ADVERTISEMENT

ಗದಗ | ‘ಆತ್ಮಕಲ್ಯಾಣದ ಜತೆಗೆ ಸಮಾಜ ಕಲ್ಯಾಣ’

ಶಿವಾನುಭವದಲ್ಲಿ ಅಕ್ಕಮಹಾದೇವಿ ಸ್ವರ ಗೀತಾಂಜಲಿ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 5:05 IST
Last Updated 12 ಫೆಬ್ರುವರಿ 2022, 5:05 IST
ವರ್ತಕ ಮಹಾಂತಣ್ಣ ಬಡ್ನಿ, ಡಾ.ರಾಜಶೇಖರ ಬಳ್ಳಾರಿ ಅವರನ್ನು ತೋಂಟದ ಸಿದ್ಧರಾಮ ಶ್ರೀಗಳು ಸನ್ಮಾನಿಸಿದರು
ವರ್ತಕ ಮಹಾಂತಣ್ಣ ಬಡ್ನಿ, ಡಾ.ರಾಜಶೇಖರ ಬಳ್ಳಾರಿ ಅವರನ್ನು ತೋಂಟದ ಸಿದ್ಧರಾಮ ಶ್ರೀಗಳು ಸನ್ಮಾನಿಸಿದರು   

ಗದಗ: ಕಿರಿಯ ವಯಸ್ಸಿನಲ್ಲೇ ಅಧ್ಯಾತ್ಮದ ಉತ್ತುಂಗ ತಲುಪಿದ್ದ ಕನ್ನಡದ ಪ್ರಥಮ ಕವಯತ್ರಿ ಅಕ್ಕಮಹಾದೇವಿ ಅವರ ವಚನಗಳು ಆತ್ಮಕಲ್ಯಾಣದ ಜತೆಗೆ ಸಮಾಜಕಲ್ಯಾಣಕ್ಕೂ ಅಣಿಯಾಗಬೇಕೆಂಬ ಸಂದೇಶ ಹೊಂದಿವೆ ಎಂದು ಡಂಬಳ-ಗದಗ ತೋಂಟದಾರ್ಯಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2,575ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿ ಅವರ ಬದುಕೇ ಪವಾಡಸದೃಶವಾಗಿದ್ದು, ಸದ್ಯ ಬಿಡುಗಡೆಗೊಂಡಿರುವ ಅಕ್ಕಮಹಾದೇವಿ ಸ್ವರ ಗೀತಾಂಜಲಿ ಕೃತಿಯಲ್ಲಿ ಅಕ್ಕನ ಕುರಿತು ಸುಶ್ರಾವ್ಯ ಪದ್ಯಗಳು ಮೂಡಿಬಂದಿವೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಅಕ್ಕನ ಬಳಗಗಳಿದ್ದು, ಸ್ತ್ರೀಯರನ್ನು ಸಂಘಟನೆಗೊಳಿಸುವುದು, ಸಂಸ್ಕಾರ ನೀಡುವುದರ ಜತೆಗೆ ಶರಣ ಸಂದೇಶಗಳನ್ನು ಪ್ರಸಾರಗೊಳಿಸುವಲ್ಲಿ ಕೂಡ ಇವುಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ADVERTISEMENT

ಗಿರಿಜಕ್ಕ ಧರ್ಮರೆಡ್ಡಿ ಸಂಪಾದಿಸಿದ ‘ಅಕ್ಕಮಹಾದೇವಿ ಸ್ವರ ಗೀತಾಂಜಲಿ’ ಕೃತಿ ಬಿಡುಗಡೆಗೊಳಿಸಲಾಯಿತು. ಶಿಕ್ಷಕಿ ಜ್ಯೋತಿ ಹೇರಲಗಿ ಪುಸ್ತಕದ ಕುರಿತು ಮಾತನಾಡಿದರು.

ಜೆ.ಸಿ ಪ್ರೌಢಶಾಲೆಯ ಮಕ್ಕಳಿಂದ ‘ಅನುಭವ ಮಂಟಪ’ ನಾಟಕ ಪ್ರಸ್ತುತಗೊಂಡಿತು. ಮುಳಗುಂದ ಅರ್ಬನ್ ಬ್ಯಾಂಕ್‌ನ ನಿರ್ದೇಶಕರಾಗಿ ಆಯ್ಕೆಯಾದ ಮಹಾಂತಣ್ಣ ಬಡ್ನಿ, ಐ.ಎಂ.ಎ ಆಕಾಡೆಮಿ ಆಫ್ ಮೆಡಿಕಲ್ ಸ್ಪೆಶಾಲಿಟೀಸ್‍ನಿಂದ ಫೆಲೋಶಿಪ್ ಪಡೆದ ಡಾ.ರಾಜಶೇಖರ ಬಳ್ಳಾರಿ ಅವರನ್ನೂ ಸನ್ಮಾನಿಸಲಾಯಿತು.

ಸೃಜನ ಬಿನ್ನಾಳ ಧರ್ಮಗ್ರಂಥ ಪಠಿಸಿದರು. ನಿತಿನ್ ಪೂಜಾರ ವಚನ ಚಿಂತನ ನಡೆಸಿದರು. ಲಿಂ.ಅನ್ನಪೂರ್ಣ ತುಪ್ಪದ ಸ್ಮರಣಾರ್ಥ ಡಾ.ಎಸ್.ಎಸ್ ಅಕ್ಕಮಹಾದೇವಿ ಹಾಗೂ ಹೇಮಂತ ಆನೂರಶೆಟ್ರ ಭಕ್ತಿ ಸೇವೆ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್ ಪಾಟೀಲ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಮಲ್ಲಿಕಾರ್ಜುಣ ಖಂಡೆಮ್ಮನವರ, ವೀರೇಶ ಬುಳ್ಳಾ, ಸೋಮಶೇಖರ ಪುರಾಣಿಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.