ADVERTISEMENT

ಎಪಿಕ್‌ ಕಾರ್ಡ್‌ಗೆ ‘ಆಧಾರ್‌’ ಜೋಡಿಸಿ

ಮತಗಟ್ಟೆ ಕೇಂದ್ರಗಳಲ್ಲಿ ನೋಂದಣಿ ಕಾರ್ಯಕ್ರಮ– ಡಿಸಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:43 IST
Last Updated 15 ನವೆಂಬರ್ 2022, 5:43 IST
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮಾತನಾಡಿದರು. ಉಪವಿಭಾಗಾಧಿಕಾರಿ ಅನ್ನಪೂರ್ಣ, ಎಡಿಸಿ ಮಾರುತಿ ಎಂ.ಪಿ. ಇದ್ದಾರೆ
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮಾತನಾಡಿದರು. ಉಪವಿಭಾಗಾಧಿಕಾರಿ ಅನ್ನಪೂರ್ಣ, ಎಡಿಸಿ ಮಾರುತಿ ಎಂ.ಪಿ. ಇದ್ದಾರೆ   

ಗದಗ: ‘ಮತದಾನ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಮಾಡಿಸುವ ಮೂಲಕ ನಿಖರ ಮತದಾರರ ಪಟ್ಟಿ ತಯಾರಿಸಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮನವಿ ಮಾಡಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಿಎಲ್‌ಒಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ ಬಾಗಿಲಿಗೆ ಬಂದಾಗ ನಿಖರ ಮಾಹಿತಿ ನೀಡಬೇಕು. ದೃಢೀಕರಣಕ್ಕೆ ಬೇರೆ ದಾಖಲೆ ನೀಡುವ ಬದಲು ಆಧಾರ್‌ ನೀಡಿದರೆ ಹೆಚ್ಚಿನ ಅನುಕೂಲ ಆಗಲಿದೆ. ಮತದಾನ ಚೀಟಿಗೆ ಆಧಾರ್‌ ಲಿಂಕ್‌ ಕಡ್ಡಾಯವಲ್ಲ. ಆದರೆ, ಆಧಾರ್ ಸಂಖ್ಯೆ ಜೋಡಿಸುವುದರಿಂದ ಮತದಾರರ ಪಟ್ಟಿಯನ್ನು ನಿಖರವಾಗಿ ಪರಿಷ್ಕರಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಮತದಾರ ಪಟ್ಟಿ ಪರಿಷ್ಕರಣೆಯ ಪೂರ್ವಾವಧಿಯಲ್ಲಿ ಒಟ್ಟು 16,256 ಮತದಾರರ ಹೆಸರನ್ನು ಕೈ ಬಿಡಲಾಗಿದೆ. ಹೊಸದಾಗಿ 9,246 ಮತದಾರರ ಹೆಸರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ದೃಢೀಕರಣ ಸಂಬಂಧ ಆಧಾರ್ ಅಥವಾ ಇನ್ನಿತರೆ 11 ದಾಖಲೆಗಳನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಕರಡು ಪಟ್ಟಿ ಪ್ರಕಟಣೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಒಟ್ಟು 959 ಮತಗಟ್ಟೆಗಳು ಇದ್ದವು. ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯದ ನಂತರ 1,500 ಮತದಾರರ ಒಳಗೆ ಇದ್ದ ನಾಲ್ಕು ಮತಗಟ್ಟೆಗಳನ್ನು ಕಡಿಮೆಗೊಳಿಸಲಾಗಿದೆ. 1 ಮತಗಟ್ಟೆಯನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 956 ಮತಗಟ್ಟೆಗಳು ಇವೆ. ಎಲ್ಲ ಮತಗಟ್ಟೆಗಳಿಗೆ ಬಿಎಲ್‌ಒಗಳನ್ನು ನೇಮಕ ಮಾಡಲಾಗಿದೆ. ಮತ
ದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಕಾರ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆಯಲ್ಲಿ ಸ್ವೀ ಪ್ ಸಮಿತಿ ಜರುಗಿಸಲಾಗಿದೆ ಎಂದು ತಿಳಿಸಿದರು.

2023 ಜನೇವರಿಗೆ 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಈ ಅವಧಿಯಲ್ಲಿ ತಮ್ಮ ಹೆಸರು
ಗಳನ್ನು ನಮೂನೆ 6ರಲ್ಲಿ ಸಲ್ಲಿಸಬಹುದು. 2023ನೇ ವರ್ಷದ ಅರ್ಹತಾ ದಿನಾಂಕಗಳಾದ ಏಪ್ರಿಲ್ 1, ಜುಲೈ 1 ಅಥವಾ ಅಕ್ಟೋಬರ್ 1ಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರು, ಕರಡು ಮತದಾರ ಪಟ್ಟಿ ಪ್ರಕಟಣೆ ದಿನಾಂಕದಿಂದ ನಮೂನೆ 6 ರಲ್ಲಿ ಸೇರ್ಪಡೆ
ಗೊಳಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅರ್ಜಿಗಳನ್ನು ಆಯಾ ತ್ರೈಮಾಸಿಕಗಳಲ್ಲಿ ಅರ್ಹತೆಯನ್ನು ಪರಿಶೀಲಿಸಿ ನೋಂದಣಿ
ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ನಮೂನೆ 7 ರಲ್ಲಿ ಅರ್ಜಿ ಸಲ್ಲಿಸಬೇಕು. ಮತದಾರರ ವಿಳಾಸ ಬದಲಾವಣೆ ಇದ್ದಲ್ಲಿ, ಯಾವುದೇ ತಿದ್ದುಪಡಿಗಳಿಲ್ಲದೇ ಬದಲಿ ಮತದಾರರ ಗುರುತಿನ ಚೀಟಿಯ ಅವಶ್ಯಕತೆ ಇದ್ದಲ್ಲಿ ನಮೂನೆ 8ರಲ್ಲಿ ಅರ್ಜಿ
ಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ., ಮುಂಡರಗಿ ತಹಶೀಲ್ದಾರ್‌ ಶ್ರುತಿ ಇದ್ದರು.

ವಿಶೇಷ ನೋಂದಣಿ ಅಭಿಯಾನ

ಜಿಲ್ಲಾಡಳಿತದಿಂದ ನ.20 ಹಾಗೂ ಡಿಸೆಂಬರ್ 3 ಮತ್ತು 4ರಂದು ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ತಿಳಿಸಿದರು.

‘ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಅರ್ಹರು ಹಾಗೂ 18 ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ 6ರಲ್ಲಿ ಸಂಬಂಧಿಸಿದ ಬಿಎಲ್‌ಒಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.