಿಲ್ಲ. ಇದರಿಂದ ಪ್ರತಿವರ್ಷ ಕನಿಷ್ಠ ₹5 ಸಾವಿರದಿಂದ ₹10 ಸಾವಿರದವರೆಗೆ ವಿಮಾ ಕಂತು ತುಂಬುವುದೇ ಆಗಿದೆ. ಕೆಲವು ರೈತರಿಗೆ ಬರುತ್ತದೆ ಕೆಲವು ರೈತರಿಗೆ ಬರುವುದೇ ಇಲ್ಲ ಎಂದು ರೈತರು ತಾವು ತುಂಬಿದ ಹಣದ ಪಾವತಿಗಳನ್ನು ತೋರಿಸುತ್ತ ವಿಮಾ ಕಂಪನಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಸಂಪೂರ್ಣ ಬೆಳೆ ಹಾನಿ: ಎರಡು ವಾರಗಳಿಂದ ಸುರಿದ ಮಳೆಗೆ 18 ಸಾವಿರ ಹೆಕ್ಟೇರ್ ಹೆಸರು ಕಾಳು ಬೆಳೆ ಹಾನಿಯಾಗಿದೆ. ಜಮೀನುಗಳು ಜಲಾವೃತವಾಗಿವೆ. ಹೆಸರು ಕಾಳು ಅಲ್ಲಿಯೇ ಮೊಳಕೆ ಒಡೆಯುತ್ತಿದೆ. ಇದರಿಂದ ಈ ಬೆಳೆಗೆ ಬೆಳೆವಿಮೆಯಾಗಲಿ, ಸರ್ಕಾರದ ಬೆಳೆ ಹಾನಿ ಪರಿಹಾರವಾಗಲಿ ದೊರೆಯುವುದೇ ಎಂಬ ಪ್ರಶ್ನೆ ರೈತರಿಗೆ ಎದುರಾಗಿದೆ.

ಇದರ ಜೊತೆಗೆ 17,225 ಹೆಕ್ಟೇರ್ ಗೋವಿನಜೋಳ ಬಿತ್ತನೆಯಾಗಿದೆ. ಅದರಲ್ಲಿ ಶೇ 50ರಷ್ಟು ಬೆಳೆ ಜಲಾವೃತವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ರೈತರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಯೂರಿಯಾ ಸಹಿತ ಸಕಾಲಕ್ಕೆ ದೊರೆಯದೇ ಗೋವಿನಜೋಳ ಸುಧಾರಿಸದಂತಾಗಿದೆ. ಕೂಡಲೇ ಬೆಳೆವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬಾರದ ಬೆಳೆ ಹಾನಿ ಪರಿಹಾರ: ಜೂನ್‌ನಲ್ಲಿ ಅಬ್ಬರಿಸಿದ ಮಳೆಗೆ ಸುಮಾರು 800 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ಕೃಷಿ ಇಲಾಖೆ, ಕಂದಾಯ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಿವೆ. ಆದರೂ ಪರಿಹಾರ ಜಮಾ ಆಗಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.

ಯಾರು ಏನಂತಾರೆ? 

