ಗದಗ/ಹೊಸಪೇಟೆ: ವಿಜಯನಗರ ಜಿಲ್ಲೆ ತುಂಗಭದ್ರಾ ಅಣೆಕಟ್ಟೆಗೆ ಅಳವಡಿಸಬೇಕಿರುವ 19ನೇ ಕ್ರೆಸ್ಟ್ ಗೇಟ್‌ನ್ನು ಗದಗಿನ ಅಡವಿಸೋಮಾಪುರ ಗ್ರಾಮದ ಬಳಿ 15 ದಿನಗಳಲ್ಲಿ ನಿರ್ಮಿಸಲಾಗಿದ್ದು, ಶನಿವಾರ ಹೊಸಪೇಟೆ ತಲುಪಿತು.
‘ಗುಜರಾತ್‌ನ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಯು ನಿರ್ಮಿಸಿರುವ ಗೇಟ್ 20 ಅಡಿ ಅಗಲ ಮತ್ತು 60 ಅಡಿ ಉದ್ದವಿದೆ. ನಾಲ್ಕು ಭಾಗಗಳಲ್ಲಿ ವಿಂಗಡಿಸಿ ಸಿದ್ಧಪಡಿಸಲಾಗಿದೆ. ಇದರ ಒಟ್ಟು ತೂಕ 49 ಟನ್ ಇದೆ’ ಎಂದು ಕಂಪನಿಯ ವ್ಯವಸ್ಥಾಪಕ ಋಷಿಕೇಶ್ ತಿಳಿಸಿದರು.
‘ಅಣೆಕಟ್ಟಿಗೆ ಗೇಟ್‌ನ್ನು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅಳವಡಿಸಲಾಗುವುದು. ಅಣೆಕಟ್ಟೆಯಲ್ಲಿ ಸದ್ಯ 40 ಟಿಎಂಸಿ ಅಡಿ ನೀರಿದ್ದು, ಪ್ರತಿ ದಿನ 3 ಟಿಎಂಸಿ ಅಡಿ ನೀರು ಹೊರ ಬಿಡಲಾಗುತ್ತಿದೆ. ಪ್ರತಿ ದಿನ ಒಳಹರಿವು ಹೆಚ್ಚಿರುವ ಕಾರಣ ಸದ್ಯದ ಸ್ಥಿತಿಯಲ್ಲಿ ಗೇಟ್ ಅಳವಡಿಸಲಾಗದು’ ಎಂದು ತುಂಗಭದ್ರಾ ಅಣೆಕಟ್ಟು ಮಂಡಳಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ತಿಳಿಸಿದರು.
27ರಂದು ಐಸಿಸಿ ಸಭೆ: ‘ನೀರಾವರಿ ಸಲಹಾ ಸಮಿತಿಯ (ಐಸಿಸಿ) ಸಭೆ ಜೂನ್ 27ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಕಾಲುವೆಗಳಿಗೆ ನೀರು ಹರಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು. ಈ ಬಾರಿ 80 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹಿಸಲು ನಿರ್ಧರಿಸಲಾಗಿದೆ. ಬೇಗನೇ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ, ದೊಡ್ಡ ಪ್ರಮಾಣದಲ್ಲಿ ನೀರು ನದಿಗೆ ಹರಿದು ಪೋಲಾಗಬಹುದು’ ಎಂದು ರೈತರು ತಿಳಿಸಿದ್ದಾರೆ.
ಗದಗ ಸಮೀಪದ ಅಡವಿಸೋಮಾಪುರದಲ್ಲಿ ಜುಲೈನಿಂದ ಅಣೆಟ್ಟಿನ ಇತರೆ 32 ಗೇಟ್‌ಗಳು ನಿರ್ಮಾಣವಾಗಲಿವೆ. ಪ್ರತಿ ತಿಂಗಳು 3 ರಿಂದ 4 ಗೇಟ್ ನಿರ್ಮಾಣವಾಗುತ್ತವೆ.ಒ.ಆರ್.ಕೆ.ರೆಡ್ಡಿ, ಕಾರ್ಯದರ್ಶಿ ತುಂಗಭದ್ರಾ ಅಣೆಕಟ್ಟು ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.