ನರಗುಂದ: ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಸರ್ಕಾರಿ ನೌಕರರಿಗೆ, ಕನ್ನಡ ಮನಸ್ಸುಗಳಿಗೆ ಸರ್ಕಾರ ಸೂಕ್ತ ಭದ್ರತೆ ಹಾಗೂ ಪ್ರತ್ಯೇಕ ಗಡಿ ನೌಕರರ ಸುರಕ್ಷತಾ ಕಾಯ್ದೆ ಜಾರಿಗೆ ತರಬೇಕು. ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಒತ್ತಾಯಿಸಿದರು.
ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಡೆದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣಾರ್ಥ ಶ್ರೀ ಶಾಂತಲಿಂಗ ಸ್ವಾಮೀಜಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು
‘ಹಿಂದೆ ಬೆಳಗಾವಿಯಲ್ಲಿ ಸಾರಿಗೆ ನಿರ್ವಾಹಕನ ಮೇಲೆ ಮರಾಠಿಗರು ದರ್ಪ ತೋರಿ ದೈಹಿಕ ಹಲ್ಲೆ ಮಾಡಿದ್ದರು. ಇದೀಗ ಬೆಳಗಾವಿ ತಾಲ್ಲೂಕಿನ ಕಿಣೆಯ ತಿಪ್ಪಣ್ಣ ಡೋಕ್ರೆ ಎನ್ನುವ ವ್ಯಕ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಗ್ರಾಮ ಪಂಚಾಯತಿ ಪಿಡಿಒ ನಾಗೇಂದ್ರ ಪತ್ತಾರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವುದು ಖಂಡನೀಯ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕನ್ನಡ ಉಪನ್ಯಾಸಕ ಎಸ್.ಎಸ್.ಪೂಜಾರ ಮಾತನಾಡಿ, ‘ಬಸವರ ಸಮನ್ವಯ ದೃಷ್ಠಿ, ಅಲ್ಲಮ ಪ್ರಭುವಿನ ಪೂರ್ಣದೃಷ್ಠಿಗಳೆರಡರ ಸಾಕ್ಷಿ ಸಂಗಮವಾಗಿದ್ದ ಹಾನಗಲ್ ಕುಮಾರ ಶಿವಯೋಗಿಗಳಾಗಿದ್ದರು. ತಮ್ಮ ಜೀವನದುದ್ದಕ್ಕೂ ಸಮಾಜಕ್ಕಾಗಿಯೆ ಬದುಕಿದ ಅವರ ಜೀವನವೇ ನಮಗೆ ಆದರ್ಶ’ ಎಂದರು.
ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಶೋಭಾ ಆಡಿನ ಹಾಗೂ ನರಗುಂದ ಕ.ಸಾ.ಪದ ಕಾರ್ಯದರ್ಶಿಯಾಗಿ ಆಯ್ಕೆಯಾದ ರಮೇಶ ಐನಾಪೂರ ಅವರನ್ನು ಸತ್ಕರಿಸಲಾಯಿತು.
ನರಗುಂದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ಹನಮಂತಗೌಡ್ರ, ನಿವೃತ್ತ ಉಪತಹಶೀಲ್ದಾರ್ ವಿ.ಜಿ.ಐನಾಪೂರ, ಉಣಕಲ್ ಬಸಯ್ಯ ಹಿರೇಮಠ, ಹೆಸ್ಕಾಂ ಸಹಾಯಕ ಎಂಜಿನಿಯರ್ ವಿಶ್ವನಾಥ ಶಿರಹಟ್ಟಿಮಠ, ಶಾಂತಪ್ಪ ಆಡಿನ, ವೀರಯ್ಯ ವಸ್ತ್ರದ ಇದ್ದರು. ಆರ್.ಬಿ.ಚಿನಿವಾಲರ ನಿರೂಪಿಸಿದರು. ಮಹಾಂತೇಶ ಹಿರೇಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.