ಸಂಕಷ್ಟಕ್ಕೆ ದೂಡಿದ್ದಂತೂ ಸತ್ಯ: ನಿರಂತರ ಮಳೆ ಸುರಿದ ಕಾರಣ ಹೆಸರು ಬೆಳೆ ಹಾನಿಯಾಗಿದೆ. ಆದ್ದರಿಂದ ಈಗಾಗಲೇ ಹೆಚ್ಚಿನ ರೈತರು ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಅವರ ದೂರು, ಇತರೆ ಚರ್ಚೆಗೆ ವಿಮಾ ಕಂಪನಿ ಸಹಾಯವಾಣಿ ಸ್ಥಾಪಿಸಿದೆ. ದೂರು ಆಧರಿಸಿ ಕಂಪನಿ ಸಮೀಕ್ಷೆ ಮಾಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತದೆ. ವಿಮೆ ಕಂತು ಪಾವತಿಸದ ರೈತರ ಬೆಳೆ ಹಾನಿಯಾಗಿದ್ದರೆ ಅಂತಹ ರೈತರ ವಿವರ ಪಡೆದು ತಹಶೀಲ್ದಾರ್ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಮೆ ಏಜೆಂಟರ ಹಾವಳಿ ನಿಯಂತ್ರಣಕ್ಕೆ ರೈತರು ಸಹಕಾರ ನೀಡಿದರೆ ಅದನ್ನು ನಿಶ್ಚಿತವಾಗಿ ತಡೆಯಬಹುದು.
ಎಂ.ಎಸ್.ಕುಲಕರ್ಣಿ, ಕೃಷಿ ಸಹಾಯಕ ನಿರ್ದೇಶಕ, ನರಗುಂದ
ವಿಮಾ ಕಂಪನಿ ಜತೆಗೆ ಚರ್ಚೆ: ಮಳೆಗೆ ಹಾನಿ ಸಂಭವಿಸಿದೆ. ಕೃಷಿ ಇಲಾಖೆಯ ಮಾಹಿತಿ ಆಧರಿಸಿ ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ಮಾಡಲಾಗುವುದು. ಬೆಳೆ ವಿಮೆ ಬಿಡುಗಡೆ ಕುರಿತು ಸಂಬಂಧಿಸಿದ ವಿಮೆ ಕಂಪನಿ ಜೊತೆ ಚರ್ಚಿಸಲಾಗುವುದು. ಬೆಳೆ ವಿಮೆ ಎಲ್ಲ ರೈತರಿಗೆ ತಲುಪದಿರುವುದಕ್ಕೆ ಏಜೆಂಟರ ಹಾವಳಿ ಕಾರಣ ಎನ್ನುವ ರೈತರು ಅಂಥವರ ಪತ್ತೆಗೆ ಸಹಕರಿಸಿದರೆ ನಿಯಂತ್ರಣ ಮಾಡಲಾಗುವುದು.
ಶ್ರೀಶೈಲ ತಳವಾರ, ತಹಶೀಲ್ದಾರ್, ನರಗುಂದ
ಬೆಳೆ ವಿಮೆ ಹಣ ಬಂದಿಲ್ಲ: ನಿರಂತರ ಬೆಳೆ ವಿಮೆ ಕಂತು ಪಾವತಿಸಿದರೂ ನಮಗೆ ಬೆಳೆ ವಿಮೆ ಹಣ ಬಂದಿಲ್ಲ. ಕಡಿಮೆ ಬೆಳೆ ಬೆಳೆದಂತಹ ಬೆಳೆಗೆ ಮಾತ್ರ ವಿಮೆ ಸಿಗುತ್ತದೆ. ಇಲ್ಲಿ ಮೋಸ ನಡೆಯುತ್ತಿದೆ. ವಿಮಾ ಕಂಪನಿ ವಿರುದ್ಧ ಹೋರಾಟದ ಅಗತ್ಯವಿದೆ.
ಅರ್ಜುನಪ್ಪ ಮಾನೆ, ರೈತ, ನರಗುಂದ
ನನಗ್ಯಾಕೆ ವಿಮೆ ಸಿಕ್ಕಿಲ್ಲ: ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೆಲವರಿಗೆ ಕಡಲೆ ಬೆಳೆ ವಿಮೆ ಬಿಡುಗಡೆಯಾಗಿದೆ. ನಾನು ಕಂತು ಪಾವತಿಸಿದರೂ ವಿಮೆ ಬಂದಿಲ್ಲ? ವಿಮಾ ಕಂಪನಿ ನಿಖರ ಬೆಳೆ ಹಾನಿ ಸಮೀಕ್ಷೆ ಮಾಡಿ ಹಣ ನೀಡಬೇಕು
ರವೀಂದ್ರಗೌಡ ಪಾಟೀಲ, ಬನಹಟ್ಟಿ
ಬೇಸರ ತರಿಸಿದೆ: ಕಳೆದ ಸಾಲಿನ ಮುಂಗಾರು ಹಂಗಾಮಿನ ವಿಮೆ ಬಿಡುಗಡೆಯಾಗಿದೆ. ಆದರೆ ಕೆಲವು ರೈತರಿಗೆ ಮಾತ್ರ ಬಂದಿರುವುದು ಬೇಸರ ತರಿಸಿದೆ. ವಿಮಾ ಕಂಪನಿ ಸಮರ್ಪಕವಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿ ಬೆಳೆ ವಿಮೆ ಬಿಡುಗಡೆ ಮಾಡಬೇಕು
ಲಿಂಗನಗೌಡ ಪಾಟೀಲ, ಬೈರನಹಟ್ಟಿ
ರೈತರಿಗೆ ಅನ್ಯಾಯ: ನಿರಂತರ ಮಳೆಯಿಂದ ಕಂಗಾಲಾಗಿದ್ದೇವೆ. ಈಗಷ್ಟೇ ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ವಿಮೆ ಬಿಡುಗಡೆಯಾಗಿದೆ. ಆದರೆ ಏಜೆಂಟ್‌ಗಳ ಮೂಲಕ ಕಂತು ಪಾವತಿ ಮಾಡಿದ ಹಣ ಮಾತ್ರ ಬಿಡುಗಡೆಯಾಗಿದೆ. ನಮಗೇಕೆ ಬಿಡುಗಡೆಯಾಗಿಲ್ಲ. ಇದರಲ್ಲಿ ಏಜೆಂಟರು, ಕಂಪನಿ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿವೆ
ಶರಣಪ್ಪ ನಾಯ್ಕ, ಸಂಕದಾಳ
ಎಕರೆಗೆ ₹50 ಸಾವಿರ ಪರಿಹಾರ ಕೊಡಿ: ಎರಡು ವಾರದ ನಿರಂತರ ಮಳೆಗೆ ಹೆಸರು, ಗೋವಿನಜೋಳ ಸಂಪೂರ್ಣ ಹಾನಿಯಾಗಿದೆ. ಆದ್ದರಿಂದ ವಾಸ್ತವ ಪರಿಸ್ಥಿತಿ ಅರಿತು ಎಕರೆಗೆ ₹50 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು
ವಿಠಲ ಜಾಧವ, ರೈತ ಮುಖಂಡ, ನರಗುಂದ
ಟೋಲ್‌ ಫ್ರೀ ನಂಬರ್‌ ಸ್ಥಾಪನೆ: ಗದಗ ಜಿಲ್ಲೆಯಲ್ಲಿ ಓರಿಯೆಂಟಲ್ ಬೆಳೆ ವಿಮೆ ಕಂಪನಿ ವಿಮಾ ಕಂತು ಭರಣ ಮಾಡಿಕೊಳ್ಳುತ್ತಿದೆ. ಏಜೆಂಟರ ಹಾವಳಿ ಬಗ್ಗೆ ರೈತರು ದೂರು ನೀಡುತ್ತಿದ್ದಾರೆ. ಅದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ರೈತರು ಅಂಥವರ ಸುಳಿವು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಈ ಸಾಲಿನ ಮುಂಗಾರು ಹಂಗಾಮಿನ ಬೆಳೆಗೆ ವಿಮಾ ಕಂತು ಪಾವತಿಸಿದವರು ಟೋಲ್ ಫ್ರೀ ನಂ 18004256678ಕ್ಕೆ ಕರೆ ಮಾಡಿ ದೂರು ನೀಡಬಹುದು
ಕರಿಯಪ್ಪ ಹಿರೇಕುರುಬರ, ನರಗುಂದ ತಾಲ್ಲೂಕು ಪ್ರತಿನಿಧಿ, ಓರಿಯೆಂಟಲ್ ಕಂಪನಿ

