ADVERTISEMENT

ಮಕ್ಕಳ ಆರೋಗ್ಯ ತಪಾಸಣೆಗೆ ಕ್ರಮವಹಿಸಿ– ಜಿಲ್ಲಾಧಿಕಾರಿ ಸೂಚನೆ

ಆಗಸ್ಟ್‌ 23ರಿಂದ ಪ್ರೌಢಶಾಲಾ ತರಗತಿ ಆರಂಭ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 16:21 IST
Last Updated 18 ಆಗಸ್ಟ್ 2021, 16:21 IST
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮಾತನಾಡಿದರು
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮಾತನಾಡಿದರು   

ಗದಗ: ‘ಆ.23ರಿಂದ ಪ್ರೌಢಶಾಲಾ ತರಗತಿಗಳು ಆರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿರುವ 15,000 ಪ್ರೌಢಶಾಲಾ ವಿದ್ಯಾರ್ಥಿಗಳೂ ಸೇರಿದಂತೆ 18 ವರ್ಷದೊಳಗಿನ 3 ಲಕ್ಷ ಮಕ್ಕಳ ಆರೋಗ್ಯ ತಪಾಸಣೆಗೆ ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ನಡೆದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಕ್ರಿಯಾಯೋಜನೆ ರೂಪಿಸಿ, ನಿಗದಿತ ಅವಧಿಯೊಳಗೆ ತಪಾಸಣೆ ಕಾರ್ಯ ಪೂರ್ಣಗೊಳಿಸಬೇಕು. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಹೋಬಳಿ ಕೇಂದ್ರ ಸೇರಿದಂತೆ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಪ್ರತಿ ಕೇಂದ್ರದಲ್ಲೂ ಆರೋಗ್ಯ ತಪಾಸಣೆ ಶಿಬಿರ ನಡೆಸಬೇಕು’ ಎಂದು ತಿಳಿಸಿದರು.

ADVERTISEMENT

‘ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಆರೋಗ್ಯ ತಪಾಸಣೆ ಕಾರ್ಯವನ್ನು ನಿರ್ವಹಿಸಬೇಕು’ ಎಂದು ತಿಳಿಸಿದರು.

‘ಆರೋಗ್ಯ ತಪಾಸಣೆಯನ್ನು ಆಯಾ ಗ್ರಾಮದ ಶಾಲೆಗಳಲ್ಲಿಯೇ ಏರ್ಪಡಿಸಬೇಕು. ಅಂಗನವಾಡಿ ಮಕ್ಕಳನ್ನು ಸಹ ಶಾಲೆಗೆ ಕರೆತಂದು ತಪಾಸಣೆಗೆ ಒಳಪಡಿಸಬೇಕು’ ಎಂದರು.

‘ಆ.23ರಿಂದ ಶಾಲಾ ತರಗತಿಗಳನ್ನು ಆರಂಭಿಸಲು ಸರ್ಕಾರ ಸೂಚಿಸಿದ್ದು, ಶಾಲೆ ಆರಂಭಕ್ಕೂ ಮುನ್ನ ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವುದರ ಜತೆಗೆ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿಸಬೇಕು. ಯಾವ ವಿದ್ಯಾರ್ಥಿಗೂಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಒತ್ತಡ ಹೇರಬಾರದು. ಹಾಜರಾತಿಯಿಂದ ವಿನಾಯಿತಿ ಇದೆ ಎಂಬುದನ್ನು ತಿಳಿಸಬೇಕು. ಭೌತಿಕ ತರಗತಿಗಳ ಜತೆಗೆ ನಿರಂತರವಾಗಿ ಆನ್‌ಲೈನ್ ತರಗತಿಗಳನ್ನು ನಡೆಸಬೇಕು’ ಎಂದು ಹೇಳಿದರು.

ಡಿಎಚ್‌ಒ ಸತೀಶ ಬಸರಿಗಿಡದ, ಡಿಡಿಪಿಐ ಬಸವಲಿಂಗಪ್ಪ ಜಿ.ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ಎ., ಆರ್‌ಸಿಎಚ್‌ ಅಧಿಕಾರಿ ಬಿ.ಎಂ.ಗೋಜನೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸಿಡಿಪಿಒಗಳು ಇದ್ದರು.

‘ತೀವ್ರಗತಿಯಲ್ಲಿತಪಾಸಣೆ ನಡೆಸಿ’

‘ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲ ಮಕ್ಕಳ ಆರೋಗ್ಯ ತಪಾಸಣೆಯನ್ನು ತೀವ್ರಗತಿಯಲ್ಲಿ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್‌. ಸೂಚಿಸಿದರು.

‘ಆರೋಗ್ಯ ತಪಾಸಣೆಗೆ ಗುರುತಿಸಲಾದ ಸಮಯ ಹಾಗೂ ದಿನಾಂಕಗಳಿಗೆ ಎರಡು ದಿನ ಮುಂಚಿತವಾಗಿ ಅಂಗನವಾಡಿ, ಆಶಾ ಹಾಗೂ ಮಹಿಳಾ ಆರೋಗ್ಯ ಕಾರ್ಯಕರ್ತೆಯರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ನಿಯೋಜಿತ ಮುಂಚೂಣಿ ಕಾರ್ಯಕರ್ತರು ಆರೋಗ್ಯ ತಪಾಸಣಾ ಕೇಂದ್ರಗಳಲ್ಲಿ ನಿಗದಿತ ದಿನಾಂಕಗಳಂದು ಕಡ್ಡಾಯವಾಗಿ ಭಾಗವಹಿಸಿ, ಎಲ್ಲ ಫಲಾನುಭವಿಗಳನ್ನೂ ಕರೆತರಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.