ಬೆಳೆ ವಿಮೆ ಕಂತು ಪಾವತಿ:

ಈ ಸಾಲಿನ ಮುಂಗಾರು ಹಂಗಾಮಿನಲ್ಲಿ 4,525 ರೈತರು ಹೆಸರು ಬೆಳೆಗೆ, ಗೋವಿನಜೋಳಕ್ಕೆ 1,497 ಮಂದಿ ರೈತರು ವಿಮಾ ಕಂತು ಪಾವತಿ ಮಾಡಿದ್ದಾರೆ. ಆದರೆ, ಕೆಲವು ರೈತರು ಪ್ರತಿವರ್ಷ ಕಂತು ಪಾವತಿಸಿ ಬೇಸರಗೊಂಡು ಈ ಬಾರಿ ವಿಮೆ ಮಾಡಿಸಿಲ್ಲ. ಆದರೆ, ವಿಮಾ ಕಂಪನಿ ಈ ಸಲ ನಿರಂತರ ಬೆಳೆ ಹಾನಿ ಕಂಡು ಸಹಾಯವಾಣಿ ಮೂಲಕ ದೂರು ಹಾಗೂ ಹಾನಿ ವಿವರ ಸಲ್ಲಿಸುವಂತೆ ಕೃಷಿ ಇಲಾಖೆ ಮೂಲಕ ಪ್ರಕಟಣೆ ಹೊರಡಿಸಿದೆ. ಆದರೆ ಬೆಳೆ ವಿಮೆ ಪಾವತಿಸದೇ ಇರುವವರು ಹಾನಿಗೆ ಯಾವ ರೂಪದಲ್ಲಿ ಪರಿಹಾರ ಪಡೆಯಬೇಕೆಂಬುದು ಮಾತ್ರ ತಿಳಿಯದಂತಾಗಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.